Publish Date: Fri, 11 Sep 2026 (16:25 IST)
Updated Date: Fri, 11 Sep 2026 (16:27 IST)
ಬೆಂಗಳೂರು: ಆಧುನಿಕ ಮುಖ್ಯಮಂತ್ರಿಗಳಾಗಿ ರಾಜ್ಯದ ಜನರ ಕಣ್ಣಿಗೆ ಕಾಣುತ್ತಿರುವ ಡಿ.ಕೆ.ಶಿವಕುಮಾರ್ ಅವರು ರಿಯಲ್ ಎಸ್ಟೇಟ್ ಏಜೆಂಟ್ ಸಿಎಂ. ದೇವಸ್ಥಾನ, ವಿಭೂತಿ, ನಾಮದಲ್ಲೇ ನೂರು ದಿನ ಮುಗಿದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ವ್ಯಂಗ್ಯವಾಡಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಳಪೆಯ ನೂರು ದಿನ ಪೂರೈಸಿದೆ. ಆದರೆ ಜನರಿಗೆ ಸಿಕ್ಕಿದ್ದು ಕೇವಲ ಮೂರು ದಿನ. ಇದೊಂದು ಯುಟರ್ನ್ ಸರ್ಕಾರ. ನೂರು ದಿನವಾಗಿರುವುದು ರಾಜ್ಯದ ಪಾಲಿಗೆ ಕರಾಳ ದಿನ ಎಂದು ಟೀಕಿಸಿದರು. ಇಡೀ ಸರ್ಕಾರದ ನೂರು ದಿನದ ಗೊಂದಲ ಗೂಡು ನಿವಾರಣೆಗೆ ಡಿಕೆಶಿ ಸತತ ದೆಹಲಿ ಯಾತ್ರೆ ಮಾಡಿದರು. ಜಾಹೀರಾತು, ಮಾಧ್ಯಮಗೋಷ್ಠಿಯಲ್ಲೇ ತೊಡಗಿದ್ದರು ಎಂದು ಹೇಳಿದರು.
ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿರುವ ಮುಖ್ಯಮಂತ್ರಿಗಳು ಲಾಲ್‍ಬಾಗ್ ನುಂಗಲು, ಸ್ಯಾಂಕಿ ಟ್ಯಾಂಕ್ ನುಂಗಲು ಹಾಗೂ ಹೆಬ್ಬಾಳ ಕೆರೆ ಜಾಗ ನುಂಗಲು ಮುಂದಾಗಿದ್ದರು. ಬಿಡದಿ ಟೌನ್‍ಶಿಪ್‍ನಲ್ಲಿ ಒಂಬತ್ತು ಸಾವಿರ ಎಕರೆ, ಆನೇಕಲ್ ನಲ್ಲಿ ಕೆಐಎಡಿಬಿ ಹೆಸರಲ್ಲಿ ಮೂರು ಸಾವಿರ ಎಕರೆ ನುಂಗಲು ಮುಂದಾದರು. ಇವೇ ಇವರ ಸಾಧನೆಗಳು ಎಂದರು.
ರಾಜ್ಯದಲ್ಲಿ ಭೀಕರ ಬರವಿದೆ. ನಾಲ್ಕು ತಿಂಗಳಲ್ಲಿ ಒಬ್ಬರಿಗೂ ಬರ ಪರಿಹಾರ ನೀಡಲಿಲ್ಲ. ಈವರೆಗೆ ಬರಕ್ಕೆ ಹಣ ಬಿಡುಗಡೆ ಮಾಡಲಿಲ್ಲ. ಈ ಕಾಂಗ್ರೆಸ್ ಸರ್ಕಾರ ಬಂದ ಮೇಲೆ 2500 ರೈತರು ಆತ್ಮಹತ್ಯೆ ಮಾಡಿಕೊಂಡರು. ಆಗಲೂ ಮೌನ ವಹಿಸಿದರು. ಗುಂಡಿಗೆ ಜನ ಬಿದ್ದು ಸತ್ತರು. ಒಂದೊಂದು ಗುಂಡಿ ಮುಚ್ಚಲು ಒಂದು ಲಕ್ಷ ತಗೊಂಡಿದ್ದಾರೆ. ಅದರಲ್ಲೂ ಸಾವಿರಾರು ರೂಪಾಯಿ ಹೊಡೆದರು ಎಂದು ಆರೋಪಿಸಿದರು.
ಉದ್ಯಾನ ಜಾಗದಲ್ಲಿ ಶೇಕಡಾ ಐದರಷ್ಟು ಜಾಗವನ್ನು ರಿಯಲ್ ಎಸ್ಟೇಟ್‍ಗೆ ನೀಡಲು ಮುಂದಾಗಿದ್ದರು. ಜನ ಒಪ್ಪಲಿಲ್ಲ. ಗಾರ್ಡನ್ ಸಿಟಿ ಎಂದು ಬೆಂಗಳೂರು ಕರೆಸಿಕೊಳ್ಳುತ್ತಿತ್ತು. ಅದಕ್ಕೂ ಕುತ್ತು ತಂದರು. ಎಲ್ಲದಕ್ಕೂ ಯೂಟರ್ನ್ ಹೊಡೆಯುತ್ತೆ ಸರ್ಕಾರ. ಲಾಲ್‍ಬಾಗ್‍ನಲ್ಲಿ ಹದಿನೈದು ಎಕರೆ ಅದಾನಿಗೆ ಕೊಡ್ತೇವೆ ಎಂದರು. ಅದಾನಿಗೆ ಕೆಂಪು ಹಾಸು ಹಾಕಿ ಸ್ವಾಗತಿಸಿದರು. ಈಗ ಲಾಲ್ ಬಾಗ್ ಕೊಡಲ್ಲ ಅಂತ ಯೂಟರ್ನ್ ಹೊಡೆದರು ಎಂದು ವಿವರಿಸಿದರು.
ಡಿ.ಕೆ.ಶಿ ಅವರು ಬಂದ ಮೇಲೆ ಕಾವೇರಿ ವಿಚಾರದಲ್ಲಿ ನಾಲ್ಕು ಬಾರಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಎಲ್ಲಾ ರೀತಿ ಇವರು ವಿಫಲವಾದರು. ಸುಮ್ಮನೆ ಅಭಿವೃದ್ಧಿಗೆ ಸರ್ಕಾರ ಪಣ ತೊಟ್ಟಿದೆ ಎಂದು ಪುಟಗಟ್ಟಲೆ ಜಾಹೀರಾತು ನೀಡ್ತಾರೆ. ಪಿಡಿ ಖಾತೆ ಹಣವನ್ನು ಬರಕ್ಕೆ ಬಳಸಲು ಬರುವುದಿಲ್ಲ ಎಂಬ ಜ್ಞಾನ ಈ ಸರ್ಕಾರಕ್ಕೆ ಇಲ್ಲ. ಸರ್ಕಾರ ದಿವಾಳಿಯಾಗಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಇಲ್ಲ ಎಂದರು.
ಗೃಹಲಕ್ಷ್ಮಿ ಹಣದಲ್ಲಿ ಐದು ಸಾವಿರ ಕೋಟಿ ತಿಂದರು. ಅದಕ್ಕೆ ಲೆಕ್ಕ ಇಲ್ಲ. ಆ ಖಾತೆ ಸಚಿವರು ಮನೆಗೆ ಹೋದರು. ಇವರ ಬಳಿ ಹಣ ಇದ್ದಿದ್ದರೆ ಯಾಕೆ ಕೊಡಲಲ್ಲ. ಕದ್ದಿರುವುದೇ ಇವರ ಸಾಧನೆ. ಡಿಕೆಶಿ ಅವರು ಮುಖ್ಯಮಂತ್ರಿಯಾದ ಮೇಲೆ ಕೇವಲ ಘೋಷಣೆಗಳನ್ನೂ ಭರಪೂರ ಮಾಡ್ತಾರೆ. ಬ್ರ್ಯಾಂಡ್ ಬೆಂಗಳೂರು ಎಂದರು. ಆ ಬ್ರ್ಯಾಂಡ್ ಬೆಂಗಳೂರು ಕಸದ ಬುಟ್ಟಿಗೆ ಬಿದ್ದಿದೆ. ಭಾಷಣ ಮಾಡುವಾಗ ಸಾಕ್ಷಿ ಗುಡ್ಡೆ ಹಾಕ್ತಾರೆ. ಈಗ ಕಸದ ಗುಡ್ಡೆ ಎದ್ದು ನಿಂತಿದೆ ಎಂದು ಹೇಳಿದರು.
ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರು ರೀಲ್ಸ್ ಹಾಕಿದ್ದೇ ಹಾಕಿದ್ದು. ರೀಲ್ ಮಾಸ್ಟರ್ ಅವರು. ಬಿಡಾಡಿ ಕಾರನ್ನು ಚಂದ್ರಲೋಕ ಇಲ್ಲವೇ ಸಿಂಗಪುರಕ್ಕೆ ತಗೆದುಕೊಂಡು ಹೋಗಲಿಲ್ಲ. ಸ್ಟಿಕರ್ ಅಂಟಿಸಿದ್ದಕ್ಕೆ ಸೀಮಿತವಾಯಿತು. ಕಸದಿಂದ ಸ್ವಾತಂತ್ರ್ಯ ಎಂದರು. ಡಿಕೆಶಿ ಅವರ ಮನೆ ಮುಂದೆಯೇ ಕಸದ ರಾಶಿ ಇದೆ. ಬ್ಯಾರಿಕೇಡ್‍ಗಳು ಮುರಿದು ಬಿದ್ದಿವೆ ಎಂದರು.
ಎಲ್ಲದಕ್ಕೂ ತೆರಿಗೆ ಹಾಕಿದರು. ಕಸಕ್ಕೆ ಅಪಾರ್ಟ್‍ಮೆಂಟ್‍ಗಳಲ್ಲಿ 40 ರೂಪಾಯಿ ತಗೋತಿದ್ರು ಈಗ ಅದು 400 ರೂಪಾಯಿ ಆಗಿದೆ. ನೀರಿಗೆ, ಹಾಲಿಗೆ, ಮದ್ಯಕ್ಕೆ ತೆರಿಗೆ ಹಾಕಿದರು. ಮುದ್ರಾಂಕ ಸುಂಕ ದುಪ್ಪಟ್ಟಾಗಿದೆ. ಇದೊಂದು ಲಯ ತಪ್ಪಿದ ಸರ್ಕಾರ. ಡಿಕೆಶಿ ಅವರು ಬಂದ ಮೇಲೆ ಬೆಂಗಳೂರು ಗುಂಡಿಗಳ ನಗರ ಆಗಿದೆ. ಅದಕ್ಕೆ ಶಾಪ ಹಾಕ್ತಾ ಇದ್ದಾರೆ. ಅದಕ್ಕೆಂದೆ ಜಿಬಿಎ ಚುನಾವಣೆ ಮುಂದಕ್ಕೆ ಹಾಕ್ತ ಇದ್ದಾರೆ ಎಂದು ದೂರಿದರು.
ಮೋದಿ ಅವರು ಕಿಸಾನ್ ಸಮ್ಮಾನ್ ಯೋಜನೆಯಡಿ ಆರು ಸಾವಿರ ನೀಡುತ್ತಿದ್ದರು. ಬಿಜೆಪಿ ಸರ್ಕಾರ ಅದಕ್ಕೆ ನಾಲ್ಕು ಸಾವಿರ ಸೇರಿಸಿ ಒಟ್ಟು ಹತ್ತು ಸಾವಿರ ಹಾಕ್ತಿದ್ದರು. ಅದನ್ನು ಕಾಂಗ್ರೆಸ್ ಸರ್ಕಾರ ತಡೆಹಿಡಿಯಿತು. ವಿದ್ಯಾನಿಧಿ ಯೋಜನೆ ಇತ್ತು. ಅದಕ್ಕೂ ಕಲ್ಲು ಹಾಕಿದರು. ಇದು ರೈತ ಪರ ಎಂದು ಹೇಳಿಕೊಳ್ಳಲು ಯೋಗ್ಯತೆ ಇಲ್ಲದ ಸರ್ಕಾರ. ಜನರ ನಂಬಿಕೆಗೆ ದ್ರೋಹ ಬಗೆದ ಸರ್ಕಾರ. ವಿಶ್ವಾಸದ್ರೋಹಿ ಸರ್ಕಾರ. ಸಾಧನೆ ಶೂನ್ಯ ಎಂದರು.
ಡಿಕೆಶಿ ಸರ್ಕಾರದ ಮೊದಲ ವಿಕೆಟ್ ಬಿದ್ದಿದ್ದೇ ಸಾಧನೆ. ಎರಡು ಮಂತ್ರಿಗಳ ವಿಕೆಟ್ ಇನ್ನೂ ಬೀಳಲಿದೆ. ಸಚಿವರೊಬ್ಬರು ರಾಜೀನಾಮೆ ನೀಡಿದಾಗ ಸಂತಾಪ ಸಭೆ ಮಾಡುವ ಬದಲು ಸಾಧನಾ ಸಮಾವೇಶ ಮಾಡಿದೆ ಈ ಸರ್ಕಾರ. ಕೆಪಿಎಸ್‍ಸಿ ಹಗರಣ ಕಾಂಗ್ರೆಸ್ ಮತ್ತು ಪ್ರಿಯಾಂಕ್ ಖರ್ಗೆ ಬುಡಕ್ಕೆ ಬಂದಿದೆ. ಎಂಜಿನಿಯರ್ ನೇಮಕಾತಿಯಲ್ಲಿ ಬೋಗಸ್ ಮಾಡಿರುವುದಕ್ಕೆ ಸಾಕ್ಷಿ ಇದೆ. ಸರ್ಕಾರ ಇದರಲ್ಲೂ ಲೂಟಿ ಮಾಡಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದ ಹಳೆ ಯೋಜನೆಗೆ ಇವರು ಹೊಸ ಹೆಸರು ಕೊಟ್ಟು ಜಾರಿ ಮಾಡ್ತಾ ಇದ್ದಾರೆ. ಲಂಬಾಣಿ ಸಮುದಾಯಕ್ಕೆ ಮೋದಿ ಅವರು ಒಂದು ಲಕ್ಷ ಹಕ್ಕು ಪತ್ರ ನೀಡಿದ್ದರು. ನಾನು ಸಚಿವನಾಗಿದ್ದಾಗ ಆಯಾ ಜಿಲ್ಲೆಯಲ್ಲಿ ಹಕ್ಕುಪತ್ರ ನೀಡಿದ್ದೆ. ಇದನ್ನೇ ಇವರು ಭೂಮಿ ಹಕ್ಕು ಅಂತ ಹೇಳಿಕೊಂಡರು. ರೈತರ ಹೊಲ ಊಳಲು ಉಳುಮೆ ಹಕ್ಕು ಜಾರಿ ಮಾಡಿದ್ದೇವೆ ಎಂದು ಹೇಳ್ತಾ ಇದ್ದಾರೆ. ಅದನ್ನೂ ನಾವು ಹಿಂದೆ ಜಾರಿ ಮಾಡಿದ್ದೆವು. ಸಕಾಲವನ್ನು ಇವರು ಪ್ರಜಾಸೇವೆ ಮಾಡಿದ್ದಾರೆ. ಅದಕ್ಕೊಂದು ಇಲಾಖೆ ಏಕೆ ಎಂದು ಪ್ರಶ್ನಿಸಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ