Publish Date: Thu, 21 Feb 2008 (14:04 IST)
Updated Date: Thu, 21 Feb 2008 (14:04 IST)
ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು ಮಂಡಿಸಲಿರುವ ಬಜೆಟ್‌ನಿಂದ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಕೆಲ ನಿರೀಕ್ಷೆ ಮತ್ತು ರಿಯಾಯಿತಿಗಳನ್ನು ಇಟ್ಟುಕೊಂಡಿವೆ. ಇತ್ತೀಚೆಗಷ್ಟೆ ಸಾರ್ವಜನಿಕ ವಲಯದ ಬ್ಯಾಂಕುಗಳ ಮುಖ್ಯ ಕಾರ್ಯನಿರ್ವಾಹಕರುಗಳು ಪಿ ಚಿದಂಬರಂ ಅವರನ್ನು ಭೇಟಿಯಾಗಿ ಬ್ಯಾಂಕಿಂಗ್ ವಲಯ ಬಜೆಟ್‌ನಲ್ಲಿ ಕೆಲ ರಿಯಾಯಿತಿಗಳನ್ನು ನೀಡುವಂತೆ ಕೇಳಿಕೊಂಡಿದ್ದಾರೆ.
ಬ್ಯಾಂಕ್ ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ನಿವೃತ್ತಿ ವೇತನ ನಿಧಿಗೆ ಬ್ಯಾಂಕ್‌ನಿಂದ ನೀಡಲಾಗುತ್ತಿರುವ ಮೊತ್ತದಲ್ಲಿ ಕಡಿತ; ಗ್ರ್ಯಾಚುಯಿಟಿ ಫಂಡ್‌ಗಳಿಗೆ ನೀಡಲಾಗುತ್ತಿರುವ ಬ್ಯಾಂಕ್ ಮೂಲಕ ಸಂದಾಯವಾಗುತ್ತಿರುವ ಮೊತ್ತದಲ್ಲಿ ಕಡಿತಗೊಳಿಸುವುದು; ಸದರಿ ಕಡಿತ ವಾರ್ಷಿಕ ಸಂಬಳದ ಮೊತ್ತದ ಶೇ 8.5 ಮೀರಕೂಡದು; ಕೆಟ್ಟ ಮತ್ತು ಸಂಶಯಾಸ್ಪದ ಸಾಲಗಳ ವಸೂಲಾತಿಗೆ ಸಂಬಂಧಿಸಿದಂತೆ ನಿಯಮಗಳಲ್ಲಿ ಬದಲಾವಣೆ; ಕಲಂ 196ರ ಅನ್ವಯ ಬ್ಯಾಂಕುಗಳಿಗೆ ಮೂಲ ಆದಾಯದಲ್ಲಿ ತೆರಿಗೆ ಕಡಿತ (TDS)ನಿಂದ ವಿನಾಯಿತಿ ನೀಡುವುದು; ವಿಶ್ವ ಬ್ಯಾಂಕಿನ ಕಲಂ 115ರ ಅಡಿಯಲ್ಲಿ ಬರುವ ಹೆಚ್ಚುವರಿ ಆದಾಯ ತೆರಿಗೆಗೆ (ಉದಾ; ನಿವೃತ್ತಿ ವೇತನ ನಿಧಿ) ಸಂಬಂಧಿಸಿದಂತೆ ಇರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಲು ಮನವಿ ಮಾಡಿಕೊಂಡಿದ್ದಾರೆ.
ನಿವೃತ್ತಿ ವೇತನ ನಿಧಿ ಇಲ್ಲವೆ ಭವಿಷ್ಯ ನಿಧಿಗೆ ಬ್ಯಾಂಕ್‌ನಿಂದ ಸಂದಾಯವಾಗುತ್ತಿರುವ ಮೊತ್ತವನ್ನು ನಿಯಮ 87ರಡಿಯಲ್ಲಿ ಶೇ 27ಕ್ಕೆ ಸೀಮಿತಗೊಳಿಸಬೇಕು. 1962ರಲ್ಲಿ ಆದಾಯ ತೆರಿಗೆ ಕಾನೂನು ಜಾರಿಗೆ ಬಂದ ನಂತರ ಮತ್ತು ಕಳೆದ 45 ವರ್ಷಗಳ ಅವಧಿಯಲ್ಲಿ ವ್ಯಕ್ತಿಗಳ ಸರಾಸರಿ ಜೀವಿತಾವಧಿ ಹೆಚ್ಚಾಗಿರುವ ಕಾರಣ; ಈಗಾಗಲೇ ಜಾರಿಯಲ್ಲಿರುವ ನಿವೃತ್ತಿ ವೇತನ ಯೋಜನೆಯ ನಿಯಮಗಳನ್ನು ಸರಿಪಡಿಸಬೇಕಾಗಿದೆ. ನಿರ್ದಿಷ್ಟ ಪಡಿಸಿರುವ ನಿವೃತ್ತಿ ವೇತನದ ನಿಯಮಗಳ ಕಾರಣ ಬ್ಯಾಂಕಿಂಗ್ ವಲಯದ ಮೇಲೆ ಆರ್ಥಿಕ ಹೊಣೆ ಹೆಚ್ಚಿದೆ ಎಂದು ಬ್ಯಾಂಕುಗಳ ಮುಖ್ಯಸ್ಥರು ವಾದಿಸಿದ್ದಾರೆ.