ಅಯೋಧ್ಯೆ: ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಿರುವ ರಾಮಮಂದಿರಕ್ಕೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಎರಡನೇ ಬಾರಿಗೆ ಭೇಟಿ ನೀಡಿದ್ದಾರೆ.
ಅಮಿತಾಭ್ ಬಚ್ಚನ್ ಅಯೋಧ‍್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೂ ವಿಶೇಷ ಆಹ್ವಾನ ಹಿನ್ನಲೆಯಲ್ಲಿ ಭಾಗಿಯಾಗಿದ್ದರು. ಇದೀಗ ಎರಡನೇ ಬಾರಿಗೆ ಅಮಿತಾಭ್ ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ. ಭೇಟಿ ಜೊತೆಗೆ ರಾಮನಿಗೆ ವಿಶೇಷ ಆಭರಣದ ಉಡುಗೊರೆಯನ್ನೂ ನೀಡಿದ್ದಾರೆ.
ರಾಮನಿಗೆ ಭಾರೀ ಗಾತ್ರದ ಚಿನ್ನದ ಮಾಲೆ ಉಡುಗೊರೆ
ಜ್ಯುವೆಲ್ಲರಿ ಶಾಪ್ ಒಂದರ ಉದ್ಘಾಟನೆಗಾಗಿ ಅಮಿತಾಭ್ ಬಚ್ಚನ್ ಅಯೋಧ್ಯೆಗೆ ಬಂದಿದ್ದರು. ಈ ವೇಳೆ ರಾಮಮಂದಿರಕ್ಕೂ ಭೇಟಿ ನೀಡಿದ್ದಾರೆ. ವಿಶೇಷವೆಂದರೆ ರಾಮ ಲಲ್ಲಾನನ್ನು ನೋಡಲು ಬರುವಾಗ ಭಾರೀ ಗಾತ್ರದ ಆಭರಣವೊಂದನ್ನೂ ತಂದಿದ್ದಾರೆ. ಕೆಲವು ಹೊತ್ತು ರಾಮನ ಮುಂದೆ ನಿಂತು ಪ್ರಾರ್ಥನೆ ನಡೆಸಿದ ಅಮಿತಾಭ್ ಅಲ್ಲಿಯೇ ಉಡುಗೊರೆ ಹಸ್ತಾಂತರಿಸಿದ್ದಾರೆ. ಬಳಿಕ ಅಯೋಧ್ಯೆಯಲ್ಲಿಯೇ ಊಟ ಮುಗಿಸಿ ತೆರಳಿದ್ದಾರೆ. ಈ ವೇಳೆ ಅವರಿಗೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.
ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೂ ಕೆಲವೇ ದಿನ ಮೊದಲು ಅಮಿತಾಭ್ ಇಲ್ಲಿ ನಿವೇಶನವೊಂದನ್ನು ಖರೀದಿ ಮಾಡಿದ್ದರು. ಬಳಿಕ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲೂ ಇತರೆ ಗಣ್ಯರೊಂದಿಗೆ ಪಾಲ್ಗೊಂಡು ಕಾರ್ಯಕ್ರಮ ಮುಗಿಯುವವರೆಗೂ ಅಲ್ಲಿಯೇ ಇದ್ದರು.