Publish Date: Mon, 21 Apr 2008 (19:16 IST)
Updated Date: Mon, 21 Apr 2008 (19:15 IST)
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದು ಈ ಸಂಬಂಧ ನಾಮಪತ್ರ ಸಲ್ಲಿಸಿದ್ದಾರೆ.
ಇಲ್ಲಿನ ಜ್ಯೂನಿಯರ್ ಕಾಲೇಜು ಮೈದಾನದಿಂದ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಹೊರಟು ನಾಮಪತ್ರ ಸಲ್ಲಿಸಿದ ಕುಮಾರಸ್ವಾಮಿಯವರೊಟ್ಟಿಗೆ ಎಚ್.ಸಿ.ಬಾಲಕೃಷ್ಣ ಸೇರಿದಂತೆ ನಗರಸಭೆ ಅಧ್ಯಕ್ಷರು, ಸದಸ್ಯರು, ಸಾವಿರಾರು ಮುಖಂಡರು ಇದ್ದುದು ವಿಶೇಷವಾಗಿತ್ತು.
ಇವರಿಗೆದುರಾಗಿ ಕಾಂಗ್ರೆಸ್ ವತಿಯಿಂದ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಸ್ಪರ್ಧಿಸಲು ಬಯಸಿದ್ದಾರೆ. ಕಾಂಗ್ರೆಸ್ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಅವರ ಹೆಸರು ಇಲ್ಲವಾದರೂ ಅದು ತಮಗೇ ಒಲಿಯುವುದು ಎಂದು ಅವರು ನಂಬಿದ್ದಾರೆ.
ಸುಮಾರು 35 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಿರುವ ಲಿಂಗಪ್ಪ ರಾಮನಗರ ವಿಧಾನಸಭಾ ಕ್ಷೇತ್ರವೊಂದರಿಂದಲೇ 3 ಬಾರಿ ಜಯಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ತಮ್ಮ ಬೇಡಿಕೆಗೆ ಸ್ಪಂದಿಸಲಿದೆ ಎಂಬುದು ಲಿಂಗಪ್ಪನವರ ನೀರೀಕ್ಷೆ. ಬಿಜೆಪಿ ವತಿಯಿಂದ ಈಗಾಗಲೇ ಎಂ.ರುದ್ರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಜೆಡಿಎಸ್-ಕಾಂಗ್ರೆಸ್ ನಡುವೆ ನೇರ ಹಣಾಹಣಿ ಕಂಡುಬರಲಿದೆ ಎಂದು ಕ್ಷೇತ್ರದ ಜನ ಅಭಿಪ್ರಾಯಪಡುತ್ತಾರೆ.