ಮುಂಬೈ: ಪನಾಮಾ ಪೇಪರ್ಸ್ ಲೀಕ್ ಪ್ರಕರಣದಲ್ಲಿ ನಟಿ ಐಶ್ವರ್ಯಾ ರೈಗೆ ಇಡಿ ಅಧಿಕಾರಿಗಳು ನಿನ್ನೆ ಸುಮಾತು ಐದು ತಾಸುಗಳ ಕಾಲ ವಿಚಾರಣೆ ನಡೆಸಿದ್ದಾರೆ.
2016 ರ ಪನಾಮಾ ಪೇಪರ್ಸ್ ಲೀಕ್ ಪ್ರಕರಣದಲ್ಲಿ ಐಶ್ವರ್ಯಾ ಹೆಸರು ಕೇಳಿಬಂದಿತ್ತು. ವಿದೇಶದಲ್ಲಿ ಬೇನಾಮಿ ಹೆಸರಿನಲ್ಲಿ ಸಂಸ್ಥೆ ಸ್ಥಾಪಿಸಿ ತೆರಿಗೆ ವಂಚನೆ ಮಾಡುತ್ತಿರುವ ಆಪಾದನೆಯಿದೆ.
ಇದರ ಬಗ್ಗೆ ವಿಚಾರಣೆಗೆ ಹಾಜರಾಗಲು ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಅದರಂತೆ ನಿನ್ನೆ ದೆಹಲಿ ಕಚೇರಿಗೆ ವಿಚಾರಣೆಗೆ ಹಾಜರಾದ ಐಶ್ವರ್ಯಾರಿಂದ ಇಡಿ ಅಧಿಕಾರಿಗಳು ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ಅತ್ತ ಸೊಸೆ ಐಶ್ವರ್ಯಾರನ್ನು ಇಡಿ ವಿಚಾರಣೆ ನಡೆಸುತ್ತಿದ್ದರೆ, ಇತ್ತ, ಸಂಸತ್ ನಲ್ಲಿ ಅತ್ತೆ ಜಯಾ ಬಚ್ಚನ್ ಆಡಳಿತಾರೂಢ ಬಿಜೆಪಿ ವಿರುದ್ಧ ಕೆರಳಿ ಕೆಂಡವಾಗಿದ್ದರು. ರಾಜ್ಯಸಭೆಯಲ್ಲಿ ಉಚ್ಛಾಟಿತ ಸದಸ್ಯರ ಬಗ್ಗೆ ಚರ್ಚೆ ನಡೆಯವಾಗ ಬಿಜೆಪಿಯ ಸದಸ್ಯರೊಬ್ಬರು ಜಯಾ ವಿರುದ್ಧ ಹೇಳಿಕೆ ನೀಡಿದರು. ಇದು ಅವರನ್ನು ಕೆರಳಿಸಿತು. ಜಯಾ ಆಕ್ರೋಶದ ಹೇಳಿಕೆ ನೀಡಿದಾಗ ಬಿಜೆಪಿ ಸದಸ್ಯರು ನಕ್ಕರು. ಇದರಿಂದ ಮತ್ತಷ್ಟು ಕೆರಳಿದ ಜಯಾ ನಿಮಗೆ ಕೆಟ್ಟ ದಿನಗಳು ಶೀಘ್ರದಲ್ಲೇ ಬರಲಿವೆ. ನಾನು ಶಾಪ ಹಾಕುತ್ತಿದ್ದೇನೆ ಎಂದು ಹಿಡಿಶಾಪ ಹಾಕಿದ ಘಟನೆ ನಡೆದಿದೆ.