ಬೆಂಗಳೂರು: ಅಯೋಧ‍್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿ ಲೋಕಾರ್ಪಣೆಯಾದ ಬಳಿಕ ಪ್ರತಿನಿತ್ಯ ಅಲ್ಲಿ ರಾಮಲಲ್ಲಾನಿಗೆ ಪೂಜೆ ನಡೆಯುತ್ತದೆ. ರಾಮಲಲ್ಲಾನ ಪೂಜೆಯನ್ನು ನೀವೀಗ ಮನೆಯಲ್ಲಿಯೇ ಕುಳಿತು ನೋಡಬಹುದು. ಅದು ಹೇಗೆ? ಇಲ್ಲಿ ನೋಡಿ.
ರಾಮಲಲ್ಲಾನ ದರ್ಶನ ಪಡೆಯಲು ಪ್ರತಿನಿತ್ಯ ಸಾವಿರಾರು ಭಕ್ತರು ಅಯೋಧ್ಯೆಗೆ ಬರುತ್ತಿದ್ದಾರೆ. ಬೆಳ್ಳಂ ಬೆಳಿಗ್ಗೆ ನಡೆಯುವ ಆರತಿಯನ್ನು ನೋಡಲೆಂದೇ ಜನ ಕ್ಯೂ ನಿಂತಿರುತ್ತಾರೆ. ಆದರೆ ಅಲ್ಲಿಗೆ ಹೋದಾಗ ನೂಕುನುಗ್ಗಲಿನಲ್ಲಿ ರಾಮನ ಆರತಿಯನ್ನು ಸರಿಯಾಗಿ ನೋಡಲೂ ಸಾಧ್ಯವಾಗುವುದು ಕಷ್ಟವೇ.
ಕೆಲವರಿಗೆ ಅಯೋಧ್ಯೆವರೆಗೆ ಹೋಗಿ ರಾಮನ ಪೂಜೆ ನೋಡಲು ಅನಾನುಕೂಲವಿರಬಹುದು. ಅಂತಹವರಿಗಾಗಿ ಮನೆಯಲ್ಲಿಯೇ ಕುಳಿತು ರಾಮನ ಆರತಿ ನೋಡುವ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿನಿತ್ಯ ಬೆಳಿಗ್ಗೆ 6.30 ಕ್ಕೆ ಆರತಿ ನಡೆಯುತ್ತದೆ. ಇದನ್ನು ಮನೆಯಲ್ಲಿಯೇ ದೂರದರ್ಶನ ವಾಹಿನಿಯಲ್ಲಿ ಲೈವ್ ಆಗಿ ನೋಡಬಹುದು.
ಒಂದು ವೇಳೆ ದೂರದರ್ಶನ ವಾಹಿನಿಯಲ್ಲಿ ನೋಡಲು ಸಾಧ್ಯವಾಗದೇ ಇದ್ದರೆ ದೂರದರ್ಶನ ಸಂಸ್ಥೆಯ ಯೂ ಟ್ಯೂಬ್ ವಾಹಿನಿಯಲ್ಲೂ ವೀಕ್ಷಿಸಬಹುದಾಗಿದೆ. ಈ ವಿಚಾರವನ್ನು ಖುದ್ದಾಗಿ ದೂರದರ್ಶನ ಸಂಸ್ಥೆಯೇ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ತಿಳಿಸಿದೆ.