ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸಿದ್ದು, ಗೆಲುವಿನ ಹೊಸ್ತಿಲಲ್ಲಿದೆ.
ಮೂರನೇ ದಿನದಾಟದ ಆರಂಭದಲ್ಲೇ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ ಭಾರತ ತಂಡವು 5 ವಿಕೆಟ್‌ಗೆ 350 ರನ್ಗಳನ್ನು ಪೂರೈಸಿದೆ. ಅಲ್ಲದೆ ಮೊದಲ ಇನಿಂಗ್ಸ್ನಲ್ಲಿನ 46 ರನ್ಗಳ ಮುನ್ನಡೆಯೊಂದಿಗೆ ಒಟ್ಟು 396 ರನ್ ಮುನ್ನಡೆ ಪಡೆದು ಎದುರಾಳಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಭಾರತ ತಂಡದ ಸ್ಕೋರ್ 350ರ ಗಡಿದಾಟುತ್ತಿದ್ದಂತೆ ಅತ್ತ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ಭೀತಿ ಎದುರಾಗಿರುವುದು ಸುಳ್ಳಲ್ಲ. ಏಕೆಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ಬಲಿಷ್ಠ ತಂಡ ಎನಿಸಿಕೊಂಡರೂ ಆಸೀಸ್ ಪಡೆ ತವರಿನಲ್ಲಿ ಬೃಹತ್ ಮೊತ್ತದ ಚೇಸಿಂಗ್ ವಿಷಯದಲ್ಲಿ ಈಗಲೂ ಹಿಂದುಳಿದಿದೆ.
ಆಸ್ಟ್ರೇಲಿಯಾ ತಂಡವು ತವರಿನಲ್ಲಿ 350+ ರನ್ಗಳನ್ನು ಚೇಸ್ ಮಾಡಿ ಗೆದ್ದು 25 ವರ್ಷಗಳೇ ಕಳೆದಿವೆ. ಇದೀಗ ಭಾರತದ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ ಕೇವಲ 104 ರನ್ಗಳಿಗೆ ಮುಗ್ಗರಿಸಿರುವ ಆಸೀಸ್ ಪಡೆಗೆ ಟೀಮ್ ಇಂಡಿಯಾ 450+ ರನ್ಗಳ ಬೃಹತ್ ಮೊತ್ತದ ಗುರಿ ನೀಡುವುದು ಖಚಿತ.
ಈ ಗುರಿಯೊಂದಿಗೆ ಭಾರತ ತಂಡವು ಕೊನೆಯ ಎರಡು ದಿನದಾಟಗಳಲ್ಲಿ ಪಂದ್ಯವನ್ನು ಗೆಲ್ಲಲು ಪ್ರಯತ್ನಿಸಿದರೆ, ಆಸ್ಟ್ರೇಲಿಯಾ ತಂಡವು ಡ್ರಾ ಮಾಡಿಕೊಳ್ಳಲು ಯತ್ನಿಸಲಿದೆ. ಈ ಯತ್ನ ಪ್ರಯತ್ನಗಳ ನಡುವೆ ಭರ್ಜರಿ ಬೌಲಿಂಗ್ ಸಂಘಟಿಸಿದರೆ ಟೀಮ್ ಇಂಡಿಯಾ ಗೆಲುವು ನಿಶ್ಚಿತ. ಸದ್ಯ ವಿರಾಟ್ ಕೊಹ್ಲಿ ಮತ್ತು ವಾಷಿಂಗ್ಟನ್ ಸುಂದರ್ ಕ್ರೀಸ್‌ನಲ್ಲಿದ್ದಾರೆ.