ಮುಂಬೈ: ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ವಿಚ್ಛೇದನದ ಬೆನ್ನಲ್ಲೇ ಅವರ ಜೊತೆ ಕೆಲಸ ಮಾಡುತ್ತಿದ್ದ ಗಿಟಾರ್ ವಾದಕಿ ಮೋಹಿನಿ ದೇ ಕೂಡಾ ತಮ್ಮ ಪತಿಗೆ ವಿಚ್ಛೇದನ ಘೋಷಿಸಿದ್ದರು. ಇದು ಇಬ್ಬರ ನಡುವೆ ಲಿಂಕ್ ಅಪ್ ಸುದ್ದಿ ಹರಡಲು ಕಾರಣವಾಗಿತ್ತು. ಇದರ ಬಗ್ಗೆ ಈಗ ವಕೀಲೆ ವಂದನಾ ಶಾ ಸ್ಪಷ್ಟನೆ ನೀಡಿದ್ದಾರೆ.
ಎಆರ್ ರೆಹಮಾನ್ ಮತ್ತು ಪತ್ನಿ ಸಾಯಿರಾ ಬಾನು ತಮ್ಮ 29 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು. ಈ ಸುದ್ದಿ ಬೆಳಿಗ್ಗೆಯೇ ಅಭಿಮಾನಿಗಳಿಗೆ ಶಾಕ್ ತಂದಿತ್ತು. ಇಷ್ಟು ಸುದೀರ್ಘ ಕಾಲ ದಾಂಪತ್ಯ ಜೀವನ ನಡೆಸಿರುವ ದಂಪತಿಗೆ ಇದ್ದಕ್ಕಿದ್ದ ಹಾಗೆ ಏನಾಯಿತು ಎಂದು ಎಲ್ಲರೂ ಅಚ್ಚರಿಗೊಂಡಿದ್ದರು.
ಆದರೆ ರೆಹಮಾನ್ ವಿಚ್ಛೇದನ ಸುದ್ದಿ ಬಂದ ಕೆಲವೇ ಕ್ಷಣಗಳಲ್ಲಿ ಅವರ ಜೊತೆ ಕೆಲಸ ಮಾಡುತ್ತಿದ್ದ ಮೋಹಿನಿ ದೇ ವಿಚ್ಛೇದನ ಸುದ್ದಿ ಬಂದಿತ್ತು. ಹೀಗಾಗಿ ಇಬ್ಬರ ನಡುವೆ ಸಂಬಂಧ ಕಲ್ಪಿಸಲಾಗಿತ್ತು. ಇದೇ ಕಾರಣಕ್ಕೆ ರೆಹಮಾನ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿತ್ತು ಎಂದು ವದಂತಿ ಹಬ್ಬಿತ್ತು.
ಆದರೆ ಇದಕ್ಕೆಲ್ಲಾ ಈಗ ವಂದನಾ ಶಾ ಸ್ಪಷ್ಟನೆ ನೀಡಿದ್ದಾರೆ. ಮೋಹಿನಿ ವಿಚ್ಛೇದನಕ್ಕೂ ರೆಹಮಾನ್ ವಿಚ್ಛೇದನಕ್ಕೂ ಸಂಬಂಧವೇ ಇಲ್ಲ. ರೆಹಮಾನ್ ಮತ್ತು ಸಾಯಿರಾ ಭಾನು ತಮ್ಮದೇ ಭಾವನಾತ್ಮಕ ಭಿನ್ನಾಭಿಪ್ರಾಯಗಳಿಂದಾಗಿ ಬೇರ್ಪಡಲು ನಿರ್ಧರಿಸಿದ್ದರು. ಅವರ ನಿರ್ಧಾರವನ್ನು ಗೌರವಿಸಿ ಎಂದು ವಂದನಾ ಸ್ಪಷ್ಟನೆ ನೀಡಿದ್ದಾರೆ.