ಬಜೆಟ್‌ನಲ್ಲಿ ರೈತರಿಗೆ ಹೆಚ್ಚಿನ ಕಾಳಜಿ ಇರಲಿ
ಚಂದ್ರಾವತಿ ಬಡ್ಡಡ್ಕ
ನಮ್ಮ ರಾಷ್ಟ್ರದ ಆರ್ಥಿಕತೆಯಲ್ಲಿ ಪ್ರಚಂಡ ಬದಲಾವಣೆಯಾಗಬೇಕಿತ್ತು. ಪ್ರಸ್ತುತ ಸರಕಾರದ ಪ್ರಧಾನಿಯಾಗಿರುವ ಮನಮೋಹನ್ ಸಿಂಗ್ ಬಹು ದೊಡ್ಡ ಅರ್ಥಶಾಸ್ತ್ರಜ್ಞ. ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದವರು. ಆದರೆ ದೇಶದ ಪ್ರಧಾನಿಯಾಗಿರುವ ಅವರು ಮಿತಿಯೊಳಗೆ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಇರುವ ಕಾರಣ, ಭಾರತ ಮಾಂತ್ರಿಕ ಬದಲಾವಣೆಯನ್ನು ಕಾಣಲು ಸಾಧ್ಯವಾಗಿಲ್ಲ. ಕೇಂದ್ರದ ವಿತ್ತ ಸಚಿವ ಚಿದಂಬರಂ ಸಹ ಆರ್ಥಿಕ ತಜ್ಞ.
ಜಾಗತೀಕರಣಕ್ಕೆ, ಉದಾರಿಕರಣಕ್ಕೆ 90ರ ದಶಕದ ಆದಿಯಲ್ಲಿ ಭಾರತ ತನ್ನನ್ನು ಒಡ್ಡಿಕೊಂಡಿರುವ ಬಳಿಕ ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಬದಲಾವಣೆ ಕಾಣತೊಡಗಿತು. ಜಿಡಿಪಿಯು ಹೊಸ ಪಥದತ್ತ ಸಾಗಿತು ಎನ್ನಲಡ್ಡಿಯಿಲ್ಲ. ಭಾರತದ ಒಟ್ಟಾರೆ ಆರ್ಥಿಕತೆಯಲ್ಲಿ ಬದಲಾವಣೆಯಾಗಿದೆ, ಸುಧಾರಣೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಮಟ್ಟ ಏರಿದೆ. ತೃತೀಯ ಜಗತ್ತಿನ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸಾಲಿನಲ್ಲಿದ್ದ ಭಾರತಕ್ಕೆ ಉದಯೋನ್ಮುಖ ಆರ್ಥಿಕತೆಯ ಭಾರತ ಎಂಬ ಭಡ್ತಿ ಸಿಕ್ಕಿದೆ. ಭಾರತದ ಒಟ್ಟಾರೆ ಅಭಿವೃದ್ಧಿ ಸಂತಸಕರ. ಜಾಗತಿಕ ಆರ್ಥಿಕತೆಯಲ್ಲಿ ಭಾರತಕ್ಕೆ ಮನ್ನಣೆಗಳು ಸಿಕ್ಕುತ್ತಿವೆ.
ಆದರೆ ಹಳ್ಳಿಗಳಿ0ದ ತುಂಬಿರುವ ಭಾರತದಲ್ಲಿ ಉಳ್ಳವರ ಮತ್ತು ಇಲ್ಲದವರ ಅಂತರ ಮಾತ್ರ ಹಾಗೆ ಮುಂದುವರಿಯುತ್ತಿದೆ. ನಗರದತ್ತ ಗ್ರಾಮೀಣ ಪ್ರದೇಶಗಳವರ ವಲಸೆಯಲ್ಲಿ ಬದಲಾವಣೆ ಇಲ್ಲ. ಕೃಷಿಕರ ಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಇಂದಿಗೂ ಮನೆಮಂದಿಯೆಲ್ಲ ಪೌಷ್ಠಿಕ ಆಹಾರ ಸೇವಿಸುವಷ್ಟು ಸಂಪಾದನೆ ಇಲ್ಲ. ಎಷ್ಟೋ ಕುಟುಂಬಗಳಿಗೆ ಹಾಲು ಮೊಸರು ಧಕ್ಕುತ್ತಿಲ್ಲ. ಅವಶ್ಯಕ ಔಷಧೋಪಚಾರ ಮಾಡಿಕೊಳ್ಳುವ ಶಕ್ತಿ ಇಲ್ಲ. ಹೀಗೆ ಪಟ್ಟಿ ಮಾಡಿದರೆ ಇಲ್ಲಗಳ ಸಂಖ್ಯೆ ದೊಡ್ಡದಿದೆ.
ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಒರಿಸ್ಸಾ, ಚತ್ತೀಸ್‌ಗಢ ಮುಂತಾದ ರಾಜ್ಯಗಳಲ್ಲಿ ರೈತರು ಸರಣಿಯೋಪಾದಿಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕರ್ನಾಟಕದಲ್ಲಿ ಕಳೆದ ಬಾರಿಯ 2004ರ ಚುನಾವಣೆಯಲ್ಲಿ ಕೃಷ್ಣ ಸರಕಾರ ಮಣ್ಣುಕಚ್ಚಲು ಇದೂ ಒಂದು ಕಾರಣ. ಸರಕಾರ ರೈತರ ಅಭಿವೃದ್ಧಿ ಮತ್ತು ಕೃಷಿ ಅಭಿವೃದ್ಧಿ ದರಕ್ಕೆ ಒತ್ತು ಕೊಡುತ್ತಿದೆ. ಆದರೆ ಭಾರತದ ಅಭಿವೃದ್ಧಿಯ ಓಘಕ್ಕೆ ತಕ್ಕಂತೆ ಕೃಷಿಯಲ್ಲಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಬೆಳವಣಿಗೆ ಕಾಣುತ್ತಿಲ್ಲ.
80ರ ದಶಕಕ್ಕೆ ಹೋಲಿಸಿದರೆ, ಶೈಕ್ಷಣಿಕವಾಗಿ ಹಳ್ಳಿಗಳು ಪರವಾಗಿಲ್ಲ ಎನ್ನಬಹುದು. ಇಂತಹ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳೂ ಉಳ್ಳವರ ಸೊತ್ತು. ಆದರೆ ಕೃಷಿವಲಯ ಮಾತ್ರ ಸಾಗಬೇಕಾದ ದಾರಿ ಬಹಳ ದೂರವಿದೆ. ಸಣ್ಣ ಮತ್ತು ಮಧ್ಯಮ ಕೃಷಿಕರ ಸ್ಥಿತಿ ಶೋಚನೀಯ. ಕಾಲಿಗಿದ್ದರೆ ತಲೆಗಿಲ್ಲ, ತಲೆಗಿದ್ದರೆ ಕಾಲಿಗಿಲ್ಲ ಎಂಬ ಸ್ಥಿತಿಯಲ್ಲಿ ದಿನದೂಡುವ ಪರಿಸ್ಥಿತಿ.
ಇಪ್ಪತ್ತೊಂದನೆ ಶತಮಾನಕ್ಕೆ ಕಾಲಿಟ್ಟರೂ, ಅದೇ ಹಳೆಯ ಕಾಲದ ಕೃಷಿ ಪದ್ಧತಿಯನ್ನೇ ಅನುಸರಿಸುವಿಕೆ. ಏತನ್ಮಧ್ಯೆ ಕೃಷಿಪದ್ಧತಿಯಲ್ಲಿ ಹಾಸುಹೊಕ್ಕಾಗಿರುವ ಮೂಢನಂಬಿಕೆ ಸಂಪೂರ್ಣವಾಗಿ ಹೋಗಿದೆ ಎಂದು ಹೇಳಲಾಗದು. ಎಲ್ಲ ಅವಶ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಆದರೆ ಕೃಷಿಕನಿಗೆ ಮಾತ್ರ ತಾನು ಬೆಳೆದ ಬೆಳೆಗೆ ಸೂಕ್ತ ಪ್ರತಿಫಲ ಲಭಿಸುತ್ತಿಲ್ಲ. ಇದರೊಂದಿಗೆ ಗ್ರಾಮೀಣಾಭಿವೃದ್ಧಿಗಾಗಿ ಸರಕಾರ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಅರ್ಹರಿಗೆ ತಲುಪುತ್ತಿಲ್ಲ, ತಲುಪುವ ಮುನ್ನವೇ ಸೋರುತ್ತಿದೆ.
ಹಿಂದೆಲ್ಲಾದರೆ ಕೂಡು ಕುಟುಂಬವಿತ್ತು. ಈಗ ಇವುಗಳೆಲ್ಲ ವಿಭಕ್ತ ಕುಟುಂಬವಾಗುತ್ತಿರುವ ಕಾರಣ ಮತ್ತು ಯುವಜನತೆ ಹೆಚ್ಚು ಸಂಪಾದನೆಯ ಗುರಿಯೊಂದಿಗೆ ನಗರಗಳತ್ತ ಆಕರ್ಷಿತರಾಗುತ್ತಿರುವ ಕಾರಣ ಕೃಷಿ ಚಟುವಟಿಕೆಗೆ ಅಗತ್ಯವಿರುವ ಕಾರ್ಮಿಕರ ಕೊರತೆ ಸಮಸ್ಯೆ ಬಿಗಡಾಯಿಸಿದೆ. ಬಡ ರೈತನೊಬ್ಬ ಗಳಿಸಿದ್ದೆಲ್ಲ, ಕೃಷಿಯ ನಿರ್ವಹಣೆಗೆ ಮತ್ತು ಕಾರ್ಮಿಕರಿಗೆ ನೀಡುವ ಸಂಬಳಕ್ಕೂ ಸಾಕಾಗದ ಪರಿಸ್ಥಿತಿ ಅನೇಕ ಕಡೆಗಳಲ್ಲಿವೆ.
ಕೃಷಿವಲಯದ ಅಭಿವೃದ್ಧಿಗೆ ಮುಂದಾಗಿರುವ ಸರಕಾರ ರೈತರ ಸ್ಥಿತಿಗಳ ಸುಧಾರಣೆಗೆ ತನ್ನ ಬಜೆಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಿದಲ್ಲಿ ರಾಷ್ಟ್ರದ ಅಭಿವೃದ್ಧಿಯೊಳಗಿನ ಅಂತರವನ್ನು ನಿವಾರಿಸಬಹುದು. ಇದಲ್ಲದೆ, ಕೃಷಿ ವಿಧಾನದಲ್ಲಿನ ಆಮೂಲಾಗ್ರ ಬದಲಾವಣೆ ಮತ್ತು ಕೃಷಿಕರಿಗೆ ತಿಳುವಳಿಕೆಯತ್ತಲೂ ಗಮನ ಹರಿಸಬೇಕಿದೆ. ಒಂದು ಕಾಲದಲ್ಲಿ ಔದ್ಯಮಿಕ ಕ್ರಾಂತಿಗೆ ರಾಷ್ಟ್ರವು ಯುದ್ಧೋಪಾದಿಯಲ್ಲಿ ಮುಂದಾದಂತೆ, ಕೃಷಿವಲಯದತ್ತ ಗಮನ ಹರಿಸಿದರೆ ಬೆನ್ನು ಮುರಿದುಕೊಂಡಿರುವ ಭಾರತದ ಬೆನ್ನೆಲುಬು ಕೃಷಿಕ ಕೊಂಚ ಉಸಿರಾಡಿಯಾನು.