ಬೆಂಗಳೂರು: ನಾಳೆ ಸುಬ್ರಹ್ಮಣ್ಯ ಷಷ್ಠಿಯಾಗಿದ್ದು, ಉಪವಾಸ ವ್ರತವಿದ್ದು ದೇವರ ಪೂಜೆ ಮಾಡುವುದರಿಂದ ನಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಮತ್ತು ಸುಬ್ರಹ್ಮಣ್ಯನ ಅನುಗ್ರಹದಿಂದ ಮನೆಯಲ್ಲಿ ಶಾಂತಿ ನೆಲೆಯಾಗಿರುತ್ತದೆ ಎಂಬ ನಂಬಿಕೆಯಿದೆ.
ಸುಬ್ರಹ್ಮಣ್ಯ ಷಷ್ಠಿಯನ್ನು ಆಚರಿಸುವುದರಿಂದ ನಮಗೆ ಅನೇಕ ಪ್ರಯೋಜನಗಳಾಗುತ್ತವೆ. ವಿಶೇಷವಾಗಿ ಸರ್ಪದೋಷವಿರುವವರು, ಪದೇ ಪದೇ ಕನಸಿನಲ್ಲಿ ಸರ್ಪ ಕಾಣಿಸುತ್ತಿದ್ದರೆ, ದಾಂಪತ್ಯದಲ್ಲಿ ಕಲಹ, ಮನೆಯಲ್ಲಿ ಅಶಾಂತಿಯಿದ್ದರೆ ಸುಬ್ರಹ್ಮಣ್ಯ ಷಷ್ಠಿಯಂದು ಉಪವಾಸ ವ್ರತ ಕೈಗೊಂಡರೆ ಒಳಿತಾಗುತ್ತದೆ.
ಹಾಗೆಯೇ ಸಂತಾನಾಪೇಕ್ಷಿತ ದಂಪತಿಗಳು ಸುಬ್ರಹ್ಮಣ್ಯ ಷಷ್ಠಿಯಂದು ಉಪವಾಸ ವ್ರತ ಕೈಗೊಂಡರೆ ಸಂತಾನವಾಗುತ್ತದೆ. ಸುಬ್ರಹ್ಮಣ್ಯ ಷಷ್ಠಿಯಂದು ಬೆಳಿಗ್ಗೆಯೇ ಎದ್ದು ಮಡಿಸ್ನಾನ ಮಾಡಿಕೊಳ್ಳಬೇಕು. ಅಂದು ಅಡುಗೆ ಮಾಡುವುದಿದ್ದರೂ ತಾಮಸ ಆಹಾರಗಳನ್ನು ಯಾವುದನ್ನೂ ಮಾಡುವಂತಿಲ್ಲ. ಈರುಳ್ಳಿ, ಬೆಳ್ಳುಳ್ಳಿಯಂತಹ ಆಹಾರಗಳು ವ್ಯರ್ಜ್ಯವಾಗಿರುತ್ತದೆ.
ಫಲಾಹಾರಗಳನ್ನು ಸೇವಿಸುತ್ತಾ ಸುಬ್ರಹ್ಮಣ್ಯನ ಪೂಜೆ, ಆರಾಧನೆ ಮೂಲಕ ದಿನವನ್ನು ಕಳೆಯಬೇಕು. ಸುಬ್ರಹ್ಮಣ್ಯನಿಗೆ ಸಂಬಂಧಿಸಿದ ಸ್ತೋತ್ರ ಪಠಣ ಮಾಡುವುದು, ಸತ್ಕರ್ಮಗಳನ್ನು ಮಾಡುವ ಮೂಲಕ ನಮ್ಮ ಮೇಲಿರುವ ದೋಷಗಳನ್ನು ನಿವಾರಿಸಿಕೊಳ್ಳಬೇಕು.