ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 1 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿದೆ.
ಮೊದಲ ಇನಿಂಗ್ಸ್ ನಲ್ಲಿ ಭಾರತ ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್ ಸಾಹಸದ ಬ್ಯಾಟಿಂಗ್ ನಿಂದಾಗಿ 262 ರನ್ ಗಳಿಸಲು ಶಕ್ತವಾಯಿತು. ಆಸೀಸ್ ಮೊದಲ ಇನಿಂಗ್ಸ್ ನಲ್ಲಿ 263 ಕ್ಕೆ ಆಲೌಟ್ ಆಗಿತ್ತು. ಇದರಿಂದಾಗಿ ಟೀಂ ಇಂಡಿಯಾ 1 ರನ್ ನಿಂದ ಹಿಂದೆ ಬಿತ್ತು. ಭಾರತದ ಪರ ನಾಯಕ ರೋಹಿತ್ ಶರ್ಮಾ 32 ರನ್ ಗಳಿಗೆ ಔಟಾದರೆ, ವಿರಾಟ್ ಕೊಹ್ಲಿ 44 ರನ್ ಗಳಿಸಿದಾಗ ವಿವಾದಾತ್ಮಕ ಎಲ್ ಬಿಡಬ್ಲ್ಯು ಔಟಾಗಿ ನಿರ್ಗಮಿಸಿದರು. ಇನ್ನು 100 ನೇ ಟೆಸ್ಟ್ ಪಂದ್ಯವಾಡುತ್ತಿರುವ ಪೂಜಾರ ಶೂನ್ಯ ಸಂಪಾದಿಸಿದರೆ ಶ್ರೇಯಸ್ ಅಯ್ಯರ್ 4 ರನ್ ಗೆ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು.
ಒಂದು ಹಂತದಲ್ಲಿ ಭಾರತ 139 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ದಯನೀಯ ಪರಿಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಜೊತೆಯಾದ ಅಶ್ವಿನ್-ಅಕ್ಸರ್ ಜೋಡಿ ಶತಕದ ಜೊತೆಯಾಟವಾಡಿ ಭಾರತಕ್ಕೆ ಚೇತರಿಕೆ ನೀಡಿದರು. ಅಶ್ವಿನ್ 37 ರನ್ ಗಳಿಸಿ ನಿರ್ಗಮಿಸಿದರೆ ಅಕ್ಸರ್ 74 ರನ್ ಗಳಿಸಿದರು. ನಥನ್ ಲಿಯೋನ್ 5 ವಿಕೆಟ್ ಪಡೆದರು.
ಇನ್ನು ಎರಡನೇ ಇನಿಂಗ್ಸ್ ಆರಂಭಿಸಿದ ಆಸೀಸ್ ಉಸ್ಮಾನ್ ಖವಾಜರನ್ನು 6 ರನ್ ಗೆ ಕಳೆದುಕೊಂಡಿತು. ಈ ವಿಕೆಟ್ ಜಡೇಜಾ ಪಾಲಾಯಿತು. ಆದರೆ ಬಳಿಕ ಟ್ರಾವಿಸ್ ಹೆಡ್ ಮತ್ತು ಲಬುಶೇನ್ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ್ದು, ಆಸೀಸ್ ಮೊತ್ತ ಉಬ್ಬಲು ಕಾರಣವಾಯಿತು. ಟ್ರಾವಿಸ್ 40 ಎಸೆತಗಳಲ್ಲಿ 39 ರನ್ ಗಳಿಸಿದರೆ, ಲಬುಶೇನ್ 19 ಎಸೆತಗಳಲ್ಲಿ 16 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಸೀಸ್ ಒಟ್ಟಾರೆ ಈಗ 62 ರನ್ ಗಳ ಮುನ್ನಡೆ ಪಡೆದಿದೆ.