ಬೆಂಗಳೂರು: ಶನಿ ದೆಸೆಯಲ್ಲಿ ಮೂರು ಹಂತಗಳಿದ್ದು, ಕೊನೆಯ ಹಂತದಲ್ಲಿ ವ್ಯಕ್ತಿಯು ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸುತ್ತಾನೆ. ಅವುಗಳು ಏನೆಲ್ಲಾ ಎಂದು ಇಲ್ಲಿ ನೋಡೋಣ.
ಜ್ಯೋತಿಷ್ಯದ ಪ್ರಕಾರ ಶನಿ ಕರ್ಮಕಾರಕನಾಗಿದ್ದು, ನಮ್ಮ ಕರ್ಮಫಲಗಳಿಗೆ ಅನುಗುಣವಾಗಿ ಆತ ತೀಕ್ಷ್ಣವಾದ ಶಿಕ್ಷೆ ನೀಡುತ್ತಾನೆ. ಶನಿ ದೇವನ ವಕ್ರ ದೃಷ್ಟಿ ಬಿದ್ದರೆ ಜೀವನದಲ್ಲಿ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಇದಕ್ಕಾಗಿ ಶನಿವಾರಗಳಂದು ಶನಿ ದೇವ ಅಥವಾ ಆಂಜನೇಯ ಸ್ವಾಮಿಯ ಸೇವೆ ಮಾಡುತ್ತಿದ್ದರೆ ತಕ್ಕ ಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು.
ಅದರಲ್ಲೂ ಸಾಡೇ ಸಾತಿ ಶನಿ ಎಂದರೆ ಅತ್ಯಂತ ಪ್ರಬಲವಾಗಿರುವುದಾಗಿದೆ. ಸಾಡೇ ಸಾತಿ ಶನಿ ಅತ್ಯಂತ ತೀಕ್ಷ್ಣ ಪರಿಣಾಮವುಂಟು ಮಾಡುತ್ತದೆ. ಇದು ಮೂರು ಹಂತಗಳಲ್ಲಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಅದರಲ್ಲೂ ಕೊನೆಯ ಹಂತದಲ್ಲಿ ನಾವು ಅನೇಕ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.
ಸಾಡೇ ಸಾತಿ ಶನಿಯಲ್ಲಿ ಮೊದಲ ಹಂತದಲ್ಲಿ ಆರ್ಥಿಕವಾಗಿ ನಷ್ಟ ಅನುಭವಿಸುತ್ತೀರಿ. ಎರಡನೆಯ ಹಂತದಲ್ಲಿ ಕುಟುಂಬ, ವ್ಯವಹಾರದಲ್ಲಿ ಹಿನ್ನಡೆ ಅನುಭವಿಸಬೇಕಾಗುತ್ತದೆ. ಮೂರನೇ ಹಂತದಲ್ಲಿ ಭೌತಿಕ ಸಂತೋಷಗಳನ್ನು ಕಳೆದುಕೊಳ್ಳುತ್ತೀರಿ. ಮಕ್ಕಳು, ಮನೆಯವರೊಂದಿಗೆ ಕಲಹ, ಭಿನ್ನಾಭಿಪ್ರಾಯಗಳಾಗುತ್ತವೆ. ದೈಹಿಕವಾಗಿ ನೋವು ಸಂಭವಿಸಬಹುದು. ಇಂತಹ ಸಂದರ್ಭದಲ್ಲಿ ಶನಿ ದೇವನ ಆರಾಧನೆ ಮಾಡುತ್ತಿದ್ದರೆ ತಕ್ಕ ಮಟ್ಟಿಗೆ ಪರಿಣಾಮದ ಪ್ರಭಾವ ತಗ್ಗಿಸಬಹುದು.