Publish Date: Sun, 12 Apr 2026 (13:17 IST)
Updated Date: Sun, 12 Apr 2026 (13:19 IST)
ಮುಂಬೈ: ಖ್ಯಾತ ಗಾಯಕಿ ಆಶಾ ಭೋಸ್ಲೆ ಇಂದು ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಆಶಾ ಭೋಸ್ಲೆ, ಖ್ಯಾತ ಹಿನ್ನಲೆ ಗಾಯಕಿ ಲತಾ ಮಂಗೇಶ್ಕರ್ ಅವರ ಸಹೋದರಿಯೂ ಹೌದು. ನಿನ್ನೆಯಷ್ಟೇ ಹೃದಯಾಘಾತಕ್ಕೀಡಾಗಿದ್ದ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರ ಜೊತೆಗೆ ಉಸಿರಾಟದ ಸಮಸ್ಯೆಯಿಂದಲೂ ಬಳಲುತ್ತಿದ್ದರು.
ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ. ನಿನ್ನೆಯಿಂದ ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 1933 ರಲ್ಲಿ ಜನಿಸಿದ್ದ ಅವರು ತಮ್ಮ 9 ನೇ ವಯಸ್ಸಿನಿಂದ ಹಾಡಲು ಶುರು ಮಾಡಿದ್ದರು.
1943 ರಲ್ಲಿ ಮೊದಲ ಬಾರಿಗೆ ಸಿನಿಮಾ ಸಂಗೀತ ಗಾಯಕಿಯಾದರು. ಅಕ್ಕ ಲತಾ ಮಂಗೇಶ್ಕರ್ ಅವರಂತೆ ಆಶಾ ತಮ್ಮ ವಿಶಿಷ್ಟ ಧ್ವನಿಯ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಹಿಂದಿ, ಮರಾಠಿ, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಹಾಡಿದ್ದರು.
ಅವರ ಸಾಧನೆಗೆ ಪದ್ಮ ವಿಭೂಷಣ, ಹಿನ್ನಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ, ಫಿಲಂ ಫೇರ್ ಅವಾರ್ಡ್, ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು. ಅವರ ನಿಧನಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು ಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.