Publish Date: Mon, 24 Dec 2018 (10:01 IST)
Updated Date: Mon, 24 Dec 2018 (10:02 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ ಸಂಬಂಧ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಕೋಚ್ ಆಗಿದ್ದ ಕುಂಬ್ಳೆ ರಾಜೀನಾಮೆ ಕೊಡಲು ಕೊಹ್ಲಿಯ ಕುಮ್ಮಕ್ಕೇ ಕಾರಣ ಎಂಬುದು ಇದೀಗ ರಹಸ್ಯವಾಗಿ ಉಳಿದಿಲ್ಲ.
ಆದರೆ ಕುಂಬ್ಳೆ ಮಾತ್ರ ಈ ಕಹಿ ಘಟನೆಯ ನಂತರವೂ ಕೊಹ್ಲಿ-ಅನುಷ್ಕಾ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿ ಅಚ್ಚರಿ ಮೂಡಿಸಿದ್ದರು. ಇದೀಗ ಕೊಹ್ಲಿ ಬಗ್ಗೆ ಅನಿಲ್ ಕುಂಬ್ಳೆ ನೀಡಿರುವ ಹೊಗಳಿಕೆ ಕೇಳಿ ಕ್ರಿಕೆಟ್ ಲೋಕ ಮತ್ತೊಮ್ಮೆ ಕುಂಬ್ಳೆಯ ಜಂಟಲ್ ಮ್ಯಾನ್ ವ್ಯಕ್ತಿತ್ವಕ್ಕೆ ಬೆರಗಾಗಿದೆ.
‘ಪ್ರತೀ ಪಂದ್ಯದಿಂದ ಪಂದ್ಯಕ್ಕೆ ಕೊಹ್ಲಿ ಪ್ರೌಢ ಆಟಗಾರನಾಗಿ ಬೆಳೆಯುತ್ತಿದ್ದಾರೆ. ತಾವು ಬ್ಯಾಟಿಂಗ್ ಮಾಡುವಾಗ ಇಡೀ ಪಂದ್ಯವನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದು ಹೇಗೆ ಎಂದು ಅವರಿಗೆ ಗೊತ್ತು. ಎಲ್ಲವನ್ನೂ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಅವರಲ್ಲಿದೆ’ ಎಂದು ಕುಂಬ್ಳೆ ಹೊಗಳಿದ್ದಾರೆ.
ಕುಂಬ್ಳೆ-ಕೊಹ್ಲಿ ವೈಮನಸ್ಯದ ಬಳಿಕ ಕೊಹ್ಲಿ ಕುಂಬ್ಳೆಯನ್ನು ಟ್ವಿಟರ್ ನಲ್ಲಿ ಅನ್ ಫಾಲೋ ಮಾಡಿದ್ದಲ್ಲದೆ, ಹಿಂದೊಮ್ಮೆ ಭಾರತದ ಶ್ರೇಷ್ಠ ಆಟಗಾರರ ಹೆಸರನ್ನು ಹೆಸರಿಸುವಾಗ ಬೇಕೆಂದೇ ಕುಂಬ್ಳೆ ಹೆಸರನ್ನು ಹೇಳದೇ ತಮ್ಮ ಅಸಮಾಧಾನ ಸೂಚಿಸಿದ್ದರು. ಆದರೆ ಕುಂಬ್ಳೆ ಮಾತ್ರ ತಮ್ಮ ನಡುವಿನ ವೈಮನಸ್ಯವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೇ ಪ್ರೌಢಿಮೆ ಮೆರೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ