Publish Date: Wed, 22 Oct 2008 (10:08 IST)
Updated Date: Wed, 22 Oct 2008 (10:08 IST)
ಆಂಧ್ರಪ್ರದೇಶದ ಪೂರ್ವಕರಾವಳಿಯಲ್ಲಿನ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್‌ಡಿಎಸ್‌ಸಿ)ಚಂದ್ರಯಾನ-1 ನೌಕೆ ಬುಧವಾರ 6.22ರ ವೇಳೆ ಯಶಸ್ವಿಯಾಗಿ ಉಡ್ಡಯನಗೊಂಡಿದ್ದು, ಈ ಮೂಲಕ ಬಾಹ್ಯಾಕಾಶ ಇತಿಹಾಸದಲ್ಲೇ ನೂತನ ಮೈಲಿಗಲ್ಲು ಸ್ಥಾಪಿಸಿದೆ.
ಉಡಾವಣೆಗೆ ಕೆಲಗಂಟೆಗಳ ಮುಂದೆ ಶ್ರೀಹರಿಕೋಟಾದಲ್ಲಿ ಮಳೆ ಸುರಿಯುತ್ತಿದ್ದಾರೂ ಈ ಬಗ್ಗೆ ವಿಜ್ಞಾನಿಗಳು ಹೆಚ್ಚು ಆತಂಕಗೊಂಡಿರಿರಲಿಲ್ಲ. ಆದರೆ, ಬಿರುಗಾಳಿ, ಗುಡುಗು ಮಿಂಚು ಬಂದರೆ ಯಾನವನ್ನೇ ಮುಂದೂಡಬೇಕೆನ್ನುವ ಆತಂಕವು ವಿಜ್ಞಾನಿಗಳಲ್ಲಿ ಮನೆ ಮಾಡಿತ್ತು. ಆದರೆ, ಚಂದ್ರಯಾನ-1 ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ಉಡ್ಡಯನಗೊಂಡಿದ್ದು, ಭಾರತದ ಬಾಹ್ಯಾಕಾಶ ಪಾಲಿಗೆ ಈ ದಿನವನ್ನು ಸುವರ್ಣ ದಿನವನ್ನಾಗಿಸಿತು.
ಚಂದ್ರಯಾನ ಯೋಜನೆ ಯಶಸ್ವಿಯಾಗುವುದರ ಜೊತೆಗೆ ಭಾರತವು ಚಂದ್ರನ ಕುರಿತು ಸಂಶೋಧನ ಮಾಡಿರುವ ಬೆರಳೆಣಿಕೆಯ ರಾಷ್ಟ್ರಗಳಾಗ ರಶ್ಯಾ, ಅಮೆರಿಕ, ಜಪಾನ್, ಚೀನಾ ಮತ್ತು ಯುರೋಪ್ ದೇಶಗಳ ಸಾಲಿಗೆ ಸೇರಿದೆ.
ಈ ನೌಕೆಗೆ ಒಟ್ಟು 11 ಉಪಕರಣಗಳನ್ನು ಅಳವಡಿಸಿದ್ದು, ಇದರಲ್ಲಿ ಒಂದು ಉಪಕರಣ ಚಂದ್ರನ ಮೇಲಿಳಿಯಲಿದ್ದು, ಚಂದ್ರನ ಮೇಲ್ಮೈ ಕುರಿತು ಅಧ್ಯಯನ ಮಾಡಲಿದೆ. ಚಂದ್ರನ ಕಕ್ಷೆಯನ್ನು ಸುತ್ತಲಿರುವ ಚಂದ್ರಯಾನ-1 ಎರಡು ವರ್ಷ ಚಂದ್ರನ ಕುರಿತು ರೇಡಿಯೋ ತರಂಗಗಳ ರೂಪದಲ್ಲಿ ಮಾಹಿತಿ ರವಾನಿಸಲಿದೆ.