ದುಬೈ: ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಬ್ಯಾಟರ್‌ಗಳು ಭಾರತದ ಸ್ಪಿನ್ ಸುಳಿಗೆ ತತ್ತರಿಸಿದರು.
ಆರಂಭಿಕ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡಿದರೂ ಭಾರತದ ಎದುರು ಬೃಹತ್ ಮೊತ್ತ ಕಲೆಹಾಕುವ ಪಾಕ್ ಪ್ರಯತ್ನ ಕೈಗೂಡಲಿಲ್ಲ. 19.1 ಓವರ್‌ಗಳಲ್ಲಿ 146 ರನ್‌ಗಳಿಗೆ ಸರ್ವಪತನ ಕಂಡಿದೆ.
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಪಂದ್ಯದಲ್ಲಿ, ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟರ್‌ಗಳು ಸ್ಪಿನ್ ಸುಳಿಯಲ್ಲಿ ಸಿಲುಕಿದ ಪರಿಣಾಮ ದಿಢೀರ್ ಕುಸಿಯಿತು.
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡರು. ಪಾಕ್ ಪಡೆಯ ಆರಂಭಿಕ ಬ್ಯಾಟರ್‌ಗಳಾದ ಸಾಹಿಬ್‌ಝಾದಾ ಫರ್ಹಾನ್ ಮತ್ತು ಫಖರ್ ಜಮಾನ್ ಭಾರತದ ನಾಯಕನ ನಿರ್ಧಾರವನ್ನು ತಲೆಕೆಳಗಾಗಿಸುವಂತಹ ಆಟವಾಡಿದರು.
ಈ ಜೋಡಿ ಮೊದಲ ವಿಕೆಟ್‌ಗೆ 9.4 ಓವರ್‌ಗಳಲ್ಲಿ 84 ರನ್ ಕಲೆಹಾಕುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟಿತು. ಆದರೆ, ಆ ಅಡಿಪಾಯದ ಮೇಲೆ ಬೃಹತ್ ಮೊತ್ತ ಪೇರಿಸಲು ಉಳಿದವರಿಗೆ ಸಾಧ್ಯವಾಗಲಿಲ್ಲ.
ಪಾಕ್ ಪಡೆಯ ಎಂಟು ವಿಕೆಟ್‌ಗಳು ಭಾರತದ ಸ್ಪಿನ್ನರ್‌ಗಳ ಪಾಲಾದವು. ಕುಲದೀಪ್ ಯಾದವ್ ನಾಲ್ಕು ವಿಕೆಟ್ ಕಬಳಿಸಿದರು. ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಹಾಗೂ ವೇಗಿ ಜಸ್‌ಪ್ರೀತ್ ಬೂಮ್ರಾ ಎರಡೆರಡು ವಿಕೆಟ್ ಹಂಚಿಕೊಂಡರು.