Publish Date: Sun, 27 Apr 2008 (12:14 IST)
Updated Date: Sun, 27 Apr 2008 (12:14 IST)
ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರವನ್ನು ಪಡೆಯಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ರಾಜ್ಯಕ್ಕೆ ಕರೆಸಿಕೊಂಡಿದೆ.
ಇಂದು (ಭಾನುವಾರ) ಪುತ್ತೂರಿನಲ್ಲಿ ಏರ್ಪಡಿಸಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ನರೇಂದ್ರ ಮೋದಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈಗಾಗಲೇ ನಗರದಲ್ಲಿ ನಾಯಕರ ಬಟಿಂಗ್ಸ್, ಕಟೌಟ್ ರಾರಾಜಿಸುತ್ತಿದೆ. ರಾಜ್ಯ ಚುನಾವಣೆಯಲ್ಲಿ ಬಿಜೆಪಿಯನ್ನು ಸರ್ವವಿಧದಲ್ಲೂ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹರಸಾಹಸ ನಡೆಸಿರುವ ಬಿಜೆಪಿ ಮುಖಂಡರು ಮೋದಿ ಮೂಲಕ ಜನರಿಗೆ ಮೋಡಿ ಮಾಡಲು ನಿರ್ಧರಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಗಿರುವ ಪುತ್ತೂರಿನಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಬಂಡಾಯದ ಬಿಸಿ ತಾರಕ್ಕಕೇರಿದೆ. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರನ್ನು ನಿರಾಕರಿಸಿ ಮಲ್ಲಿಕಾ ಪ್ರಸಾದ್‌ಗೆ ಮಣೆ ಹಾಕಿರುವುದು ಬಂಡಾಯಕ್ಕೆ ಕಾರಣವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶಕುಂತಲಾ ಶೆಟ್ಟಿ, ಬಿಜೆಪಿ ಅಭ್ಯರ್ಥಿ ಪ್ರಸಾದ್ ಅವರ ಪ್ರಬಲ ಪೈಪೋಟಿ.
ಈ ಮಧ್ಯೆ, ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ಅವರ ಪ್ರತಿಷ್ಠೆಯ ಕಣವಾಗಿರುವ ಪುತ್ತೂರಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲೇ ಬೇಕಾದ ಅನಿವಾರ್ಯತೆ ಅವರಿಗಿದೆ. ಒಂದು ವಾರಗಳ ಕಾಲ ರಾಜ್ಯಾದ್ಯಂತ ಚುನಾವಣಾ ಪ್ರವಾಸ ಕೈಗೊಳ್ಳಲಿರುವ ಮೋದಿ, ಕರಾವಳಿ ಮೂಲಕವೇ ಪ್ರವಾಸವನ್ನು ಆರಂಭಿಸಲಿದ್ದಾರೆ.