Publish Date: Mon, 13 Nov 2023 (08:30 IST)
Updated Date: Mon, 13 Nov 2023 (09:10 IST)
ಬೆಂಗಳೂರು: ನೆದರ್ಲ್ಯಾಂಡ್ಸ್ ವಿರುದ್ಧ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ ಇಂದು ವಿಶ್ವಕಪ್ ನಲ್ಲಿ ಚೊಚ್ಚಲ ವಿಕೆಟ್ ಸಂಪಾದಿಸಿದ ದಾಖಲೆ ಮಾಡಿದರು.
ವಿರಾಟ್ ಕೊಹ್ಲಿ ಈ ವಿಶ್ವಕಪ್ ನಲ್ಲಿ ಇದು ಎರಡನೇ ಬಾರಿಗೆ ಬೌಲಿಂಗ್ ಮಾಡುತ್ತಿದ್ದಾರೆ. ಇದಕ್ಕೆ ಮೊದಲು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಗಾಯಗೊಂಡಾಗ ಅವರ ಓವರ್ ಪೂರ್ತಿ ಮಾಡಲು ಮೂರು ಬಾಲ್ ಎಸೆದಿದ್ದರು. ಅದಾದ ಬಳಿಕ ಕೊಹ್ಲಿ ಎಲ್ಲೇ ಹೋದರೂ ಅಭಿಮಾನಿಗಳು ಬೌಲಿಂಗ್ ಮಾಡಿ ಎಂದು ದಂಬಾಲು ಬೀಳುತ್ತಲೇ ಇದ್ದರು. ಇತ್ತೀಚೆಗೆ ಕೋಚ್ ದ್ರಾವಿಡ್ ಕೂಡಾ ನಮ್ಮ ಬಳಿ ವಿಶೇಷ ಸ್ವಿಂಗ್ ಬೌಲರ್ ಇದ್ದಾರೆ ಎಂದು ತಮಾಷೆ ಮಾಡಿದ್ದರು. ನೆಟ್ಸ್ ನಲ್ಲೂ ಕೊಹ್ಲಿ ಬೌಲಿಂಗ್ ಮಾಡುತ್ತಾ ತಾವು ಬೌಲಿಂಗ್ ಗೂ ಸೈ ಎಂದು ಸಂದೇಶ ನೀಡುತ್ತಿದ್ದರು.
ಇಂದು ತಮ್ಮ ನೆಚ್ಚಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿಗೆ ಬೌಲಿಂಗ್ ಮಾಡಲು ನಾಯಕ ರೋಹಿತ್ ಶರ್ಮಾ ಅವಕಾಶ ಮಾಡಿಕೊಟ್ಟರು. ಕೊಹ್ಲಿ ಕೈಗೆ ಬಾಲ್ ಬರುತ್ತಿದ್ದಂತೇ ಅಭಿಮಾನಿಗಳಿಂದ ಭಾರೀ ಕರಾಡತನ ಬಂತು. ತಮಗೆ ಕೊಟ್ಟ ಜವಾಬ್ಧಾರಿಯನ್ನು ಸೂಕ್ತವಾಗಿ ನಿರ್ವಹಿಸಿದ ಕೊಹ್ಲಿ ಎರಡನೇ ಓವರ್ ನಲ್ಲಿಯೇ ವಿಕೆಟ್ ಕಬಳಿಸಿದರು. ಅವರು ವಿಕೆಟ್ ಕಬಳಿಸುತ್ತಿದ್ದಂತೇ ಗ್ಯಾಲರಿಯಲ್ಲಿ ಕೂತು ಪಂದ್ಯ ವೀಕ್ಷಿಸುತ್ತಿದ್ದ ಪತ್ನಿ ಅನುಷ್ಕಾ ಶರ್ಮಾ ಕಡೆ ನೋಡಿ ಸಂಭ್ರಮಿಸಿದರು. ಅನುಷ್ಕಾ ಕೂಡಾ ಅಷ್ಟೇ ಖುಷಿಯಿಂದ ಸಂಭ್ರಮಿಸಿದ್ದಾರೆ.