Publish Date: Fri, 05 Nov 2021 (16:23 IST)
Updated Date: Fri, 05 Nov 2021 (16:31 IST)
ದೀಪದ ಹಬ್ಬದ ಈ ಶುಭ ಸಂದರ್ಭದಲ್ಲಿ ನಟಿ ಆಲಿಯಾ ಭಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.
ರಣಬೀರ್ ಕಪೂರ್ ಜೊತೆ ಆಲಿಯಾ ಪ್ರೀತಿಸುತ್ತಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಆದರೆ ಅವರು ಸಾರ್ವಜನಿಕವಾಗಿ ಆ ಬಗ್ಗೆ ಮಾತನಾಡುವುದು ಕಡಿಮೆ. ಹಾಗಂತ ಕದ್ದು ಮುಚ್ಚಿ ಈ ಜೋಡಿ ಹಕ್ಕಿಗಳು ಓಡಾಡುತ್ತಿಲ್ಲ. ಅವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಅನೇಕ ಫೋಟೋಗಳು ಹರಿದಾಡುತ್ತಿವೆ. ಅದಕ್ಕೆಲ್ಲ ಅವರು ತಲೆ ಕೆಡಿಸಿಕೊಂಡಿಲ್ಲ. ಈಗ ದೀಪಾವಳಿ ಹಬ್ಬದ ಈ ಶುಭ ಸಂದರ್ಭದಲ್ಲಿ ಆಲಿಯಾ ಭಟ್ ಇನ್ನೊಂದು ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಬಹಳ ಸಂಭ್ರಮದಿಂದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದೀಪಾವಳಿ ಆಚರಿಸಿದ್ದಾರೆ. ಇಬ್ಬರು ಪರಸ್ಪರ ತಬ್ಬಿಕೊಂಡು ಕ್ಯಾಮೆರಾಗೆ ಪೋಸ್ ಕೂಡ ನೀಡಿದ್ದಾರೆ. ಒಂದಷ್ಟು ಪ್ರೀತಿ.. ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಆ ಫೋಟೋಗೆ ಆಲಿಯಾ ಭಟ್ ಕ್ಯಾಪ್ಷನ್ ನೀಡಿದ್ದಾರೆ. ಇನ್ನೊಂದು ಫೋಟೋದಲ್ಲಿ ದೀಪಗಳನ್ನು ಹಿಡಿದುಕೊಂಡಿರುವ ಅವರು, ಒಂದಷ್ಟು ಬೆಳಕು.. ಹ್ಯಾಪಿ ದೀಪಾವಳಿ ಎಂದು ಕ್ಯಾಪ್ಷನ್ ನೀಡಿದ್ದಾರೆ.
ಈ ಫೋಟೋ ನೋಡಿದ ಬಳಿಕ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ಗೆ ಎಲ್ಲರೂ ಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಅಲ್ಲದೇ, ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಈ ಜೋಡಿ ಹಕ್ಕಿಗಳಿಂದ ಉತ್ತರ ಸಿಕ್ಕಿಲ್ಲ. ಇಬ್ಬರ ಮದುವೆ ಬಗ್ಗೆ ಈಗಾಗಲೇ ಹಲವು ಸುದ್ದಿಗಳು ಹರಿದಾಡುತ್ತಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಇಬ್ಬರು ಹಸೆ ಮಣೆ ಏರಬೇಕಿತ್ತು. ಆದರೆ ಲಾಕ್ಡೌನ್ ಕಾರಣದಿಂದ ಮದುವೆ ದಿನಾಂಕ ಮುಂದಕ್ಕೆ ಹೋಗಿದೆ.
ಸೆ.28ರಂದು ರಣಬೀರ್ ಕಪೂರ್ ಜನ್ಮದಿನ. ಅಂದು ಅವರು ಆಲಿಯಾ ಜೊತೆಗೆ ರಾಜಸ್ಥಾನಕ್ಕೆ ತೆರಳಿದ್ದರು. ಬರ್ತ್ಡೇ ಪಾರ್ಟಿ ಜೊತೆಯಲ್ಲಿ ಮದುವೆಗೆ ಸ್ಥಳ ನೋಡಿಕೊಂಡು ಬರುವ ಉದ್ದೇಶದಿಂದಲೇ ಅವರು ರಾಜಸ್ಥಾನಕ್ಕೆ ಹೋಗಿದ್ದರು ಎಂದು ಸುದ್ದಿ ಆಗಿತ್ತು. ಆದರೆ ಆ ಬಗ್ಗೆ ಈ ಪ್ರಯಣಪಕ್ಷಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.