Webdunia - Bharat's app for daily news and videos

Install App

ಅಚ್ಚ ಕನ್ನಡದಲ್ಲಿ ಲಕ್ಷ್ಮೀ ಹೃದಯ ಸ್ತೋತ್ರ ಪಾರಾಯಣ ಮಾಡಿ: ಸಂಪತ್ತು ವೃದ್ಧಿಗೆ ಇದುವೇ ದಾರಿ

Krishnaveni K
ಗುರುವಾರ, 16 ಜನವರಿ 2025 (08:29 IST)
ಬೆಂಗಳೂರು: ಲಕ್ಷ್ಮೀ ದೇವಿಯು ಸಂಪತ್ತಿಗೆ ಅಧಿದೇವತೆಯಾಗಿದ್ದು ಆಕೆಯನ್ನು ಕುರಿತಾದ ಲಕ್ಷ್ಮೀ ಹೃದಯ ಸ್ತೋತ್ರ ಪಾರಾಯಣ ಮಾಡುವುದು ಹಲವು ಲಾಭಗಳನ್ನು ನೀಡುತ್ತದೆ. ಲಕ್ಷ್ಮೀ ಹೃದಯ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಮತ್ತು ಇದರ ಲಾಭಗಳೇನು ನೋಡಿ.

ಲಕ್ಷ್ಮೀ ದೇವಿಯ ಪೂಜೆ ಮಾಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ಸಮೃದ್ಧಿಗೆ ಕೊರತೆಯಾಗದು. ವಿಶೇಷವಾಗಿ ಹಣಕಾಸಿನ ಮುಗ್ಗಟ್ಟಿದ್ದರೆ, ಮನೆಯಲ್ಲಿ ಕಲಹ, ನೆಮ್ಮದಿಗೆ ಕೊರತೆಯಾಗಿದ್ದರೆ, ಸಾಲದಿಂದ ಮುಕ್ತಿ ಪಡೆಯಬೇಕಾದರೆ, ಸಂಗಾತಿ ಜೊತೆಗಿನ ವೈಮನಸ್ಯಗಳು ಸರಿಹೋಗಬೇಕಾದರೆ ಲಕ್ಷ್ಮೀ ಹೃದಯ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ ನೋಡಿ.
ಶ್ರೀ ಮನೋಹರೆ ಲಕುಮಿ ತವಪದ ತಾಮರಸಯುಗ ಭಜಿಪೆ ನಿತ್ಯದಿ
ಸೋಮಸೋದರಿ ಪರಮಮಂಗಳೆ ತಪ್ತಕಾಂಚನಳೇ |
ಸೋಮಸೂರ್ಯಸುತೇಜೋರೂಪಳೆ ಹೇಮಸನ್ನಿಭ ಪೀತವಸನಳೆ
ಚಾಮೀಕರಮಯ ಸರ್ವಭೂಷಣ ಜಾಲಮಂಡಿತಳೇ, ಭೂಷಣ ಜಾಲಮಂಡಿತಳೇ ||೧||
ಬೀಜಪೂರಿತ ಹೇಮಕಲಶವ ರಾಜಮಾನ ಸುಹೇಮ ಜಲಜವ
ನೈಜ ಕರದಲಿ ಪಿಡಿದುಕೊಂಡು ಭಕುತಜನತತಿಗೇ |
ಮಾಜದಲೆ ಸಕಲೇಷ್ಟ ನೀಡುವ ರಾಜಮುಖಿ ಮಹದಾದಿವಂದ್ಯಳೆ
ಮೂಜಗತ್ತಿಗೆ ಮಾತೆ ಹರಿವಾಮಾಂಕದೊಳಗಿರ್ಪ, ಹರಿವಾಮಾಂಕದೊಳಗಿರ್ಪೆ||೨||
ಶ್ರೀ ಮಹತ್ತರ ಭಾಗ್ಯಮಾನಿಯೇ ಸ್ತೌಮಿ ಲಕುಮಿ ಅನಾದಿ ಸರ್ವ ಸುಕಾಮ
ಫಲಗಳನೀವ ಸಾಧನ ಸುಖವಕೊಡುತಿರ್ಪ |
ಕಾಮಜನನಿಯೆ ಸ್ಮರಿಪೆ ನಿತ್ಯದಿ ಪ್ರೇಮಪೂರ್ವಕ ಪ್ರೇರಿಸೆನ್ನನು
ಹೇ ಮಹೇಶ್ವರಿ ನಿನ್ನ ವಚನವ ಧರಿಸಿ ಭಜಿಸುವೆನು, ಧರಿಸಿ ಭಜಿಸುವೆನು||೩
ಸರ್ವ ಸಂಪದವೀವ ಲಕುಮಿಯೆ ಸರ್ವ ಭಾಗ್ಯವನೀವ ದೇವಿಯೆ
ಸರ್ವಮಂಗಳವೀವ ಸುರವರ ಸಾರ್ವಭೌಮಿಯಳೇ |
ಸರ್ವ ಜ್ಞಾನವನೀವ ಜ್ಞಾನಿಯೆ ಸರ್ವ ಸುಖಫಲದಾಯಿ ಧಾತ್ರಿಯೆ
ಸರ್ವಕಾಲದಿ ಭಜಿಸಿ ಬೇಡಿದೆ ಸರ್ವ ಪುರುಷಾರ್ಥ, ಬೇಡಿದೆ ಸರ್ವ ಪುರುಷಾರ್ಥ || ೪ ||
ನತಿಪೆ ವಿಜ್ಞಾನಾದಿ ಸಂಪದ ಮತಿಯ ನಿರ್ಮಲ ಚಿತ್ರ ವಾಕ್ಪದ
ತತಿಯ ನೀಡುವದೆನಗೆ ಸರ್ವದ ಸರ್ವ ಗುಣಪೂರ್ಣೇ |
ನತಿಪ ಜನರಿಗನಂತಸೌಖ್ಯವ ಅತಿಶಯದಿ ನೀನಿತ್ತ ವಾರ್ತೆಯು
ವಿತತವಾಗಿಹದೆಂದು ಬೇಡಿದೆ ಭಕ್ತವತ್ಸಲಳೇ, ಬೇಡಿದೆ ಭಕ್ತವತ್ಸಲಳೇ||೫||
ಸರ್ವ ಜೀವರ ಹೃದಯ ವಾಸಿನಿ ಸರ್ವ ಸಾರ ಸುಭೋಕ್ತ್ರೆ ಸರ್ವದಾ
ಸರ್ವ ವಿಶ್ವದಲಂತರಾತ್ಮಕೆ ವ್ಯಾಪ್ತೆ ನಿರ್ಲಿಪ್ತೆ |
ಸರ್ವ ವಸ್ತು ಸಮೂಹದೊಳಗೆ ಸರ್ವ ಕಾಲದಿ ನಿನ್ನ ಸಹಿತದಿ
ಸರ್ವ ಗುಣ ಸಂಪೂರ್ಣ ಶ್ರೀ ಹರಿ ತಾನೆ ಇರುತಿರ್ಪ, ಶ್ರೀ ಹರಿ ತಾನೆ ಇರುತಿರ್ಪ||೬||
ತರಿಯೆ ನೀ ದಾರಿದ್ರ್ಯ ಶೋಕವ ಪರಿಯೆ ನೀನಜ್ಞಾನ ತಿಮಿರವ
ಇರಿಸು ತ್ವತ್ಪದ ಪದ್ಮಮನ್ಮನೋ ಸರಸಿ ಮಧ್ಯದಲಿ |
ಚರರ ಮನಸಿನ ದುಃಖ ಭಂಜನ ಪರಮ ಕಾರಣವೆನಿಪ ನಿನ್ನಯ
ಕರುಣಪೂರ್ಣ ಕಟಾಕ್ಷದಿಂದಭಿಷೇಕ ನೀ ಮಾಡೇ, ಅಭಿಷೇಕ ನೀ ಮಾಡೇ || ೭ ||
ಅಂಬಾ ಎನಗೆ ಪ್ರಸನ್ನಳಾಗಿ ತುಂಬಿ ಸೂಸುವ ಪರಮ ಕರುಣಾ –
ವೆಂಬ ಪೀಯುಷ ಕಣದಿ ತುಂಬಿದ ದೃಷ್ಟಿ ತುದಿಯಿಂದ |
ಅಂಬುಜಾಕ್ಷಿಯೆ ನೋಡಿ ಎನ್ನ ಮನೆ ತುಂಬಿಸೀಗಲೆ ಧಾನ್ಯ ಧನಗಳ
ಹಂಬಲಿಸುವೆನು ಪಾದಪಂಕಜ ನಮಿಪೆನನವರತ, ನಮಿಪೆನನವರತ || ೮ ||
ಶಾಂತಿನಾಮಕೆ ಶರಣ ಪಾಲಕೆ ಕಾಂತಿನಾಮಕೆ ಗುಣಗಣಾಶ್ರಯೇ
ಶಾಂತಿನಾಮಕೆ ದುರಿತನಾಶಿನಿ ಧಾತ್ರಿ ನಮಿಸುವೆನು |
ಭ್ರಾಂತಿನಾಶನಿ ಭವದ ಶಮದಿಂಶ್ರಾಂತನಾದೆನು ಭವದಿ ಎನಗೆ ನಿತಾಂತ
ಧನ ನಿಧಿ ಧಾನ್ಯ ಕೋಶವನಿತ್ತು ಸಲಹುವುದು, ಇತ್ತು ಸಲಹುವುದು || ೯ ||
ಜಯತು ಲಕ್ಷ್ಮೀ ಲಕ್ಷಣಾಂಗಿಯೆ ಜಯತು ಪದ್ಮಾ ಪದ್ಮವಂದ್ಯಳೆ
ಜಯತು ವಿದ್ಯಾ ನಾಮೆ ನಮೋ ನಮೋ ವಿಷ್ಣುವಾಮಾಂಕೇ |
ಜಯಪ್ರದಾಯಕೆ ಜಗದಿವಂದ್ಯಳೆ ಜಯತು ಜಯ ಚೆನ್ನಾಗಿ ಸಂಪದ
ಜಯವೆ ಪಾಲಿಸು ಎನಗೆ ಸರ್ವದಾ ನಮಿಪೆನನವರತ, ನಮಿಪೆನನವರತ||೧೦||
ಜಯತು ದೇವೀ ದೇವ ಪೂಜ್ಯಳೆ ಜಯತು ಭಾರ್ಗವಿ ಭದ್ರ ರೂಪಳೆ
ಜಯತು ನಿರ್ಮಲ ಜ್ಞಾನವೇದ್ಯಳೆ ಜಯತು ಜಯ ದೇವೀ |
ಜಯತು ಸತ್ಯಾಭೂತಿ ಸಂಸ್ಥಿತೆ ಜಯತು ರಮ್ಯಾ ರಮಣ ಸಂಸ್ಥಿತೆ
ಜಯತು ಸರ್ವ ಸುರತ್ನ ನಿಧಿಯೊಳಗಿರ್ಪೆ ನಿತ್ಯದಲಿ, ನಿಧಿಯೊಳಗಿರ್ಪೆ ನಿತ್ಯದಲಿ||೧೧||
ಜಯತು ಶುದ್ಧಾ ಕನಕ ಭಾಸಳೆ ಜಯತು ಕಾಂತಾ ಕಾಂತಿ ಗಾತ್ರಳೆ
ಜಯತು ಜಯ ಶುಭ ಕಾಂತೆ ಶೀಘ್ರದೆ ಸೌಮ್ಯ ಗುಣ ರಮ್ಯೇ |
ಜಯತು ಜಯಗಳದಾಯಿ ಸರ್ವದಾ ಜಯವೆ ಪಾಲಿಸು ಸರ್ವ ಕಾಲದಿ
ಜಯತು ಜಯ ಜಯ ದೇವಿ ನಿನ್ನನು ವಿಜಯ ಬೇಡಿದೆನು, ವಿಜಯ ಬೇಡಿದೆನು||೧೨||
ಆವ ನಿನ್ನಯ ಕೆಳೆಗಳಿಂದಲಿ ಆ ವಿರಿಂಚಿಯು ರುದ್ರ ಸುರಪತಿ
ದೇವ ವರಮುಖ ಜೀವರೆಲ್ಲರೂ ಸರ್ವಕಾಲದಲಿ |
ಜೀವಧಾರಣೆ ಮಾಡೋರಲ್ಲದೆ ಆವ ಶಕ್ತಿಯೂ ಕಾಣೆನವರಿಗೆ
ದೇವಿ ನೀ ಪ್ರಭು ನಿನ್ನ ಶಕ್ತಿಲಿ ಶಕ್ತರೆನಿಸುವರು, ಶಕ್ತರೆನಿಸುವರು || ೧೩ ||
ಆಯು ಮೊದಲಾಗಿರ್ಪ ಪರಮಾದಾಯ ಸೃಷ್ಟಿಸು ಪಾಲನಾದಿ ಸ್ವಕೀಯ
ಕರ್ಮವ ಮಾಡಿಸುವಿ ನಿನಗಾರುಸರಿಯುಂಟೇ |
ತೋಯಜಾಲಯೆ ಲೋಕನಾಥಳೆ ತಾಯೆ ಎನ್ನನು ಪೊರೆಯೇ ಎಂದು
ಬಾಯಿ ಬಿಡುವೆನು ಸೋಕನೀಯನ ಜಾಯೆ ಮಾಂ ಪಾಹೀ, ಜಾಯೆ ಮಾಂ ಪಾಹೀ ||೧೪||
ಬೊಮ್ಮ ಎನ್ನಯ ಫಣೆಯ ಫಲಕದಿ ಹಮ್ಮಿನಿಂದಲಿ ಬರೆದ ಲಿಪಿಯನು
ಅಮ್ಮ ಅದನನು ತೊಡೆದು ನೀ ಬ್ಯರಿಬ್ಯಾರೆ ವಿಧದಿಂದ |
ರಮ್ಯವಾಗಿಹ ನಿನ್ನ ಕರುಣಾ ಹರ್ಮ್ಯದೊಳಗಿರುತಿರ್ಪ ಭಾಗ್ಯವ
ಘಮ್ಮನೆ ದೊರೆವಂತೆ ಈ ಪರಿ ನಿರ್ಮಿಸೋತ್ತಮಳೇ, ನಿರ್ಮಿಸೋತ್ತಮಳೇ ||೧೫||
ಕನಕ ಮುದ್ರಿಕೆ ಪೂರ್ಣ ಕಲಶವ ಎನಗೆ ಅರ್ಪಿಸು ಜನುಮ ಜನುಮದಿ
ಜನನಿ ಭಾಗ್ಯದಭಿಮಾನಿ ನಿನಗಭಿನಮಿಸಿ ಬಿನ್ನೈಪೆ |
ಕನಸಿಲಾದರು ಭಾಗ್ಯ ಹೀನನು ಎನಿಸಬಾರದು ಎನ್ನ ಲೋಕದಿ
ಎನಿಸು ಭಾಗ್ಯದ ನಿಧಿಯು ಪರಿ ಪರಿ ಉಣಿಸು ಸುಖಫಲವ, ಒಣಿಸು ಸುಖಫಲವ|| ೧೬||
ದೇವಿ ನಿನ್ನಯ ಕಳೆಗಳಿಂದಲಿ ಜೀವಿಸುವುದೀ ಜಗವು ನಿತ್ಯದಿ
ಭಾವಿಸೀಪರಿ ಎನಗೆ ಸಂತತ ನಿಖಿಲ ಸಂಪದವ |
ದೇವಿ ರಮ್ಯ ಮುಖಾರವಿಂದಳೆ ನೀ ಒಲಿದು ಸೌಭಾಗ್ಯ ಪಾಲಿಸು
ಸೇವಕಾಧಮನೆಂದು ಬ್ಯಾಗನೆ ಒಲಿಯೇ ನೀ ಎನಗೆ, ಅಮ್ಮಾ, ಒಲಿಯೇ ನೀ ಎನಗೆ ||೧೭||
ಹರಿಯ ಹೃದಯದಿ ನೀನೆ ನಿತ್ಯದಿ ಇರುವ ತೆರದಲಿ ನಿನ್ನ ಕಳೆಗಳು
ಇರಲಿ ಎನ್ನಯ ಹೃದಯ ಸದನದಿ ಸರ್ವಕಾಲದಲಿ |
ನಿರುತ ನಿನ್ನಯ ಭಾಗ್ಯ ಕಳೆಗಳು ಬೆರೆತು ಸುಖಗಳ ಸಲಿಸಿ ಸಲಹಲಿ
ಸಿರಿಯೆ ಶ್ರೀಹರಿ ರಾಣಿ ಸರಸಿಜ ನಯನೆ ಕಲ್ಯಾಣಿ, ಸರಸಿಜ ನಯನೆ ಕಲ್ಯಾಣಿ ||೧೮||
ಸರ್ವ ಸೌಖ್ಯ ಪ್ರದಾಯಿ ದೇವಿಯೆ ಸರ್ವ ಭಕ್ತರಿಗಭಯ ದಾಯಿಯೆ
ಸರ್ವ ಕಾಲದಲಚಲ ಕಳೆಗಳ ನೀಡು ಎನ್ನಲ್ಲಿ |
ಸರ್ವ ಜಗದೊಳು ಘನ್ನ ನಿನ್ನಯ ಸರ್ವ ಸುಕಳಾ ಪೂರ್ಣನೆನಿಸಿ
ಸರ್ವ ವಿಭವದಿ ಮೆರೆಸು ಸಂತತ ವಿಘ್ನವಿಲ್ಲದಲೇ , ವಿಘ್ನವಿಲ್ಲದಲೇ ||೧೯||
ಮುದದಿ ಎನ್ನಯ ಫಾಲದಲಿ ಸಿರಿ ಪದುಮೆ ನಿನ್ನಯ ಪರಮ ಕಳೆಯೂ
ಒದಗಿ ಸರ್ವದಾ ಇರಲಿ ಶ್ರೀ ವೈಕುಂಠ ಗತ ಲಕ್ಷ್ಮೀ |
ಉದಯವಾಗಲಿ ನೇತ್ರಯುಗಳದಿ ಸದಯ ಮೂರ್ತಿಯೆ ಸತ್ಯಲೋಕದ
ಚದುರೆ ಲಕುಮಿಯೆ ಕಳೆಯು ವಾಕ್ಯದಿ ನಿಲಿಸಲನವರತ, ನಿಲಿಸಲನವರತ|| ೨೦||
ಶ್ವೇತ ದಿವಿಯೊಳಗಿರುವ ಲಕುಮಿಯೆ ನೀತವಾಗಿಹ ಕಳೆಯು ನಿತ್ಯದಿ
ಮಾತೆ ಎನ್ನಯ ಕರದಿ ಸಂತತ ವಾಸವಾಗಿರಲಿ |
ಪಾಥೋ ನಿಧಿಯೊಳಗಿರ್ಪ ಲಕುಮಿಯೆ ಜಾತಕಳೆಯು ಮಮಾಂಗದಲಿ ಸಂಪ್ರೀತಿ
ಪೂರ್ವಕವಿರಲಿ ಸರ್ವದಾ ಪಾಹೀ ಮಾಂ ಪಾಹೀ, ಪಾಹೀ ಮಾಂ ಪಾಹೀ ||೨೧||
ಇಂದು ಸೂರ್ಯರು ಎಲ್ಲಿ ತನಕ ಕುಂದದಲೆ ತಾವಿರುವರೋ ಸಿರಿ
ಇಂದಿರೇಶನು ಯಾವ ಕಾಲದ ತನಕ ಇರುತಿರ್ಪ |
ಇಂದಿರಾತ್ಮಕ ಕಳೆಯ ರೂಪಗಳಂದಿನದ ಪರಿ ಅಂತರಿರ್ಪವು
ಕುಂದು ಇಲ್ಲದೆ ಎನ್ನ ಬಳಿಯಲಿ ತಾವೆ ನೆಲಸಿರಲಿ, ತಾವೆ ನೆಲಸಿರಲಿ||೨೨||
ಸರ್ವಮಂಗಳೆ ಸುಗುಣ ಪೂರ್ಣಳೆ ಸರ್ವ ಐಶ್ವರ್ಯಾದಿಮಂಡಿತೆ
ಸರ್ವ ದೇವಗಣಾಭಿವಂದ್ಯಳೆ ಆದಿಮಹಾಲಕ್ಷ್ಮೀ |
ಸರ್ವಕಳೆ ಸಂಪೂರ್ಣೆ ನಿನ್ನಯ ಸರ್ವಕಳೆಗಳು ಎನ್ನ ಹೃದಯದಿ
ಸರ್ವಕಾಲದಲಿರಲಿ ಎಂದು ನಿನ್ನ ಪ್ರಾರ್ಥಿಸುವೆ, ನಿನ್ನ ಪ್ರಾರ್ಥಿಸುವೆ ||೨೩||
ಜನನೀ ಎನ್ನ ಅಜ್ಞಾನ ತಿಮಿರವ ದಿನದಿನದಿ ಸಂಹರಿಸಿ ನಿನ್ನವನೆನಿಸಿ
ಧ್ಯಾನವ ಮಾಳ್ಪ ನಿರ್ಮಲ ಜ್ಞಾನ ಸಂಪದವಾ |
ಕನಕ ಮಣಿ ಧನ ಧಾನ್ಯ ಭಾಗ್ಯವ ಇನಿತು ನೀ ಎನಗಿತ್ತು ಪಾಲಿಸು
ಮಿನುಗುತಿಹ ಘನವಾದ ನಿನ್ನಯ ಕಳೆಯು ಶೋಭಿಸಲಿ, ನಿನ್ನಯ ಕಳೆಯು ಶೋಭಿಸಲಿ ||೨೪||
ನಿರುತ ತಮತತಿ ಹರಿಪ ಸೂರ್ಯನ ತೆರದಿ ಕ್ಷಿಪ್ರದಿ ಹರಿಸಲಕ್ಷ್ಮಿಯ
ಸರಕು ಮಾಡದೆ ತರಿದು ಓಡಿಸು ದುರಿತ ರಾಶಿಗಳಾ |
ಪರಿಪರಿಯ ಸೌಭಾಗ್ಯ ನಿಧಿಯನು ಹರುಷದಿಂದಲಿ ನೀಡಿ ಎನ್ನನು
ಥರಥರದಿ ಕೃತ ಕೃತ್ಯನಿಳೆಯೊಳಗೆನಿಸು ದಯದಿಂದ, ಎನಿಸು ದಯದಿಂದ|| ೨೫||
ಅತುಳ ಮಹದೈಶ್ವರ್ಯ ಮಂಗಳತತಿಯು ನಿನ್ನಯ ಕಳೆಗಳೊಳಗೆ
ವಿತತವಾಗಿ ವಿರಾಜಮಾನದಲಿರ್ಪ ಕಾರಣದೀ |
ಶ್ರುತಿಯು ನಿನ್ನಯ ಮಹಿಮೆ ತಿಳಿಯದು ಸ್ತುತಿಸಬಲ್ಲೆನೇ ತಾಯೇ ಪೇಳ್ವುದು
ಮತಿವಿಹೀನನು ನಿನ್ನ ಕರುಣಕೆ ಪಾತ್ರನೆನಿಸಮ್ಮ, ಕರುಣಕೆ ಪಾತ್ರನೆನಿಸಮ್ಮ ||೨೬||
ನಿನ್ನ ಮಹಾದಾವೇಶ ಭಾಗ್ಯಕೆ ಎನ್ನ ಅರ್ಹನ ಮಾಡು ಲಕುಮಿಯೆ
ಘನ್ನತರ ಸೌಭಾಗ್ಯ ನಿಧಿ ಸಂಪನ್ನನೆನಿಸೆನ್ನ |
ರನ್ನೆ ನಿನ್ನಯ ಪಾದಕಮಲವ ಮನ್ನದಲಿ ಸಂಸ್ತುತಿಸಿ ಬೇಡುವೆ
ನಿನ್ನ ಪರತರ ಕರುಣ ಕವಚವ ತೊಡಿಸಿ ಪೊರೆಯಮ್ಮ, ಕವಚವ ತೊಡಿಸಿ ಪೊರೆಯಮ್ಮ ||೨೭||
ಪೂತ ನರನನು ಮಾಡಿ ಕಳೆಗಳ ವ್ರಾತದಿಂದಲಿ ಎನ್ನ ನಿಷ್ಠವ
ಘಾತಿಸೀಗಲೆ ಎನಗೆ ಒಲಿದು ಬಂದು ಸುಳಿ ಮುಂದೆ |
ಮಾತೆ ಭಾರ್ಗವಿ ಕರುಣಿ ನಿನ್ನಯ ನಾಥನಿಂದೊಡಗೂಡಿ ಸಂತತ
ಪ್ರೀತಳಾಗಿರು ಎನ್ನ ಮನೆಯೊಳು ನಿಲ್ಲು ನೀ ಬಿಡದೇ, ಮನೆಯೊಳು ನಿಲ್ಲು ನೀ ಬಿಡದೇ ||೨೮||
ಪರಮಸಿರಿ ವೈಕುಂಠ ಲಕುಮಿಯೆ ಹರಿಯ ಸಹಿತದಲೆನ್ನ ಮುಂದಕೆ
ಹರುಷ ಪಡುತಲಿ ಬಂದು ಶೋಭಿಸು ಕಾಲ ಕಳೆಯದಲೇ |
ವರದೆ ನಾ ಬಾರೆಂದು ನಿನ್ನನು ಕರೆದೆ ಮನವನು ಮುಟ್ಟಿ ಭಕುತಿಯ
ಭರದಿ ಬಾಗಿದ ಶಿರದಿ ನಮಿಸುವೆ ಕೃಪೆಯ ಮಾಡೆಂದು, ಕೃಪೆಯ ಮಾಡೆಂದು||೨೯||
ಸತ್ಯಲೋಕದ ಲಕುಮಿ ನಿನ್ನಯ ಸತ್ಯ ಸನ್ನಿಧಿ ಎನ್ನ ಮನೆಯಲಿ
ನಿತ್ಯ ನಿತ್ಯದಿ ಪೆರ್ಚಿ ಹಬ್ಬಲಿ ಜಗದಿ ಜನತತಿಗೇ |
ಅತ್ಯಧಿಕ ಆಶ್ಚರ್ಯ ತೋರಿಸಿ ಮರ್ತ್ಯರೋತ್ತಮನೆನಿಸಿ ನೀ ಕೃತ
ಕೃತ್ಯನೀಪರಿ ಮಾಡಿ ಸಿರಿ ಹರಿಗೂಡಿ ನಲಿದಾಡೇ, ಹರಿಗೂಡಿ ನಲಿದಾಡೇ ||೩೦||
ಕ್ಷೀರವಾರಿಧಿ ಲಕುಮಿಯೇ ಪತಿನಾರಸಿಂಹನ ಕೂಡಿ ಬರುವುದು
ದೂರ ನೋಡದೆ ಸಾರೆಗೆರೆದು ಪ್ರಸಾದ ಕೊಡು ಎನಗೆ |
ವಾರಿಜಾಕ್ಷಿಯೆ ನಿನ್ನ ಕರುಣಾಸಾರ ಪೂರ್ಣ ಕಟಾಕ್ಷದಿಂದಲಿ
ಬಾರಿ ಬಾರಿಗೆ ನೋಡಿ ಪಾಲಿಸು ಪರಮ ಪಾವನ್ನೇ, ಪರಮ ಪಾವನ್ನೇ ||೩೧||
ಶ್ವೇತ ದ್ವೀಪದ ಲಕುಮಿ ತ್ರಿಜಗನ್ಮಾತೆ ನೀ ಎನ್ನ ಮುಂದೆ ಶೀಘ್ರದಿ
ನಾಥನಿಂದೊಡಗೂಡಿ ಬಾರೆ ಪ್ರಸನ್ನ ಮುಖ ಕಮಲೇ |
ಜಾತರೂಪ ಸುತೇಜರೂಪಳೆ ಮಾತರಿಶ್ವ ಮುಖಾರ್ಚಿತಾಂಘ್ರಿಯೆ
ಜಾತರೂಪೋದರಾಂಡ ಸಂಘಕೆ ಮಾತೆ ಪ್ರಖ್ಯಾತೆ, ಮಾತೆ ಪ್ರಖ್ಯಾತೆ ||೩೨||
ರತ್ನಗರ್ಭನ ಪುತ್ರಿ ಲಕುಮಿಯೆ ರತ್ನಪೂರಿತ ಭಾಂಡ ನಿಚಯವ
ಯತ್ನಪೂರ್ವಕ ತಂದು ಎನ್ನಯ ಮುಂದೆ ನೀ ನಿಲ್ಲು |
ರತ್ನಖಚಿತ ಸುವರ್ಣಮಾಲೆಯ ರತ್ನಪದಕದ ಹಾರ ಸಮುದಯ
ಜತ್ನದಿಂದಲಿ ನೀಡಿ ಸರ್ವದಾ ಪಾಹೀ ಪರಮಾಪ್ತೆ, ಪಾಹೀ ಪರಮಾಪ್ತೆ ||೩೩|

ಎನ್ನ ಮನೆಯಲಿ ಸ್ಥೈರ್ಯದಿಂದಲಿ ಇನ್ನು ನಿಶ್ಚಲಳಾಗಿ ನಿಂತಿರು
ಉನ್ನತಾದೈಶ್ವರ್ಯ ವೃದ್ಧಿಯಗೈಸು ನಿರ್ಮಲಳೇ |
ಸನ್ನುತಾಂಗಿಯೇ ನಿನ್ನ ಸ್ತುತಿಪೆ ಪ್ರಸನ್ನ ಹೃದಯದಿ ನಿತ್ಯ ನೀ ಪ್ರಹಸನ್ಮುಖದಿ
ಮಾತಾಡು ವರಗಳ ನೀಡಿ ನಲಿದಾಡು, ನೀಡಿ ನಲಿದಾಡು ||೩೪||
ಸಿರಿಯೆ ಸಿರಿ ಮಹಾಭೂತಿ ದಾಯಿಕೆ ಪರಮೆ ನಿನ್ನೊಳಗಿರ್ಪ ಸುಮಹತ್ತರನವಾತ್ಮಕ
ನಿಧಿಗಳೂರ್ಧ್ವಕೆ ತಂದು ಕರುಣದಲಿ |
ಕರದಿ ಪಿಡಿದದನೆತ್ತಿ ತೋರಿಸಿ ತ್ವರದಿ ನೀ ಎನಗಿತ್ತು ಪಾಲಿಸು
ಧರಣಿ ರೂಪಳೆ ನಿನ್ನ ಚರಣಕೆ ಶರಣು ನಾ ಮಾಳ್ಪೆ, ಶರಣು ನಾ ಮಾಳ್ಪೆ||೩೫||
ವಸುಧೆ ನಿನ್ನೊಳಗಿರ್ಪ ವಸುವನು ವಶವ ಮಾಳ್ಪುದು ಎನಗೆ ಸರ್ವದಾ
ವಸುಸುದೋಗ್ಧ್ರಿಯು ಎಂಬ ನಾಮವು ನಿನಗೆ ಇರುತಿಹುದು
ಅಸಮ ಮಹಿಮಳೆ ನಿನ್ನ ಶುಭತಮ ಬಸುರಿನೊಳಗಿರುತಿರ್ಪ ನಿಧಿಯನು
ಬೆಸೆಸು ಈಗಲೇ ಹಸಿದು ಬಂದಗೆ ಅಶನವಿತ್ತಂತೇ, ಅಶನವಿತ್ತಂತೇ ||೩೬||
ಹರಿಯ ರಾಣಿಯೆ ರತ್ನಗರ್ಭಳೆ ಸರಿಯು ಯಾರೀ ಸುರರ ಸ್ತೋಮದಿ
ಸರಸಿಜಾಕ್ಷಿಯೆ ನಿನ್ನ ಬಸಿರೊಳಗಿರುವ ನವನಿಧಿಯಾ |
ಮೆರೆವ ಹೇಮದ ಗಿರಿಯ ತೆರದಲಿ ತೆರೆದು ತೋರಿಸಿ ಸಲಿಸು ಎನಗೆ
ಪರಮ ಕರುಣಾಶಾಲಿ ನಮೋ ನಮೋ ಎಂದು ಮೊರೆ ಹೊಕ್ಕೆ, ನಮೋ ನಮೋ ಎಂದು ಮೊರೆಹೊಕ್ಕೆ ||೩೭||
ರಸತಳದ ಸಿರಿ ಲಕುಮಿದೇವಿಯೆ ಶಶಿ ಸಹೋದರಿ ಶೀಘ್ರದಿಂದಲಿ
ಅಸಮ ನಿನ್ನಯ ರೂಪ ತೋರಿಸು ಎನ್ನ ಪುರದಲ್ಲಿ |
ಕುಸುಮಗಂಧಿಯೇ ನಿನ್ನನರಿಯೆನು ವಸುಮತೀ ತಳದಲ್ಲಿ ಬಹುಪರಿ
ಹೊಸತು ಎನಿಪುದು ನಿನ್ನ ಒಲುಮೆಯು ಸಕಲ ಜನತತಿಗೆ, ಸಕಲ ಜನತತಿಗೆ || ೩೮||
ನಾಗವೇಣಿಯೆ ಲಕುಮಿ ನೀ ಮನೋವೇಗದಿಂದಲಿ ಬಂದು ಎನ್ನಯ
ಜಾಗುಮಾಡದೆ ಶಿರದಿ ಹಸ್ತವನಿಟ್ಟು ಮುದದಿಂದ |
ನೀಗಿಸೀ ದಾರಿದ್ರ್ಯ ದುಃಖವ ಸಾಗಿಸೀ ಭವಭಾರ ಪರ್ವತ
ತೂಗಿಸು ನೀ ಎನ್ನ ಸದನದಿ ಕನಕ ಭಾರಗಳಾ, ಕನಕ ಭಾರಗಳಾ ||೩೯||
ಅಂಜಬೇಡವೋ ವತ್ಸಾ ಎನುತಲಿ ಮಂಜುಳೋಕ್ತಿಯ ನುಡಿದು ಕರುಣಾ –
ಪುಂಜ ಮನದಲಿ ಬಂದು ಶೀಘ್ರದಿ ಕಾರ್ಯ ಮಾಡುವುದು |
ಕಂಜಲೋಚನೆ ಕಾಮಧೇನು ಸುರಂಜಿಪಾಮರ ತರುವು ಎನಿಸುವಿ
ಸಂಜಯಪ್ರದಳಾಗಿ ಸಂತತ ಪಾಹೀ ಮಾಂ ಪಾಹೀ, ಪಾಹೀ ಮಾಂ ಪಾಹೀ || ೪೦ ||
ದೇವಿ ಶೀಘ್ರದಿ ಬಂದು ಭೂಮಿದೇವಿ ಸಂಭವೆ ಎನ್ನ ಜನನಿಯೆ
ಕಾಮನಯ್ಯನ ರಾಣಿ ನಿನ್ನಯ ಭೃತ್ಯ ನಾನೆಂದು |
ಭಾವಿಸೀಪರಿ ನಿನ್ನ ಹುಡುಕಿದೆ ಸೇವೆ ನೀ ಕೈಕೊಂಡು ಮನ್ಮನೋ
ಭಾವ ಪೂರ್ತಿಸಿ ಕರುಣಿಸೆನ್ನನು ಶರಣು ಶರಣೆ೦ಬೇ, ಶರಣು ಶರಣೆ೦ಬೇ || ೪೧
||
ಜಾಗರೂಕದಿ ನಿಂತು ಮತ್ತೇ ಜಾಗರೂಕದಿ ಎನಗೆ ನಿತ್ಯದಿ
ತ್ಯಾಗಭೋಗ್ಯಕೆ ಯೋಗ್ಯವೆನಿಪಾಕ್ಷಯ್ಯ ಹೇಮಮಯ |
ಪೂಗ ಕನಕ ಸಂಪೂರ್ಣ ಘಟಗಳ ಯೋಗ ಮಾಳ್ಪುದು ಲೋಕಜನನೀ
ಈಗ ಎನ್ನಯ ಭಾರ ನಿನ್ನದು ಕರೆದು ಕೈ ಪಿಡಿಯೇ, ಅಮ್ಮಾ ಕರೆದು ಕೈ ಪಿಡಿಯೇ || ೪೨ ||
ಧರಣಿಗತ ನಿಕ್ಷೇಪಗಳನುದ್ಧರಿಸಿ ನೀ ಎನ್ನ ಮುಂದೆ ಸೇರಿಸಿ
ಕಿರಿಯ ನಗೆಮೊಗದಿಂದ ನೋಡುತ ನೀಡು ನವನಿಧಿಯ |
ಸ್ಥಿರದಿ ಎನ್ನ ಮಂದಿರದಿ ನಿಂತು ಪರಮ ಮಂಗಳಕಾರ್ಯ ಮಾಡಿಸು
ಸಿರಿಯೆ ನೀನೆ ಒಲಿದು ಪಾಲಿಸು ಮೋಕ್ಷ ಸುಖ ಕೊನೆಗೆ, ಮೋಕ್ಷ ಸುಖ ಕೊನೆಗೆ || ೪೩ ||
ನಿಲ್ಲೇ ಲಕುಮೀ ಸ್ಥೈರ್ಯ ಭಾವದಿ ನಿಲ್ಲು ರತ್ನ ಹಿರಣ್ಯ ರೂಪಳೆ
ಎಲ್ಲ ವರಗಳನಿತ್ತು ನನಗೆ ಪ್ರಸನ್ನಮುಖಳಾಗು
ಎಲ್ಲೋ ಇರುತಿಹ ಕನಕ ನಿಧಿಗಳನೆಲ್ಲ ನೀ ತಂದು ನೀಡುವುದೈ
ಪುಲ್ಲಲೋಚನೆ ತೋರಿ ನಿಧಿಗಳ ತಂದು ಪೊರೆಯಮ್ಮ , ತಂದು ಪೊರೆಯಮ್ಮ || ೪೪ ||
ಇಂದ್ರಲೋಕದಲಿದ್ದ ತೆರದಲಿ ನಿಂದ್ರು ಎನ್ನಯ ಗೃಹದಿ ನಿತ್ಯದಿ
ಚಂದ್ರವದನೆಯೆ ಲಕುಮಿ ದೇವಿ ನೀಡೆ ಎನಗಭಯಾ |
ನಿಂದ್ರಲಾರೆನು ಋಣದ ಬಾಧೆಗೆ ತಂದ್ರಮತಿ ನಾನಾದೆ ಭವದೊಳುಪೇಂದ್ರ
ವಲ್ಲಭೆ ಅಭಯ ಪಾಲಿಸು ನಮಿಪೆ ಮಜ್ಜನನೀ, ನಮಿಪೆ ಮಜ್ಜನನೀ || ೪೫ |
ಬದ್ಧ ಸ್ನೇಹ ವಿರಾಜಮಾನಳೆ ಶುದ್ಧ ಜಾಂಬೂನದದಿ ಸಂಸ್ಥಿತೆ
ಮುದ್ದು ಮೋಹನ ಮೂರ್ತಿ ಕರುಣದಿ ನೋಡೆ ನೀ ಎನ್ನ |
ಬಿದ್ದೆ ನಾ ನಿನ್ನ ಪಾದ ಪದುಮಕೆ ಉದ್ಧರಿಪುದೆಂದು ಬೇಡಿದೇ ಅನಿರುದ್ಧ
ರಾಣಿ ಕೃಪಾಕಟಾಕ್ಷದಿ ನೋಡೆ ಮಾತಾಡೇ, ನೋಡೆ ಮಾತಾಡೇ || ೪೬ ||
ಭೂಮಿ ಗತ ಸಿರಿದೇವಿ ಶೋಭಿತೆ ಹೇಮಮಯೆ ಎಲ್ಲೆಲ್ಲು ಇರುತಿಹೆ
ತಾಮರಸ ಸಂಭೂತೆ ನಿನ್ನಯ ರೂಪ ತೋರೆನಗೆ |
ಭೂಮಿಯಲಿ ಬಹು ರೂಪದಿಂದಲಿ ಪ್ರೇಮಪೂರ್ವಕ ಕ್ರೀಡೆಗೈಯ್ಯುತ
ಹೇಮಮಯ ಪರಿಪೂರ್ಣ ಹಸ್ತವ ಶಿರದ ಮೇಲಿರಿಸು, ಹಸ್ತವ ಶಿರದ ಮೇಲಿರಿಸು || ೪೭ ||
ಫಲಗಳೀವ ಸುಭಾಗ್ಯ ಲಕುಮಿಯೆ ಲಲಿತ ಸರ್ವ ಪುರಾಧಿ ವಾಸಿಯೆ
ಕಲುಷ ಶೂನ್ಯಳೆ ಲಕುಮಿ ದೇವಿಯೆ ಪೂರ್ಣ ಮಾಡೆನ್ನ |
ಕುಲಜೆ ಕುಂಕುಮ ಶೋಭಿಪಾಲಳೆ ಚಲಿತ ಕುಂಡಲ ಕರ್ಣ ಭೂಷಿತೆ
ಜಲಜಲೋಚನೆ ಜಾಗ್ರ ಕಾಲದಿ ಸಲಿಸು ಎನಗಿಷ್ಟ, ಸಲಿಸು ಎನಗಿಷ್ಟ || ೪೮ ||
ತಾಯೆ ಚೆಂದದಲಂದಯೋಧ್ಯದಿ ದಯದಿ ನೀನೆ ನಿಂತು ಪಟ್ಟಣಭಯವ
ಓಡಿಸಿ ಜಾಗು ಮಾಡದೆ ಮತ್ತೆ ಮುದದಿಂದ |
ಜಯವ ನೀಡಿದ ತೆರದಿ ಎನ್ನಾಲಯದಿ ಪ್ರೇಮದಿ ಬಂದು ಕೂಡ್ವದು
ಜಯಪ್ರದಾಯಿನಿ ವಿವಿಧ ವೈಭವದಿಂದ ಒಡಗೂಡಿ, ವೈಭವದಿಂದ ಒಡಗೂಡಿ || ೪೯ ||
ಬಾರೆ ಲಕುಮಿ ಎನ್ನ ಸದನಕೆ ಸಾರಿದೆನು ತವ ಪಾದ ಪದುಮಕೆ
ತೋರಿ ಎನ್ನಯ ಗೃಹದಿ ನೀನೆ ಸ್ಥಿರದಿ ನೆಲೆಸಿದ್ದು |
ಸಾರ ಕರುಣಾರಸವು ತುಂಬಿದ ಚಾರುಜಲರುಹ ನೇತ್ರಯುಗ್ಮಳೆ
ಪಾರುಗಾಣಿಸು ಪರಮ ಕರುಣಿಯೆ ರಿಕ್ತತನದಿಂದ, ರಿಕ್ತತನದಿಂದ || ೫೦ ||
ಸಿರಿಯೆ ನಿನ್ನಯ ಹಸ್ತ ಕಮಲವ ಶಿರದಿ ನೀನೇ ಇರಿಸಿ ಎನ್ನನು
ಕರುಣವೆಂಬಾಮೃತದ ಕಣದಲಿ ಸ್ನಾನಗೈಸಿನ್ನು |
ಸ್ಥಿರದಿ ಸ್ಥಿತಿಯನು ಮಾಡು ಸರ್ವದಾ ಸರ್ವ ರಾಜ ಗೃಹಸ್ಥ ಲಕುಮಿಯೆ
ತ್ವರದಿ ಮೋದದಿ ಯುಕ್ತಳಾಗಿರು ಎನ್ನ ಮುಂದಿನ್ನು, ಎನ್ನ ಮುಂದಿನ್ನು || ೫೧ ||
ನೀನೆ ಆಶೀರ್ವದಿಸಿ ಅಭಯವ ನೀನೆ ಎನಗೆ ಇತ್ತು ಸಾದರ
ನೀನೆ ಎನ್ನ ಶಿರದಲಿ ಹಸ್ತವ ಇರಿಸು ಕರುಣದಲಿ |
ನೀನೆ ರಾಜರ ಗೃಹದ ಲಕ್ಷ್ಮಿಯು ನೀನೆ ಸರ್ವ ಸುಭಾಗ್ಯ ಲಕ್ಷ್ಮಿಯು
ಹೀನವಾಗದೆ ನಿನ್ನ ಕಳೆಗಳ ವೃದ್ಧಿ ಮಾಡಿನ್ನು, ವೃದ್ಧಿ ಮಾಡಿನ್ನು || ೫೨ ||
ಆದಿ ಸಿರಿ ಮಹಾಲಕುಮಿ ವಿಷ್ಣುವಿನಮೋದಮಯ ವಾಮಾಂಕ ನಿನಗನುವಾದ
ಸ್ವಸ್ಥಳವೆಂದು ತಿಳಿದು ನೀನೆ ನೆಲೆಸಿದ್ದೀ |
ಆದಿ ದೇವಿಯೆ ನಿನ್ನ ರೂಪವ ಮೋದದಿಂದಲಿ ತೋರಿ ಎನ್ನೊಳು
ಕ್ರೋಧವಿಲ್ಲದೆ ನಿತ್ಯ ಎನ್ನನು ಪೊರೆಯೆ ಕರುಣದಲಿ, ಪೊರೆಯೆ ಕರುಣದಲಿ || ೫೩ ||
ಒಲಿಯೆ ನೀ ಮಹಾಲಕುಮಿ ಬೇಗನೆ ಒಲಿಯೆ ಮಂಗಳಮೂರ್ತಿ ಸರ್ವದಾ
ನಲಿಯೆ ಚಲಿಸದೆ ಹೃದಯ ಮಂದಿರದಲ್ಲಿ ನೀನಿರುತ |
ಲಲಿತವೇದಗಳೆಲ್ಲಿ ತನಕ ತಿಳಿದು ಹರಿಗುಣ ಪಾಡುತಿರ್ಪುವು
ಜಲಜಲೋಚನ ವಿಷ್ಣು ನಿನ್ನೊಳು ಅಲ್ಲಿ ನೀನಿರ್ಪೆ, ಅಲ್ಲಿ ನೀನಿರ್ಪೆ || ೫೪ ||
ಅಲ್ಲಿ ಪರಿಯಂತರದಿ ನಿನ್ನಯ ಎಲ್ಲ ಕಳೆಗಳು ಎನ್ನ ಮನೆಯಲಿ
ನಿಲ್ಲಿಸೀ ಸುಖ ವ್ರಾತ ನೀಡುತ ಸರ್ವಕಾಲದಲಿ |
ಎಲ್ಲ ಜನಕಾಹ್ಲಾದ ಚಂದಿರ ಕುಲ್ಲದೇ ಶುಭ ಪಕ್ಷ ದಿನದೊಳು
ನಿಲ್ಲದಲೇ ಕಳೆ ವೃದ್ಧಿಯೈದುವ ತೆರದಿ ಮಾಡೆನ್ನ, ತೆರದಿ ಮಾಡೆನ್ನ || ೫೫ ||
ಸಿರಿಯೆ ನೀ ವೈಕುಂಠ ಲೋಕದಿ ಸಿರಿಯೆ ನೀ ಪಾಲ್ಗಡಲ ಮಧ್ಯದಿ
ಇರುವ ತೆರದಲಿ ಎನ್ನ ಮನೆಯೊಳು ವಿಷ್ಣು ಸಹಿತಾಗಿ
ನಿರುತ ಜ್ಞಾನಿಯ ಹೃದಯ ಮಧ್ಯದಿ ಮಿರುಗುವಂದದಲೆನ್ನ ಸದನದಿ
ಹರಿಯ ಸಹಿತದಿ ನಿತ್ಯ ರಾಜಿಸು ನೀಡಿ ಕಾಮಿತವಾ, ನೀಡಿ ಕಾಮಿತವಾ || ೫೬ ||
ಶ್ರೀನಿವಾಸನ ಹೃದಯ ಕಮಲದಿ ನೀನೆ ನಿಂತಿರುವಂತೆ ಸರ್ವದಾ
ಆ ನಾರಾಯಣ ನಿನ್ನ ಹೃದಯದಿ ಇರುವ ತೆರದಂತೆ |
ನೀನು ನಾರಾಯಣನು ಇಬ್ಬರು ಸಾನುರಾಗದಿ ಎನ್ನ ಮನದೊಳು
ನ್ಯೂನವಾಗದೆ ನಿಂತು ಮನೋರಥ ಸಲಿಸಿ ಪೊರೆಯೆಂದೆ, ಮನೋರಥ ಸಲಿಸಿ ಪೊರೆಯೆಂದೆ || ೫೭ ||
ವಿಮಲತರ ವಿಜ್ಞಾನ ವೃದ್ಧಿಯ ಕಮಲೆ ಎನ್ನಯ ಮನದಿ ಮಾಳ್ಪುದು
ಅಮಿತ ಸುಖ ಸೌಭಾಗ್ಯ ವೃದ್ಧಿಯ ಮಾಡು ಮಂದಿರದಿ |
ರಮೆಯೆ ನಿನ್ನಯ ಕರುಣ ವೃದ್ಧಿಯ ಸುಮನದಿಂದಲಿ ಮಾಡು ಎನ್ನಲಿ
ಅಮರಪಾದಪೆ ಸ್ವರ್ಣವೃಷ್ಟಿಯ ಮಾಡು ಮಂದಿರದಿ, ವೃಷ್ಟಿಯ ಮಾಡು ಮಂದಿರದಿ || ೫೮ ||
ಎನ್ನ ತ್ಯಜನವ ಮಾಡದಿರು ಸುರರನ್ನೆ ಆಶ್ರಿತ ಕಲ್ಪಭೂಜಳೆ
ಮುನ್ನ ಭಕ್ತರ ಚಿಂತಾಮಣಿ ಸುರಧೇನು ನೀನಮ್ಮ |
ಘನ್ನ ವಿಶ್ವದ ಮಾತೆ ನೀನೆ ಪ್ರಸನ್ನಳಾಗಿರು ಎನ್ನ ಭವನದಿ
ಸನ್ನುತಾಂಗಿಯೇ ಪುತ್ರ ಮಿತ್ರ ಕಳತ್ರ ಜನ ನೀಡೆ, ಕಳತ್ರ ಜನ ನೀಡೆ || ೫೯ ||
ಆದಿ ಪ್ರಕೃತಿಯೆ ಬೊಮ್ಮನಾಂಡಕೆ ಆದಿ ಸ್ಥಿತಿಲಯ ಬೀಜ ಭೂತಳೆ
ಮೋದ ಚಿನ್ಮಯ ಗಾತ್ರೆ ಪ್ರಾಕೃತ ದೇಹ ವರ್ಜಿತಳೇ |
ವೇದವೇದ್ಯಳೆ ಬೊಮ್ಮನಾಂಡವ ಆದಿಕೂರ್ಮದ ರೂಪದಿಂದಲಿ ಅನಾದಿಕಾಲದಿ
ಪೊತ್ತು ಮೆರೆವದು ಏನು ಚಿತ್ರವಿದು, ಏನು ಚಿತ್ರವಿದು || ೬೦ ||
ವೇದ ಮೊದಲು ಸಮಸ್ತ ಸುರರು ವೇದ ಸ್ತೋಮಗಳಿಂದ ನಿನ್ನ ಅಗಾಧ
ಮಹಿಮೆಯ ಪೊಗಳಲೆಂದರೆ ಶಕ್ತರವರಲ್ಲ
ಓದುಬಾರದ ಮಂದಮತಿ ನಾನಾದ ಕಾರಣ ಶಕ್ತಿಯಿಲ್ಲವು
ಬೋಧದಾಯಕೆ ನೀನೆ ಸ್ತವನವ ಗೈಸು ಎನ್ನಿಂದ, ಗೈಸು ಎನ್ನಿಂದ || ೬೧ ||
ಮಂದ ನಿಂದಲಿ ಸುಗುಣ ವೃಂದವ ಚಂದದಲಿ ನೀ ನುಡಿಸಿ ಎನ್ನಯ
ಮಂದಮತಿಯನು ತರಿದು ನಿರ್ಮಲ ಜ್ಞಾನಿಯೆಂದೆನಿಸು
ಇಂದಿರೇ ತವ ಪಾದಪದುಮದ ದ್ವಂದ್ವ ಸ್ತುತಿಸುವ ಶಕುತಿ ಇದ್ದು
ಕುಂದು ಬಾರದ ಕವಿತೆ ಪೇಳಿಸು ಎಂದು ವಂದಿಪೆನು, ಎಂದು ವಂದಿಪೆನು || ೬೨ ||
ವತ್ಸನ್ವಚನವ ಕೇಳೇ ನೀ ಸಿರಿ ವತ್ಸಲಾಂಛನ ವಕ್ಷಮಂದಿರೆ
ತುಚ್ಛ ಮಾಡದೆ ಮನಕೆ ತಂದು ನೀನೆ ಪಾಲಿಪುದು |
ಸ್ವಚ್ಛವಾಗಿಹ ಸಕಲ ಸಂಪದ ಉತ್ಸಾಹದಿ ನೀ ನೀಡಿ ಮನ್ಮನೋ
ಇಚ್ಛೆ ಪೂರ್ತಿಸು ಜನನಿ ಬೇಡುವೆ ನೀನೆ ಸರ್ವಜ್ಞೆ, ಜನನಿ ನೀನೆ ಸರ್ವಜ್ಞೆ || ೬೩ ||
ನಿನ್ನ ಮೊರೆಯನುಯೈದಿ ಪೂರ್ವದಿ ಧನ್ಯರಾದರು ಧರಣಿಯೊಳಗಾಪನ್ನ
ಪಾಲಕೆ ಎಂದು ನಿನ್ನನು ನಂಬಿ ಮೊರಹೊಕ್ಕೆ |
ನಿನ್ನ ಭಕುತಗನಂತ ಸೌಖ್ಯವು ನಿನ್ನಲೇ ಪರಭಕುತಿ ಅವನಿಗೆ
ನಿನ್ನ ಕರುಣಕೆ ಪಾತ್ರನಾಗುವನೆಂದು ಶ್ರುತಿಸಿದ್ಧ, ಎಂದು ಶ್ರುತಿಸಿದ್ಧ || ೬೪ ||
ನಿನ್ನ ಭಕುತಗೆ ಹಾನಿ ಇಲ್ಲವು ಬನ್ನ ಬಡಿಸುವರಿಲ್ಲ ಎಂದಿಗು
ಮುನ್ನ ಭವಭಯವಿಲ್ಲವೆಂದಾ ಶ್ರುತಿಯು ಪೇಳುವುದು |
ಎನ್ನ ಕರುಣಾಬಲವು ಅವನಲಿ ಘನ್ನವಾಗಿ ಇರುವುದೆಂಬ
ನಿನ್ನ ವಚನವ ಕೇಳಿ ಈ ಕ್ಷಣ ಪ್ರಾಣ ಧರಿಸಿಹೆನು, ಪ್ರಾಣ ಧರಿಸಿಹೆನು || ೬೫ ||
ನಾನು ನಿನ್ನಾಧೀನ ಜನನಿಯೆ ನೀನು ಎನ್ನಲಿ ಕರುಣ ಮಾಳ್ಪುದು
ಹೀನ ಬಡತನ ದೋಷ ಕಳೆದು ನೀನೆ ನೆಲಸಿದ್ದು |
ಮಾನ ಮನೆ ಧನ ಧಾನ್ಯ ಭಕುತಿ ಜ್ಞಾನ ಸುಖ ವೈರಾಗ್ಯ ಮೂರ್ತಿ
ಧ್ಯಾನ ಮಾನಸ ಪೂಜೆ ಮಾಡಿಸು ನೀನೆ ಎನ್ನಿಂದ, ನೀನೆ ಎನ್ನಿಂದ || ೬೬ ||
ನಿನ್ನ ಅಂತಃಕರಣದಿಂದಲಿ ಮುನ್ನ ನಾನೇ ಪೂರ್ಣ ಕಾಮನು
ಇನ್ನು ಆಗುವೆ ಪರಮ ಭಕ್ತ ಕುಚೇಲನಂದದಲಿ |
ಬಿನ್ನೈಪೆ ತವ ಪಾದ ಪದ್ಮಕೆ ಬನ್ನ ನಾ ಬಡಲಾರೆ ದೇವಿ
ಎನ್ನ ನೀ ಕರ ಪಿಡಿದು ಪಾಲಿಸು ರಿಕ್ತತನದಿಂದ, ಪಾಲಿಸು ರಿಕ್ತತನದಿಂದ || ೬೭ ||
ಕ್ಷಣವೂ ಜೀವಿಸಲಾರೆ ನಿನ್ನಯ ಕರುಣವಿಲ್ಲದೆ ಅವನಿ ತಳದಲಿ
ಕ್ಷಣಿಕ ಫಲಗಳ ಬಯಸಲಾರೆನೆ ಮೋಕ್ಷ ಸುಖ ದಾಯೆ |
ಗಣನೆ ಮಾಡದೆ ನೀಚ ದೇವರ ಹಣಿದು ಬಿಡುವೀ ಬಾಧೆ ಕೊಟ್ಟರೆ
ಪಣವ ಮಾಡುವೆ ನಿನ್ನ ಬಳಿಯಲಿ ಮಿಥ್ಯವೇನಿಲ್ಲ, ಮಿಥ್ಯವೇನಿಲ್ಲ || ೬೮ ||
ತನಯನರಿ ವಾತ್ಸಲ್ಯದಿಂದಲಿ ಜನನಿ ಹಾಲಲಿ ತುಂಬಿ ತುಳುಕುವ
ಸ್ತನವನಿತ್ತು ಆದರಿಸಿ ಉಣಿಸುವ ಜನನಿ ತೆರದಂತೆ
ನಿನಗೆ ಸುರರೊಳು ಸಮರ ಕಾಣೆನು ಅನಿಮಿಶೇಷರ ಪಡೆದು ಪಾಲಿಪಿ
ದಿನದಿನದಿ ಸುಖವಿತ್ತು ಪಾಲಿಸು ಕರುಣ ವಾರಿಧಿಯೆ, ಪಾಲಿಸು ಕರುಣ ವಾರಿಧಿಯೆ || ೬೯ ||
ಏಸು ಕಲ್ಪದಿ ನಿನಗೆ ಪುತ್ರನು ಆಸು ಕಲ್ಪದಿ ಮಾತೆ ನೀನೆ
ಲೇಷವಿದಕನುಮಾನವಿಲ್ಲವು ಸಕಲ ಶ್ರುತಿಸಿದ್ಧ |
ಲೇಸು ಕರುಣಾಸಾರವೆನಿಸುವ ಸೂಸುವಾಮೃತಧಾರದಿಂದಲಿ
ಸೋಸಿನಿಂದಭಿಷೇಕಗೈದಭಿಲಾಷೆ ಸಲಿಸಮ್ಮ, ಅಭಿಲಾಷೆ ಸಲಿಸಮ್ಮ || ೭೦ ||
ದೋಷಮಂದಿರನೆನಿಪ ಎನ್ನಲಿ ಲೇಷ ಪುಡಕಲು ಗುಣಗಳಿಲ್ಲ ವಿಶೇಷ
ವೃಷ್ಟಿ ಸುಪಾಂಸು ಕಣಗಳ ಗಣನೆ ಬಹು ಸುಲಭ
ರಾಶಿಯಂದದಲಿಪ್ಪ ಎನ್ನಘ ಸಾಸಿರಾಕ್ಷಗಶಕ್ಯ ಗಣಿಸಲು
ಏಸು ಪೇಳಲಿ ತಾಯೇ ತನಯನ ತಪ್ಪು ಸಹಿಸಮ್ಮ, ಅಮ್ಮಾ ತಪ್ಪು ಸಹಿಸಮ್ಮ || ೭೧ ||
ಪಾಪಿಜನರೊಳಗಗ್ರಗಣ್ಯನು ಕೋಪ ಪೂರಿತ ಚಿತ್ತ ಮಂದಿರ
ಈ ಪಯೋಜಭವಾಂಡ ಪುಡುಕಿದರಾರು ಸರಿಯಿಲ್ಲ
ಶ್ರೀಪನರಸಿಯೆ ಕೇಳು ದೋಷವು ಲೋಪವಾಗುವ ತೆರದಿ ಮಾಡಿ
ರಾಪುಮಾಡದೆ ಸಲಹು ಶ್ರೀಹರಿ ರಾಣಿ ಕಲ್ಯಾಣಿ, ಹರಿ ರಾಣಿ ಕಲ್ಯಾಣಿ || ೭೨ ||
ಕರುಣಶಾಲಿಯರೊಳಗೆ ನೀ ಬಲು ಕರುಣಶಾಲಿಯು ಎಂದು ನಿನ್ನಯ
ಚರಣಯುಗಕಭಿನಮಿಸಿ ಸಾರ್ದೆನು ಪೊರೆಯೆ ಪೊರೆಯೆಂದು |
ಹರಣ ನಿಲ್ಲದು ಹಣವು ಇಲ್ಲದೆ ಶರಣರನುದಿನ ಪೊರೆವ ದೇವಿ ಸುಪರಣ
ವಾಹನ ರಾಣಿ ಎನ್ನನು ಕಾಯೆ ವರವೀಯೇ, ಕಾಯೆ ವರವೀಯೇ || ೭೩ ||
ಉದರ ಕರ ಶಿರ ಟೊಂಕ ಸೂಲಿಯ ಮೊದಲೇ ಸೃಷ್ಟಿಯಗೈಯ್ಯದಿರಲೌಷಧದ
ಸೃಷ್ಟಿಯು ವ್ಯರ್ಥವಾಗುವ ತೆರದಿ ಜಗದೊಳಗೇ |
ವಿಧಿಯು ಎನ್ನನು ಸೃಜಿಸದಿದ್ದರೆ ಪದುಮೆ ನಿನ್ನ ದಯಾಳುತನವು
ಪುದುಗಿ ಪೋದಿತು ಎಂದು ತಿಳಿದಾ ಬೊಮ್ಮ ಸೃಜಿಸಿದನು, ಬೊಮ್ಮ ಸೃಜಿಸಿದನು || ೭೪ ||
ನಿನ್ನ ಕರುಣವು ಮೊದಲು ದೇವಿಯೆ ಎನ್ನ ಜನನವು ಮೊದಲು ಪೇಳ್ವದು
ಮುನ್ನ ಇದನನು ವಿಚಾರಗೈದು ವಿತ್ತ ಎನಗೀಯೇ |
ಘನ್ನ ಕರುಣಾನಿಧಿಯು ಎನುತಲಿ ಬಿನ್ನಹವ ನಾ ಮಾಡಿ ಯಾಚಿಪೆ
ಇನ್ನು ನಿಧಿಯನು ಇತ್ತು ಪಾಲಿಸು ದೂರ ನೋಡದಲೇ, ದೂರ ನೋಡದಲೇ || ೭೫ ||
ತಂದೆ ತಾಯಿಯು ನೀನೆ ಲಕುಮಿ ಬಂಧು ಬಳಗವು ನೀನೆ ದೇವಿ
ಹಿಂದೆ ಮುಂದೆ ಎನಗೆ ನೀನೆ ಗುರುವು ಸದ್ಗತಿಯು |
ಇಂದಿರೆಯೆ ಎನ್ನ ಜೀವ ಕಾರಿಣಿಸಂದೇಹ ಎನಗಿಲ್ಲ ಪರಮಾನಂದ
ಸಮುದಯ ನೀಡೆ ಕರುಣವ ಮಾಡೆ ವರ ನೀಡೆ, ಕರುಣವ ಮಾಡೆ ವರ ನೀಡೆ || ೭೬ ||
ನಾಥಳೆನಿಸುವಿ ಸಕಲ ಲೋಕಕೆ ಖ್ಯಾತಳೆಣಿಸುವೆ ಸರ್ವ ಕಾಲದಿ
ಪ್ರೀತಳಾಗಿರು ಎನಗೆ ಸಕಲವು ನೀನೆ ನಿಜವೆಂದೆ |
ಮಾತೆ ನೀನೆ ಎನಗೆ ಹರಿ ನಿಜ ತಾತ ಈರ್ವರು ನೀವೆ ಇರಲಿ
ರೀತಿಯಿಂದಲಿ ಭವದಿ ತೊಳಲಿಪುದೇನು ನಿಮ್ಮ ನ್ಯಾಯ, ಇದೇನು ನಿಮ್ಮ ನ್ಯಾಯ || ೭೭ ||
ಆದಿ ಲಕುಮಿ ಪ್ರಸನ್ನಳಾಗಿರು ಮೋದಜ್ಞಾನ ಸುಭಾಗ್ಯ ಧಾತ್ರಿಯೆ
ಛೇದಿಸಜ್ಞಾನಾದಿ ದೋಷವ ತ್ರಿಗುಣವರ್ಜಿತಳೇ |
ಸಾದರದಿ ನೀ ಕರೆದು ಕೈ ಪಿಡಿ ಮಾಧವನ ನಿಜ ರಾಣಿ ನಮಿಸುವೆ
ಬಾಧೆ ಗೊಳಿಸುವ ಋಣವ ಕಳೆದು ಸಿರಿಯೆ ಪೊರೆಯೆಂದೆ, ಅಮ್ಮಾ ಸಿರಿಯೆ ಪೊರೆಯೆಂದೆ || ೭೮ ||
ವಚನಜಾಡ್ಯವ ಕಳೆವ ದೇವಿಯೆ ಎಚೆಯೆ ನೂತನ ಸ್ಪಷ್ಟ ವಾಕ್ಪದ
ನಿಚಯ ಪಾಲಿಸಿ ಎನ್ನ ಜಿಹ್ವಾಗ್ರದಲಿ ನೀ ನಿಂತು |
ರಚನೆ ಮಾಡಿಸು ಎನ್ನ ಕವಿತೆಯ ಪ್ರಚುರವಾಗುವ ತೆರದಿ ಮಾಳ್ಪುದು
ಉಚಿತವೇ ಸರಿಯೇನು ಪೇಳ್ವದು ತಿಳಿಯೆ ಸರ್ವಜ್ಞೆ, ಲಕ್ಷ್ಮೀ ತಿಳಿಯೆ ಸರ್ವಜ್ಞೆ || ೭೯ ||
ಸರ್ವ ಸಂಪದದಿಂದ ರಾಜಿಪೆ ಸರ್ವ ತೇಜೋರಾಶಿಗಾಶ್ರಯೇ
ಸರ್ವರುತ್ತಮ ಹರಿಯ ರಾಣಿಯೆ ಸರ್ವರುತ್ತಮಳೇ |
ಸರ್ವ ಸ್ಥಳದಲಿ ದೀಪ್ಯಮಾನಳೆ ಸರ್ವ ವಾಕ್ಯಕೆ ಮುಖ್ಯ ಮಾನಿಯೆ
ಸರ್ವ ಕಾಲದಲೆನ್ನ ಜಿಹ್ವದಿ ನೀನೆ ನಟಿಸುವುದು, ಅಮ್ಮಾ ನೀನೆ ನಟಿಸುವುದು || ೮೦ ||
ಸರ್ವ ವಸ್ತ್ವಪರೋಕ್ಷ ಮೊದಲೂ ಸರ್ವ ಮಹಾಪುರುಷಾರ್ಥ ದಾತಳೆ
ಸರ್ವಕಾಂತಿಗಳೊಳಗೆ ಶುಭ ಲಾವಣ್ಯದಾಯಕಳೇ |
ಸರ್ವ ಕಾಲದಿ ಸರ್ವ ಧಾತ್ರಿಯೆ ಸರ್ವ ರೀತಿಲಿ ಸುಮುಖಿಯಾಗಿ
ಸರ್ವ ಹೇಮ ಸುಪೂರ್ಣೆ ಎನ್ನಯ ನಯನದೊಳಗೆಸೆಯೆ, ಎನ್ನಯ ನಯನದೊಳಗೆಸೆಯೆ || ೮೧ ||
ಸಕಲ ಮಹಾಪುರುಷಾರ್ಥದಾಯಿನಿ ಸಕಲ ಜಗವನು ಪೆತ್ತ ಜನನಿಯೆ
ಸಕಲರೀಶ್ವರೀ ಸಕಲ ಭಯಗಳ ನಿತ್ಯ ಸಂಹಾರೀ |
ಸಕಲ ಶ್ರೇಷ್ಠಳೆ ಸುಮುಖಿಯಾಗಿ ಸಕಲ ಭಾವವ ಧರಿಸಿ ಸರ್ವದಾ
ಸಕಲ ಹೇಮ ಸುಪೂರ್ಣೆ ಎನ್ನಯ ನಯನದೊಳಗೆಸೆಯೆ, ಅಮ್ಮಾ ನಯನದೊಳಗೆಸೆಯೆ || ೮೨ ||
ಸಕಲ ವಿಧ ವಿಘ್ನಾಪಹಾರಿಣಿಸಕಲ ಭಕ್ತೋದ್ಧಾರಕಾರಿಣಿ
ಸಕಲ ಸುಖ ಸೌಭಾಗ್ಯದಾಯಿನಿ ನೇತ್ರದೊಳಗೆಸೆಯೇ |
ಸಕಲ ಕಲೆಗಳ ಸಹಿತ ನಿನ್ನಯ ಭಕುತನಾದವನೆಂದು ಸರ್ವದಾ
ವ್ಯಕುತಳಾಗಿರು ಎನ್ನ ಹೃದಯದ ಕಮಲ ಮಧ್ಯದಲಿ, ಹೃದಯದ ಕಮಲ ಮಧ್ಯದಲಿ || ೮೩ ||
ನಿನ್ನ ಕರುಣಾ ಪಾತ್ರನಾಗಿಹ ಎನ್ನ ಗೋಸುಗ ನೀನೆ ತ್ವರದಿ ಪ್ರಸನ್ನಳಾಗ್ಯಧಿದೇವಗಣನುತೆ
ಸುಗುಣೆ ಪರಿಪೂರ್ಣೆ |
ಎನ್ನ ಪೆತ್ತಿಹ ತಾಯೇ ಸರ್ವದಾ ಸನ್ನಿಹಿತಳಾಗೆನ್ನ ಮನೆಯೊಳು
ನಿನ್ನ ಪತಿ ಸಹವಾಗಿ ಸರ್ವದಾ ನಿಲಿಸು ಶುಭದಾಯೇ, ನಿಲಿಸು ಶುಭದಾಯೇ || ೮೪ ||
ಎನ್ನ ಮುಖದಲಿ ನೀನೆ ನಿಂತು ಘನ್ನನಿವನೆಂದೆನಿಸಿ ಲೋಕದಿ
ಧನ್ಯ ಧನ್ಯನ ಮಾಡು, ವರಗಳ ನೀಡು ನಲಿದಾಡು |
ಅನ್ಯ ನಾ ನಿನಗಲ್ಲ ದೇವೀ ಜನ್ಯನಾದವನೆಂದು ತಿಳಿದು
ಅನ್ನ ವಸನವ ಧಾನ್ಯ ಧನವನು ನೀನೆ ಎನಗೀಯೇ, ಲಕ್ಷ್ಮೀ ನೀನೇ ಎನಗೀಯೇ || ೮೫ ||
ವತ್ಸ ಕೇಳೆಲೊ ಅಂಜಬೇಡವೋ ಸ್ವಚ್ಛ ಎನ್ನಯ ಕರವ ಶಿರದಲಿ
ಇಚ್ಛೆ ಪೂರ್ವಕ ನೀಡ್ದೆ ನಡಿ ಸರವತ್ರ ನಿರ್ಭಯದಿ |
ಉತ್ಸಹಾತ್ಮ ಮನೋನುಕಂಪಿಯೆ ಪ್ರೋತ್ಸಹದಿ ಕಾರುಣ್ಯ ದೃಷ್ಟಿಲಿ
ತುಚ್ಛ ಮಾಡದೆ ವೀಕ್ಷಿಸೀಗಲೆ ಲಕ್ಷ್ಮೀ ಒಲಿ ಎನಗೆ, ಲಕ್ಷ್ಮೀ ಒಲಿ ಎನಗೆ || ೮೬ ||
ಮುದದಿ ಕರುಣ ಕಟಾಕ್ಷ ಜನರಿಗೆ ಉದಯವಾಗಲು ಸಕಲ ಸಂಪದ
ಒದಗಿ ಬರುವುದು ಮಿಥ್ಯವಲ್ಲವು ಬುಧರ ಸಮ್ಮತವು |
ಅದಕೆ ನಿನ್ನಯ ಪದವ ನಂಬಿದೆ ಮುದದಿ ಎನ್ನಯ ಸದನದಲಿ ನೀನೊದಗಿ
ಭಾಗ್ಯದ ನಿಧಿಯ ಪಾಲಿಸು ಪದುಮೆ ನಮಿಸುವೆನು, ಪಾಲಿಸು ಪದುಮೆ ನಮಿಸುವೆನು || ೮೭ ||
ರಾಮೆ ನಿನ್ನಯ ದೃಷ್ಟಿಲೋಕಕೆ ಕಾಮಧೇನೆಂದೆನಿಸಿಕೊಂಬದು
ರಾಮೆ ನಿನ್ನಯ ಮನಸು ಚಿಂತಾರತ್ನ ಭಜಿಪರಿಗೆ |
ರಾಮೆ ನಿನ್ನಯ ಕರದ ದ್ವಂದ್ವವು ಕಾಮಿತಾರ್ಥವ ಕೇಳ್ವ ಜನರಿಗೆ
ಕಾಮಪೂರ್ತಿಪ ಕಲ್ಪವೃಕ್ಷವು ತಾನೆ ಎನಿಸಿಹುದು, ವೃಕ್ಷವು ತಾನೆ ಎನಿಸಿಹುದು || ೮೮ ||
ನವವೆನಿಪನಿಧಿ ನೀನೆ ಇಂದಿರೆ ತವ ದಯಾಭಿಧ ರಸವೇ ಎನಗೇ
ಧ್ರುವದಿ ದೇವಿ ರಸಾಯನವೆ ಸರಿ ಸರ್ವಕಾಲದಲಿ |
ಭುವನ ಸಂಭವೆ ನಿನ್ನ ಮುಖವು ದಿವಿಯೊಳೊಪ್ಪುವ ಚಂದ್ರನಂದದಿ
ವಿವಿಧಕಳೆಗಳ ಪೂರ್ಣವಾದ್ಯಖಿಳಾರ್ಥ ಕೊಡುತಿಹುದು, ಅಖಿಳಾರ್ಥ ಕೊಡುತಿಹುದು || ೮೯ ||
ರಸದ ಸ್ಪರ್ಶದಲಿಂದ ಲೋಹವು ಮಿಸುಣಿ ಭಾವವ ಐದೋ ತೆರದಲಿ
ಅಸಮ ಮಹಿಮಳೆ ನಿನ್ನ ಕರುಣ ಕಟಾಕ್ಷ ನೋಟದಲಿ |
ವಸುಧೆ ತಳದೊಳಗಿರ್ಪ ಜೀವರ ಅಶುಭ ಕೋಟಿಗಳೆಲ್ಲ ಪೋಗೀ
ಕುಸುಮ ಗಂಧಿಯೆ ಮಂಗಳೋತ್ಸವ ಸತತವಾಗುವುದು, ಉತ್ಸವ ಸತತವಾಗುವುದು || ೯೦ ||
ನೀಡು ಎಂದರೆ ಇಲ್ಲವೆಂಬುವ ರೂಢಿ ಜೀವರ ಮಾತಿಗಂಜುತ
ಬೇಡಿಕೊಂಬುದಕೀಗ ನಿನ್ನನು ಶರಣು ಹೊಂದಿದೆನು |
ನೋಡಿ ಕರುಣ ಕಟಾಕ್ಷದಿಂದಯ ಮಾಡಿ ಮನದಭಿಲಾಷೆ ಪೂರ್ತಿಸಿ
ನೀಡು ಎನಗಖಿಳಾರ್ಥ ಭಾಗ್ಯವ ಹರಿಯ ಸಹಿತದಲಿ, ಭಾಗ್ಯವ ಹರಿಯ ಸಹಿತದಲಿ || ೯೧ ||
ಕಾಮಧೇನು ಸುಕಲ್ಪತರು ಚಿಂತಾಮಣಿ ಸಹವಾಗಿ ನಿನ್ನಯ
ಕಾಮಿತಾರ್ಥಗಳೀವ ಕಳೆಗಳಳುಣಿಸಿ ಇರುತಿಹವು |
ರಾಮೇ ನಿನ್ನಯ ರಸರಸಾಯನ ಸ್ತೋಮದಿಂ ಶಿರ ಪಾದ ಪಾಣಿ
ಪ್ರೇಮಪೂರ್ವಕ ಸ್ಪರ್ಶವಾಗಲು ಹೇಮವಾಗುವುದು, ಹೇಮವಾಗುವುದು || ೯೨ ||
ಆದಿ ವಿಷ್ಣುನ ಧರ್ಮಪತ್ನಿಯೆ ಸಾದರದಿ ಹರಿ ಸಹಿತ ಎನ್ನಲಿ
ಮೋದದಿಂದಲಿ ಸನ್ನಿಧಾನವ ಮಾಡೆ ಕರುಣದಲಿ |
ಆದಿ ಲಕ್ಷ್ಮಿಯೆ ಪರಮಾನುಗ್ರಹವಾದ ಮಾತ್ರದಿ ಎನಗೆ ಪದು ಪದೆ
ಆದಪುದು ಸರ್ವತ್ರ ಸರ್ವದಾ ನಿಧಿಯ ದರ್ಶನವು, ನಿಧಿಯ ದರ್ಶನವು || ೯೩ ||
ಆವ ಲಕ್ಷ್ಮೀ ಹೃದಯ ಮಂತ್ರವ ಸಾವಧಾನದಿ ಪಠಣೆಗೈವನು
ಆವ ಕಾಲದಿ ರಾಜ್ಯಲಕ್ಷ್ಮೀಯನೈದು ಸುಖಿಸುವನು |
ಆವ ಮಹಾದಾರಿದ್ರ್ಯ ದೋಷಿಯು ಸೇವಿಸೆ ಮಹಾ ಧನಿಕನಾಗುವ
ದೇವಿ ಅವನಾಲಯದಿ ಸರ್ವದಾ ಸ್ಥಿರದಿ ನಿಲಿಸುವಳು || ೯೪ ||
ಲಕುಮಿ ಹೃದಯದ ಪಠಣೆ ಮಾತ್ರದಿ ಲಕುಮಿ ತಾ ಸಂತುಷ್ಟಳಾಗಿ
ಸಕಲ ದುರಿತಗಳಳಿದು ಸುಖ ಸೌಭಾಗ್ಯ ಕೊಡುತಿಹಳು |
ವಿಕಸಿತಾನನೆ ವಿಷ್ಣುವಲ್ಲಭೆ ಭಕುತ ಜನರನು ಸರ್ವ ಕಾಲದಿ
ವ್ಯಕುತಳಾದ್ಯವರನ್ನ ಪೊರೆವಳು ತನಯರಂದದಲಿ, ಲಕ್ಷ್ಮೀ ತನಯರಂದದಲಿ || ೯೫ ||
ದೇವಿ ಹೃದಯವು ಪರಮ ಗೋಪ್ಯವು ಸೇವಕನಿಗಖಿಳಾರ್ಥ ಕೊಡುವುದು
ಭಾವ ಪೂರ್ವಕ ಪಂಚಸಾವಿರ ಜಪಿಸೆ ಪುನಶ್ಚರಣ |
ಈ ವಿಧಾನದಿ ಪಠಣೆ ಮಾಡಲು ತಾ ಒಲಿದು ಸೌಭಾಗ್ಯ ನಿಧಿಯನು
ತೀವ್ರದಿಂದಲಿ ಕೊಟ್ಟು ಸೇವಕರಲ್ಲಿ ನಿಲಿಸುವಳು, ಸೇವಕರಲ್ಲಿ ನಿಲಿಸುವಳು || ೯೬ ||
ಮೂರು ಕಾಲದಿ ಜಪಿಸಲುತ್ತಮ ಸಾರ ಭಕುತಿಲಿ ಒಂದು ಕಾಲದಿ
ಧೀರಮಾನವ ಪಠಿಸಲವನಖಿಳಾರ್ಥ ಐದುವನು |
ಆರು ಪಠಣವಗೈಯ್ಯಲಿದನನುಭೂರಿ ಶ್ರವಣವ ಗೈದ ಮಾನವ
ಬಾರಿ ಬಾರಿಗೆ ಧನವ ಗಳಿಸುವ ಸಿರಿಯ ಕರುಣದಲಿ, ಸಿರಿಯ ಕರುಣದಲಿ || ೯೭ ||
ಶ್ರೀ ಮಹತ್ತರ ಲಕ್ಷ್ಮಿಗೋಸುಗ ಈ ಮಹತ್ತರ ಹೃದಯ ಮಂತ್ರವ
ಪ್ರೇಮಪೂರ್ವಕ ಭಾರ್ಗವಾರದ ರಾತ್ರಿ ಸಮಯದಲಿ |
ನೇಮದಿಂದಲಿ ಪಂಚವಾರವ ಕಾಮಿಸೀಪರಿ ಪಠಣೆ ಮಾಡಲು
ಕಾಮಿತಾರ್ಥವನೈದಿ ಲೋಕದಿ ಬಾಳ್ವ ಮುದದಿಂದ, ಬಾಳ್ವ ಮುದದಿಂದ || ೯೮ ||
ಸಿರಿಯ ಹೃದಯ ಸುಮಂತ್ರದಿಂದಲಿ ಸ್ಮರಿಸಿ ಅನ್ನವ ಮಂತ್ರಿಸಿಡಲು
ಸಿರಿಯ ಪತಿ ತಾನವರ ಮಂದಿರದೊಳಗೆ ಅವತರಿಪ |
ನರನೆ ಆಗಲಿ ನಾರಿ ಆಗಲಿ ಸಿರಿಯ ಹೃದಯ ಸುಮಂತ್ರದಿಂದಲಿ
ನಿರುತ ಮಂತ್ರಿತ ಜಲವ ಕುಡಿಯಲು ಧನಿಕ ಪುಟ್ಟುವನು, ಧನಿಕ ಪುಟ್ಟುವನು || ೯೯ ||
ಆವನಾಶ್ವೀಜ ಶುಕ್ಲ ಪಕ್ಷದಿ ದೇವಿ ಉತ್ಸವ ಕಾಲದೊಳು ತಾ
ಭಾವ ಶುದ್ಧಿಲಿ ಹೃದಯ ಜಪ ಒಂದಧಿಕ ದಿನದಿನದಿ |
ಈ ವಿಧಾನದಿ ಜಪವ ಮಾಡಲು ಶ್ರೀವನದಿ ಸಂಪದವನೈದುವ
ಶ್ರೀವನಿತೆ ತಾ ಕನಕವೃಷ್ಟಿಯ ಕರೆವಳನವರತ, ಕರೆವಳನವರತ || ೧೦೦ ||
ಆವ ಭಕುತನು ವರುಷ ದಿನ ದಿನ ಭಾವ ಶುದ್ಧಿಲಿ ಎಲ್ಲ ಪೊತ್ತು
ಸಾವಧಾನದಿ ಹೃದಯ ಮಂತ್ರವ ಪಠಿಸಲವನಾಗ |
ದೇವಿ ಕರುಣಕಟಾಕ್ಷದಿಂದಲಿ ದೇವ ಇಂದ್ರನಿಗಧಿಕನಾಗುವ
ಈ ವಸುಂಧರೆಯೊಳಗೆ ಭಾಗ್ಯದ ನಿಧಿಯು ತಾನೆನಿಪ, ಭಾಗ್ಯದ ನಿಧಿಯು ತಾನೆನಿಪ || ೧೦೧ ||
ಶ್ರೀಶ ಪದದಲಿ ಭಕುತಿ ಹರಿಪದ ದಾಸ ಜನಪದ ದಾಸ ಭಾವವ
ಈಸು ಮಂತ್ರಗಳರ್ಥ ಸಿದ್ಧಿಯು ಗುರುಪದ ಸ್ಮೃತಿಯು |
ಲೇಸು ಜ್ಞಾನ ಸುಬುದ್ಧಿ ಪಾಲಿಸು ವಾಸವಾಗಿರು ಎನ್ನ ಮನೆಯಲಿ
ಈಶ ಸಹ ಎನ ತಾಯೆ ಉತ್ತಮ ಪದವು ನೀ ಸಿರಿಯೇ, ಉತ್ತಮ ಪದವು ನೀ ಸಿರಿಯೇ || ೧೦೨ ||
ಧರಣಿ ಪಾಲಕನೆನಿಸು ಎನ್ನನು ಪುರುಷರುತ್ತಮನೆನಿಸು ಸರ್ವದಾ
ಪರಮವೈಭವ ನಾನಾವಿಧವಾಗರ್ಥ ಸಿದ್ಧಿಗಳಾ |
ಹಿರಿದು ಕೀರ್ತಿಯ ಬಹಳ ಭೋಗವ ಪರಮ ಭಕ್ತಿ ಜ್ಞಾನ ಸುಮತಿಯ
ಪರಿಮಿತಿಲ್ಲದೆ ಇತ್ತು ಪುನರಪಿ ಸಲಹು ಶ್ರೀದೇವೀ, ಸಲಹು ಶ್ರೀದೇವೀ || ೧೦೩ ||
ವಾದಮಾಡುದಕರ್ಥ ಸಿದ್ಧಿಯು ಮೋದತೀರ್ಥರ ಮತದಿ ದೀಕ್ಷವು
ಸಾದರದಿ ನೀನಿತ್ತು ಪಾಲಿಸು ವೇದದಭಿಮಾನೀ |
ಮೋದದಲಿ ಪುತ್ರಾರ್ಥ ಸಿದ್ಧಿಯು ಓದದಲೆ ಸಿರಿ ಬ್ರಹ್ಮವಿದ್ಯವು
ಆದಿ ಭಾರ್ಗವಿ ಇತ್ತು ಪಾಲಿಸು ಜನ್ಮ ಜನ್ಮದಲೀ, ಜನ್ಮ ಜನ್ಮದಲೀ || ೧೦೪ ||
ಸ್ವರ್ಣ ವೃಷ್ಟಿಯ ಎನ್ನ ಮನೆಯಲಿ ಕರಿಯ ಧಾನ್ಯ ಸುವೃದ್ಧಿ ದಿನ ದಿನ
ಭರದಿ ನೀ ಕಲ್ಯಾಣ ವೃದ್ಧಿಯ ಮಾಡೆ ಸಂಭ್ರಮದೀ |
ಸಿರಿಯೆ ಅತುಳ ವಿಭೂತಿ ವೃದ್ಧಿಯ ಹರುಷದಿಂದಲಿಗೈದು ಧರೆಯೊಳು
ಮೆರೆಯೆ ಸಂತತ ಉಪಮೆವಿಲ್ಲದೆ ಹರಿಯ ನಿಜ ರಾಣಿ, ಹರಿಯ ನಿಜ ರಾಣಿ || ೧೦೫ ||
ಮಂದಹಾಸ ಮುಖಾರವಿಂದಳೆ ಇಂದುಸೂರ್ಯರ ಕೋಟಿಭಾಸಳೆ
ಸುಂದರಾಂಗಿಯೆ ಪೀತವಸನಳೆ ಹೇಮಭೂಷಣಳೆ |
ಕುಂದು ಇಲ್ಲದ ಬೀಜ ಪೂರಿತ ಚಂದವಾದ ಸುಹೇಮಕಲಶಗಳಿಂದ
ನೀನೊಡಗೂಡಿ ತೀವ್ರದಿ ಬರುವುದೆನ್ನ ಮನೆಗೆ, ಬರುವುದೆನ್ನ ಮನೆಗೆ || ೧೦೬ ||
ನಮಿಪೆ ಶ್ರೀ ಹರಿ ರಾಣಿ ನಿನ್ನ ಪದ ಕಮಲಯುಗಕನವರತ ಭಕುತಿಲಿ
ಕಮಲೆ ನಿನ್ನಯ ವಿಮಲ ಕರಯುಗ ಎನ್ನ ಮಸ್ತಕದೀ |
ಮಮತೆಯಿಂದಲಿ ಇಟ್ಟು ನಿಶ್ಚಲ ಅಮಿತ ಭಾಗ್ಯವ ನೀಡೆ ತ್ವರದಿ
ಕಮಲಜಾತಳೆ ರಮೆಯೆ ನಮೋ ನಮೋ ಮಾಳ್ಪೆನನವರತ, ನಮೋ ನಮೋ ಮಾಳ್ಪೆನನವರತ || ೧೦೭
||
ಮಾತೆ ನಿನ್ನಯ ಜಠರಕಮಲ ಸುಜಾತನಾಗಿಹ ಸುತನ ತೆರದಿ
ಪ್ರೀತಿ ಪೂರ್ವಕ ಭಾಗ್ಯ ನಿಧಿಗಳನಿತ್ತು ನಿತ್ಯದಲಿ |
ನೀತ ಭಕುತೀ ಜ್ಞಾನ ಪೂರ್ವಕ ದಾತ ಗುರು ಜಗನ್ನಾಥ ವಿಟ್ಠಲನ
ಪ್ರೀತಿಗೊಳಿಸುವ ಭಾಗ್ಯ ಪಾಲಿಸಿ ಪೊರೆಯೇ ನೀ ಎನ್ನ, ಲಕ್ಷ್ಮೀ ಪೊರೆಯೇ, ಅಮ್ಮಾ ಪೊರೆಯೇ || ೧೦೮ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಅಚ್ಚ ಕನ್ನಡದಲ್ಲಿ ಲಕ್ಷ್ಮೀ ಹೃದಯ ಸ್ತೋತ್ರ ಪಾರಾಯಣ ಮಾಡಿ: ಸಂಪತ್ತು ವೃದ್ಧಿಗೆ ಇದುವೇ ದಾರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಏಕಾಗ್ರತೆಗೆ ತೊಂದರೆಯಾಗುತ್ತಿದೆಯೇ ಮಹಾವಿಷ್ಣುವಿನ ಈ ಮಂತ್ರ ಓದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಕರ ಸಂಕ್ರಾಂತಿ ಪೂಜೆಯನ್ನು ಹೇಗೆ ಮಾಡಬೇಕು, ಯಾವ ಮಂತ್ರ ಹೇಳಬೇಕು

ಮುಂದಿನ ಸುದ್ದಿ
Show comments