Publish Date: Sun, 19 Aug 2007 (12:21 IST)
Updated Date: Sun, 19 Aug 2007 (12:21 IST)
ಅಧಿಕಾರ ಹಸ್ತಾಂತರದ ದಿನಾಂಕ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಚಟುವಟಿಕೆ ಬಿರುಸುಗೊಂಡಿದೆ.
ಬಿಜೆಪಿ ರಾಷ್ಟ್ತ್ರೀಯ ಮುಖಂಡ ವೆಂಕಯ್ಯನಾಯ್ಡು ಬೆಂಗಳೂರಿಗೆ ಶನಿವಾರ ಆಗಮಿಸಿರುವುದು ಹಲವಾರು ಊಹಾಪೋಹಗಳಿಗೆ ಕಾರಣವಾಗಿದ್ದು, ಅಧಿಕಾರ ಹಸ್ತಾಂತರದ ಗೊಂದಲ ಮುಂದುವರೆದಿದೆ.
ಜೆಡಿಎಸ್ ಹಾಗೂ ಬಿಜೆಪಿ ರಹಸ್ಯ ಸಮಾಲೋಚನೆಗಳು ಪ್ರತ್ಯೇಕವಾಗಿ ನಡೆದಿದ್ದು, ಅಧಿಕಾರ ಹಸ್ತಾಂತರ ಕುರಿತು ಉಭಯ ಪಕ್ಷಗಳಲ್ಲೂ ಕೆಂಡ ಮುಚ್ಚಿದ ವಾತಾವರಣ ನಿರ್ಮಾಣವಾಗಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ನೆಪದಲ್ಲಿ ಗುರುವಾರ ಸೇರಿದ್ದ ಸಭೆಯಲ್ಲಿ ಅಧಿಕಾರ ಹಸ್ತಾಂತರ ಕುರಿತೇ ಹೆಚ್ಚು ಚರ್ಚೆಯಾಗಿದ್ದು ಪಕ್ಷದಲ್ಲಿನ ಅಪಸ್ವರ ಬಹಿರಂಗಗೊಂಡಿದೆ. ಪಕ್ಷದಲ್ಲಿನ ಭಿನ್ನಮತ ಅತಿರೇಕಕ್ಕೆ ಹೋಗದಂತೆ ತಡೆಯಲು ವೆಂಕಯ್ಯನಾಯ್ಡು ಅವರು ಆಗಮಿಸಿದ್ದಾರೆ ಎನ್ನಲಾಗಿದೆ.
ಮುಂದಿನ ಮುಖ್ಯಮಂತ್ರಿ ತಾವೇ ಎಂದು ಬೊಬ್ಬೆ ಇಟ್ಟು ಜೆಡಿಎಸ್ ಮೇಲೆ ಒತ್ತಡ ತಂತ್ರವನ್ನು ಮುಂದುವರೆಸಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಡಿದ ಮಾತುಗಳಿಂದ ತಾಳ್ಮೆ ಕಳೆದುಕೊಂಡ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವಧಿಗೆ ಮುನ್ನವೇ ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸುವುದಾಗಿ ಹೇಳಿದ್ದರಿಂದ ಇಕ್ಕಟ್ಟಿನಲ್ಲಿ ಸಿಲುಕಿದ ಯಡಿಯೂರಪ್ಪ ಅಧಿಕಾರ ಹಸ್ತಾಂತರ ಕುರಿತು ಮೌನಕ್ಕೆ ಶರಣಾಗುವುದಾಗಿ ಹೇಳಿಕೆ ಏನೋ ನೀಡಿದ್ದಾರೆ.
ಆದರೆ ತಮಗೆ ಅಧಿಕಾರ ದೊರೆಯುವ ಬಗ್ಗೆ ಖಚಿತತೆ ಇಲ್ಲದಿರುವುದರಿಂದ ಬಿಜೆಪಿಯಲ್ಲಿ ತಳ ಮಳ ಹೆಚ್ಚಾಗಿದೆ.
ಯಡಿಯೂರಪ್ಪನವರ ಮೇಲೆ ಮುನಿಸಿಕೊಂಡನಂತರ ಶುಕ್ರವಾರ ವಿಧಾನಸೌಧದಲ್ಲಿ ಅತಿ ವೃಷ್ಟಿಕುರಿತು ಚರ್ಚಿಸಲು ನಡೆದ ಸರ್ವ ಪಕ್ಷ ಸಭೆಯಲ್ಲಿ ಅವರಿಬ್ಬರ ಭೇಟಿ ಆದರೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೈಕುಲುಕಲು ಮುಂದಾದ ಯಡಿಯೂರಪ್ಪನವರಿಗೆ ಆಶಾಭಂಗವಾಗಿದೆ.
ಅದನ್ನು ಗಮನಿಸಲೇ ಇಲ್ಲವೇನೋ ಎನ್ನುವಂತೆ ಮುಖ್ಯಮಂತ್ರಿಗಳು ವರ್ತಿಸಿರುವುದು ಅವರ ಕೋಪ ಇಳಿದಿಲ್ಲ ಎನ್ನುವುದು ಖಚಿತಗೊಂಡಿದೆ.
ದೇವರು, ಜೋತಿಷ್ಯ ಮುಂತಾದವುಗಳ ಮೇಲೆ ಅಪಾರ ನಂಬಿಕೆ ಇರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ತಿರುಚಿಯ ದೇವಸ್ಥಾನವೊಂದಕ್ಕೆ ತೆರಳಿ ಅಲ್ಲಿಂದ ಹೊರಬಂದನಂತರ ಕರ್ನಾಟಕ ಮಾಜಿ ಮುಖ್ಯಮಂತ್ರಿ ಧರಂಸಿಂಣ್ ಅವರೂ ಸಹಾ ಅದೇ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಕುತೂಹಲ ಕೆರಳಿಸಿದೆ.