ಡಾ. ಎಸ್.ವಿ.ನರಸಿಂಹನ್
ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್|
ಭಾವಿಸಿದ ಜನಪದಂ ವಸುಧಾವಲಯ ವಿಲೀನ ವಿಶದ ವಿಷಯ ವಿಶೇಷಂ||
ದಕ್ಷಿಣದ ಕಾವೇರಿ ನದಿಯಿಂದ ಹಿಡಿದು ಉತ್ತರದ ಗೋದಾವರಿ ನದಿಯವರೆಗೆ ಹರಡಿದ್ದ ಕರ್ನಾಟಕ ದೇಶ, ವಸುಧೆಯಲ್ಲಿಯೇ ಒಂದು ವಿಶಿಷ್ಟ ಸ್ಥಾನವನ್ನು ಪಡೆದಿತ್ತು ಎಂಬುದು ಕನ್ನಡದಲ್ಲಿ ನಮಗೆ ದೊರಕಿರುವ ಮೊಟ್ಟಮೊದಲ ಗ್ರಂಥವಾದ ಕವಿರಾಜ ಮಾರ್ಗದಲ್ಲಿ ಉಲ್ಲೇಖಿತ ಅಂಶ. ಕ್ರಿ.ಶ.814 ಅಂದರೆ ಒಂಭತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟ ಅರಸ ನೃಪತುಂಗ ಮಹಾರಾಜನ ಆಸ್ಥಾನ ಕವಿ ಶ್ರೀವಿಜಯ ಬರೆದಿರುವ ಈ ಗ್ರಂಥದಲ್ಲಿ ಕನ್ನಡನಾಡಿನ, ಕನ್ನಡಿಗರ, ಕನ್ನಡ ಭಾಷೆಯ ಬಗ್ಗೆ ಸವಿವರವಾದ ವರ್ಣನೆಯಿದೆ, ಕನ್ನಡಿಗರ ಬಗ್ಗೆ ಅವನಿಗೆ ಎಷ್ಟು ಅಭಿಮಾನ, ಹೆಮ್ಮೆ ಎಂದರೆ, ಮುಂದುವರಿದು ಆತ ಹೇಳುತ್ತಾನೆ:
ಪದನರಿದು ನುಡಿಯಲುಂ ನುಡಿದುದನರಿದಾರಯಲಾಂ ಅರ್ಪರಾ ನಾಡವರ್ಗಳ್|
ಚದುರರ್ ನಿಜದಿಂ ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್||
ಯಾವುದೇ ವಿಷಯವನ್ನೂ ವಿಶೇಷವಾಗಿ ಅಧ್ಯಯನ ಮಾಡದೇ ಚರ್ಚೆ ಮಾಡುವ ಸಾಮರ್ಥ್ಯ ಕನ್ನಡಿಗರಿಗಿದೆ ಎನ್ನುತ್ತಾನೆ ಶ್ರೀವಿಜಯ. 1200 ವರ್ಷಗಳ ನಂತರವೂ ಈ ಅಭಿಮಾನ ಹಾಗೇ ಉಳಿದಿದೆ. ಕನ್ನಡದಲ್ಲಿ ದೊರಕಿರುವ ಗ್ರಂಥಗಳಲ್ಲೆಲ್ಲ ಕವಿರಾಜಮಾರ್ಗವೇ ಮೊದಲಿನದು ಎಂದರೂ ಅದಕ್ಕಿಂತ ಕ್ರಿ.ಶ.450ರಲ್ಲಿಯೇ ಬೇಲೂರಿನ ಹತ್ತಿರವಿರುವ ಹಲ್ಮಿಡಿ ಎಂಬಲ್ಲಿ ಒಂದು ಶಾಸನ ಸಿಕ್ಕಿದೆ. ಕದಂಬರ ದೊರೆ ಮಯೂರವರ್ಮ ಹಲ್ಮಿಡಿ ಎಂಬ ಗ್ರಾಮದಲ್ಲಿ ದತ್ತಿ ಕೊಟ್ಟ ವಿಚಾರ ಈ ಶಾಸನದಲ್ಲಿದೆ. ಅಂದರೆ, ಐದನೇ ಶತಮಾನದಲ್ಲಿಯೇ ಕನ್ನಡ ಬಳಕೆಯಲ್ಲಿತ್ತು. ಏನಿಲ್ಲವೆಂದರೂ ಅದಕ್ಕೂ ಸಾವಿರ ವರ್ಷಗಳ ಹಿಂದೆಯೇ ಕನ್ನಡ ಭಾಷೆ ಬಳಕೆಯಲ್ಲಿತ್ತು ಎಂದು ಊಹಿಸಬಹುದು.
ಕನ್ನಡ ವರ್ಣಮಾಲೆ
ಯಾವುದೇ ಭಾಷೆಯನ್ನು ನಾವು ಕಲಿಯಬೇಕಾದರೂ ಮೊದಲಿಗೆ ಅದರ ವರ್ಣಮಾಲೆಯನ್ನು ಕಲಿಯುತ್ತೇವೆ. ಕನ್ನಡ ವರ್ಣಮಾಲೆಯಲ್ಲಿ ಐವತ್ತು ಅಕ್ಷರಗಳಿವೆ. ಸ್ವರಗಳು ಅ ಆ ಇ ಈ ಉ ಊ
..............ಒ ಓ ಔ ಹೂಗೆ 16: 14+ ಅನುಸ್ವರ(ಅಂ) ಮತ್ತು ವಿಸರ್ಗ(ಅಃ), ವ್ಯಂಜನ ಕ ಖ ಗ ಘ ಯಿಂದ ಪ ಫ ಬ ಭ ಮವರೆಗೆ 25+ಯ ರ ಲ ವ......... ಳ ವರೆಗ 9. ಒಟ್ಟು 34. ಪ್ರತಿ ವ್ಯಂಜನವನ್ನು ಸ್ವರಗಳೊಂದಿಗೆ ಸೇರಿಸಿ ಕಾಗುಣಿತ, ಕ ಕಾ ಕಿ ಕೀ ತಯಾರಿಸಿಕೊಂಡಿದ್ದೇವೆ. ಈ ವ್ಯಂಜನಗಳಲ್ಲಿ ಮೊದಲಿಗೆ 5 ಅಕ್ಷರಗಳ ಐದು ಮಾರ್ಗವನ್ನು ನೋಡುತ್ತೇವೆ. ಇವು ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ, ಇವುಗಳಲ್ಲಿ ಒಂದೊಂದು ವರ್ಗದ ಉಚ್ಚಾರಣೆಯ ಧ್ವನಿಯೂ ನಮ್ಮ ನಾಲಿಗೆ, ಬಾಯಿ, ಒಸಡು ಮತ್ತು ತುಟಿಗಳ ನಡುವೆ ಚಲನೆಯನ್ನು ಆರಂಭಿಸಿದೆ. ಕ ಚ ತ ಪ ಎಂದು ಹೇಳಲಾಗುವ ನಮ್ಮ ನಾಲಿಗೆ ಮೇಲ್ದವಡೆಯ ಹಿಂದಿನಿಂದ ಮುಂದಕ್ಕೆ ಚಲಿಸುವುದನ್ನು ಗಮನಿಸಿ, ಕೊನೆಗೆ ಈ ಯಾವುದೇ ವರ್ಗಕ್ಕೂ ಸೇರದ ಅಕ್ಷರಗಳಾದ ಯ ರ ಲ ವ ಶ ಷ ಸ ಹ ಳ ಗಳನ್ನು ಸೇರಿಸಲಾಗಿದೆ. ಹೀಗೆ ಕನ್ನಡ ಅಕ್ಷರಮಾಲೆಯನ್ನು ಸಂಪೂರ್ಣವಾಗಿ ತಳಹದಿಯ ಮೇಲೆ ವಿನ್ಯಸಗೊಳಿಸಲಾಗಿದೆ, ಇದು ಇನ್ನಾವುದೇ ದೇಶದ ಭಾಷೆಯಲ್ಲಿಲ್ಲ.
ಸಂಸ್ಕೃತ ತಳಹದಿ
ಭಾರತೀಯ ಭಾಷೆಗಳಿಗೆಲ್ಲ ಸಂಸ್ಕೃತವೇ ಮೂಲ, ವರ್ಣಮಾಲೆ, ವ್ಯಾಕರಣ ರಸ ಛಂದಸ್ಸು ಎಲ್ಲವೂ ನಾವು ಸಂಸ್ಕೃತದಿಂದಲೇ ಪಡೆದಿದ್ದೇವೆ. ಹಾಗಾಗಿ ಸಂಸ್ಕೃತ ಎಲ್ಲ ಭಾಷೆಗಳಿಗೂ ಮಾತೃಸ್ಥಾನದಲ್ಲಿದೆ. ಸಂಸ್ಕೃತದ ಒಂದು ಸ್ವಾರಸ್ಯವೇನೆಂದರೆ, ಅದರ ಎಲ್ಲ ಪದಗಳೂ ಸ್ವರಧಾತುವುನಿಂದಹುಟ್ಟಿದ್ದು ಎನ್ನುತ್ತಾರೆ. ಜ ಎಂದರೆ ಜನ್ಮ, ಜನನ, ಹುಟ್ಟುವುದು, ಜಲಜ, ನೀರಜ ಎಂದರೆ ನೀರಿನಲ್ಲಿ ಹುಟ್ಟಿದ್ದು..ಕಮಲ; ಹಾಗೇಯೇ ಗ ಎಂದರೆ ಗಮನ, ಚಲನೆ, ಭುಜಗ, ಎಂದರೆ ಭುಜದ ಮೇಲೆ ಚಲಿಸುವ ವಸ್ತು....ಪನ್ನಗ, ಉರಗ, ಹಾವು, ಪನ್ನಗಶಯನ, ಪನ್ನಗಾರಿವಾಹನ(ವಿಷ್ಣು) ಹೀಗೆ ಸ್ವರಗಳನ್ನು ಒಂದಕ್ಕೊಂದು ಸೇರಿಸಿ ಹೊಸ ಪದಸಂಕೀರ್ಣವನ್ನು ಪಡೆಯಬಹುದು. ಈ ಹೊಸ ಪದಗಳು ಸ್ವವಿವರಣಾತ್ಮಕ ಪದಗಳಾಗಿರುತ್ತವೆ ಅಂದರೆ, ಸೆಲ್ಫ್ explanationery ವರ್ಡ್ಸ್.
ಸಂಸ್ಕೃತವನ್ನೂ ಮೀರಿದ ಬೆಳವಣಿಗೆ
ಸಂಸ್ಕೃತದ ತಳಹದಿಯ ಮೇಲೆ ಕನ್ನಡ ನಿಂತಿದ್ದರೂ ಸಂಸ್ಕೃತದಲ್ಲಿಲ್ಲದ ಹಲವು ವಿಶೇಷತೆಗಳು ಕನ್ನಡದಲ್ಲಿವೆ. ಅದನ್ನೂ ಮೀರಿದ ಬೆಳವಣಿಗೆ ಕಂಡಿದೆ ಎಂದು ನನಗೆ ಅನ್ನಿಸುತ್ತದೆ. ಏಕೆಂದರೆ ಸಂಸ್ಕೃತದಲ್ಲಿಲ್ಲದ ಹಲವು ಅಕ್ಷರಗಳು ಕನ್ನಡದಲ್ಲಿವೆ ಎಂದರೆ ನಮಗೆ ಆಶ್ಚರ್ಯವಾಗಬಹುದು, ಅವು ಯಾವುದೆಂದರೆ,
1. ಕನ್ನಡದ ಸ್ವರಗಳು ಎ, ಏ, ಐ, ಒ, ಓ, ಔ.. ಇದೆಯಲ್ಲ, ಅದರಲ್ಲಿ ಎ ಮತ್ತು ಒ ಹೃಸ್ವ ಸ್ವರಗಳು ಸಂಸ್ಕೃತದಲ್ಲಿಲ್ಲ. ಸಂಸ್ಕೃತದಲ್ಲಿ ಏ, ಐ, ಒ, ಔ ಇಷ್ಟೇ. ಎಲ್ಲಿ, ಏನಾಯ್ತು?, ಬೆಕ್ಕಿಗೆ ಬೇಲಿ ಏಕೆ? ಒಬ್ಬ ಓಡಿಬಂದ, ಒನಕೆ ಓಬವ್ವ, ಕೋಳೂರ ಕೊಡಗೂಸು, ಇವುಗಳಲ್ಲೆಲ್ಲ ಎ, ಏ ಮತ್ತು ಒ, ಓ ಪ್ರಯೋಗಗಳಿವೆ.
2. ಳ ಕನ್ನಡದ್ದು! ನಲ ನಳ, ಕಮಲ ಕಮಳ, ಸ್ಥಲ ಸ್ಥಳ ಹೀಗೆ ಸಂಸ್ಕೃತ ಪದಗಳನ್ನು ಕನ್ನಡದಲ್ಲಿ ಬಳಸುತ್ತೇವೆ. ಲಳಯೋ ನ ಭೇದಃ ಎಂದು ಸಂಸ್ಕೃತದಲ್ಲಿ ಸೂತ್ರವನ್ನೇ ಕೊಟ್ಟಿದ್ದಾರೆ. ಇದು ಸಂಸ್ಕೃತಕ್ಕೆ ಅನ್ವಯಿಸಬಹುದು. ಆದರೆ, ಕನ್ನಡದಲ್ಲಿ ಲ ಬೇರೆ, ಳ ಬೇರೆ, ಉದಾ: ಹುಲಿ ಹುಳಿ, ಹಲ್ಲಿ ಹಳ್ಳಿ, ಹಲಸು ಹಳಸು.
3. ಎರಡು ಅಕ್ಷರಗಳು ಕನ್ನಡದಲ್ಲಿದ್ದವು. ಆದರೆ ಈಗ ಕೈಬಿಟ್ಟಿದೇವೆ. ಅವು ಹಳೆಗನ್ನಡದಲ್ಲಿ ಕಾಣುವ ಱ ಮತ್ತು ಱ ಅಕ್ಷರಗಳು.ಕುಱುತೋದದೆಯಂ, ಅಱುತುಕೋ ಎಂಬಲ್ಲಿ ಱ ಅನ್ನು ಬಳಸುತ್ತಿದ್ದರು. ಅರಿ ಬೇರೆ ಅಱು ಬೇರೆ, ಹಾಗೆಯೇ ಱ ಅಕ್ಷರಃ ಪಟ್ಟು ಪತ್ತಿ ಹತ್ತಿ ಫಲಂ ಪಟಿಂ ಪಣ್ ಹಣ್ಣು, ಬಹುಶಃ ನಾಲಿಗೆಯನ್ನು ಹೊರಳಿಸಿ ಉಚ್ಚರಿಸಲು ಆ ಅಕ್ಷರಗಳನ್ನು ಬಳಸುತ್ತಿಲ್ಲ.
ಇಂದು ನಾವು ಇವಲ್ಲದೆ, ಪದಗಳ ಅಂತ್ಯದಲ್ಲಿ ಅನುಸ್ವರಗಳನ್ನೂ, ಅರ್ಧಾಕ್ಷರಗಳನ್ನು ಕೈಬಿಟ್ಟಿದ್ದೇವೆ, ತಿಳಿದುಂ, ಅವನುಂ ಹಾಗೆಯೇ ಮೇಣ್, ಕೇಳ್, ಎಂಬ ಪ್ರಯೋಗಗಳು ಈವತ್ತು ಕನ್ನಡದಲ್ಲಿಲ್ಲ.
ಮತ್ತೂ ಕೆಲವು ವೈಶಿಷ್ಟ್ಯಗಳು
ನಿಮಗೆ ಆಶ್ಚರ್ಯವಾಗಬಹುದು ಭಾರತದ ಇನ್ನಾವುದೇ ಭಾಷೆಯಲ್ಲಿಯೂ ಅಂಕಿಗಳಿಲ್ಲ, ಎಲ್ಲರೂ ದೆವನಾಗರಿಯಲ್ಲಿ ಅಂಕೆಗಳನ್ನು ಬಳಸಿದರೆ, ಕನ್ನಡಕ್ಕೆ ತನ್ನದೇ ಆದ ಅಂಕೆಗಳಿವ! ಕನ್ನಡದ ಅಂಕಿಗಳು, 1 2 3 4 5 6 7 8 9 0, ಇವೂಗಳಲ್ಲಿಯೂ1 ಗ ಒತ್ತು, 2 ತ ಒತ್ತು, 3 ನ ಒತ್ತು, 4 ಳ ಒತ್ತು, 6 ಮ ಒತ್ತು, ಹೀಗೇ ಕನ್ನಡದ ಒತ್ತಕ್ಷರಗಳು, ಸೊನ್ನೆ ಬಹು ವಿಶೇಷವಾದ ಸಂಖ್ಯೆ. ಇದನ್ನು ಎಲ್ಲರೂ ವೃತ್ತಾಕಾರದ ಚಿಹ್ನೆಯಿಂದಲೇ ಗುರುತ್ತಿಸುತ್ತಾರೆ. ಸೊನ್ನೆ ಗಣಿತ ಲೋಕಕ್ಕೆ ಭಾರತ ದೇಶದ ಕೊಡುಗೆ ಎಂದು ನಮ್ಮ ದೇಶದ ಕಮ್ಯುನಿಸ್ಟರನ್ನೂ ಸೇರಿ, ಪ್ರಪಂಚದಾದ್ಯಂತ ಎಲ್ಲರೂ ಒಪ್ಪಿದ್ದಾರೆ. ಸೊನ್ನೆ ಅನ್ನುವುದು ಶೂನ್ಯದ ಸಂಕೇತ. ಅದು ಪರಿಪೂರ್ಣತೆ, ನಿರಂತರತೆ ಹಾಗೂ ಅನಂತತೆಯ ಸಂಕೇತವೂ ಹೌದು.
ಇನ್ನು ಕನ್ನಡದಲ್ಲಿ ಒತ್ತಕ್ಷರಗಳನ್ನು ಬಳಸುವ ಕ್ರಮವನ್ನು ನೀವು ಗಮನಿಸಬೇಕು, ಇದು ವಿಶಿಷ್ಟವೋ ನೀವೇ ಹೇಳಬೇಕು. ಸಕ್ಕರೆ, ಅನ್ನು, ಬಟ್ಟೆ ಇವು ಸಜಾತಿಯಾ ಒತ್ತಕ್ಷರಗಳಿಗೆ ಉದಾಹರಣೆಗಳು. ಕ, ಗೆ, ಕ ಒತ್ತು, ಮ, ಗೆ, ಮ ಒತ್ತು.....ಹೀಗೆ, ಆದರೆ ಸಂಯುಕ್ತಾಕ್ಷರ ಅಥವಾ ವಿಜಾತಿಯ ಒತ್ತಕ್ಷರಗಳನ್ನು ನೋಡಿ: ಹೆಚ್ಚಿನ ಸಂಯುಕ್ತಾಕ್ಷರಗಳು ಸಂಸ್ಕೃತ ಪದಗಳೇ ಆಗಿವೆ. ರೇಷ್ಮೆ ಎಂಬುದು ರೇ+ಷ್+ಮೆ, ಇಲ್ಲಿ ಉಳಿದ ಭಾಷೆಯವರು ಇದ್ದುದ್ದನ್ನು ಇದ್ದ ಹಾಗೇ ಬರೆದರೂ ಕನ್ನಡದಲ್ಲಿ ನಾವು ರೇ+ಷೆ ಬರೆದು ಅದಕ್ಕೆ ಮ ಒತ್ತು ಕೊಡುತ್ತೇವೆ! ಕ್ಷೀಣ ಎಂಬಲ್ಲಿ ಕ್+ಷೀ+ಮ ಎನ್ನುವುದನ್ನು ಕೀ ಗೆ ಷ ಒತ್ತು+ಣ ಬರೆಯುತ್ತೇವೆ. ಏಕೆ ಹೀಗೆ ?
ನ್ಯೂನತೆಗಳು
ಕನ್ನಡ ಭಾಷೆಯನ್ನು ನಾವು ಇಷ್ಟೊಂದು ಸಂಪದ್ಭರಿತವಾದ ಭಾಷೆ ಎಂದು ಹೇಳಿದರೂ ಕೆಲವು ನ್ಯೂನತೆಗಳೂ ಇವೆಯೇನೋ ಎಂದು ನನಗೆ ಅನ್ನಿಸುತ್ತದೆ. ಏಕೆಂದರೆ ಕೆಲವು ಧ್ವನಿಗಳು ಇನ್ನೂ ನಮ್ಮ ಕನ್ನಡದಲ್ಲಿಲ್ಲ. ಆ ಧ್ವನಿಗಳನ್ನು ಕನ್ನಡ ಅಕ್ಷರರೂಪದಲ್ಲಿ ಬರೆಯಲು ನಮಗೆ ಲಿಪಿಗಳ ಕೊರತೆ ಕಂಡುಬರುತ್ತದೆ. ಪ್ರಪಂಚದಲ್ಲಿ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ತೀವ್ರಗತಿಯ ಅಭಿವೃದ್ಧಿಯನ್ನು ಕಾಣುತ್ತಿದ್ದೇವೆ. ಅದರಲ್ಲೂ ಆಧುನಿಕ ವಿಜ್ಞಾನದ ಚಟುವಟಿಕೆಗಳು ಬೆಳೆದು ಅಭಿವೃದ್ಧಿಸುತ್ತಿರುವುದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ. ಅಲ್ಲಿಯ ಭಾಷೆಗಳು ವಿಜ್ಞಾನದ ಭಾಷೆಯನ್ನು ಸಮರ್ಥವಾಗಿಯೂ, ಸ್ವಾಭಾವಿಕವಾಗಿಯೂ ಅಭಿವ್ಯಕ್ತಿಸಬಲ್ಲವು: ಅವು ಸಾಹಿತ್ಯದ ಇತರ ಪ್ರಕಾರಗಳಾದ ಕತೆ, ಕಾದಂಬರಿ, ವಿಚಾರ ಸಾಹಿತ್ಯಗಳನ್ನು ಬರೆಯುವಷ್ಚೇ ಸುಲಭ ಮತ್ತು ಸಹಜ ಕ್ರಿಯೆ ಆಗಿದೆ.
ಗರಿಷ್ಠ ಅಕ್ಷರಗಳೋ ಕನಿಷ್ಠ ಅಕ್ಷರಗಳೋ?
50ರ ಜೊತೆಗೆ ಇನ್ನೂ ಐದು ಸ್ವರಗಳೇ? ಒಂದು ಭಾಷೆಗೆ ಇಷ್ಟು ಅಕ್ಷರಗಳು ಬೇಕೆ? ಎಂಬುದನ್ನು ಆಲೋಚಿಸೋಣ, ಕನ್ನಡ ಭಾಷೆಯಲ್ಲಿ ಔನ್ನತ್ಯವನ್ನು ನಾವು ತಿಳಿದುಕೊಳ್ಳಬೇಕಾದಲ್ಲಿ ಇತರ ಭಾಷೆಗಳೊಂದಿಗೆ ತುಲನಾತ್ಮಕ ದೃಷ್ಟಿಯಿಂದ ನೋಡಬೇಕಾಗುತ್ತದೆ.
ಮೊದಲಿಗೆ ನಮಗೆ ಚಿರಪರಿಚಿತವಾದ ಇಂಗ್ಲೀಷ್: ಬರೇ 26 ಅಕ್ಷರಗಳಿಂದಲೇ ಪ್ರಪಂಚದಲ್ಲಿ ಅತಿ ಹೇಚ್ಚು, ಅಂದರೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು, ಪದಭಂಡಾರವನ್ನು ಹೊಂದಿದ ಭಾಷೆಇದು. ಆದರೆ ಈ ಭಾಷೆಯಲ್ಲಿ ವರ್ಣಮಾಲೆಗೆ ಯಾವುದೇ ಕ್ರಮವಿಲ್ಲ. ಕೇವಲ ಐದೂವರೆ ಸ್ವರಗಳು, ಅಸಂಬದ್ಧ ವ್ಯಂಜನಮಾಲೆ, ಇವುಗಳಲ್ಲಿ v ಮತ್ತುw ಎರಡೂ ಒಂದೇ! ಇಲ್ಲಿ ಡಬಲ್ ಯು ಏನಿದು? ಇಂಗ್ಲಿಷಿನಲ್ಲಿ ಆಭಾಷೆಯ ಎಲ್ಲ ಪದಗಳ ಅಕ್ಷರ ಜೋಡಣೆಯೂ ಪೂರ್ವನಿರ್ಧಾರಿತ. ಒಂದು ಪದವನ್ನು ಎಲ್ಲರೂ ಹೀಗೇ ಬರೆಯಬೇಕು, ಅಂತೇಯೇ ಹೀಗೇ ಉಚ್ಛರಿಸಬೇಕು ಎಂಬ ಕಟ್ಟಳೆ! ಅದರಲ್ಲೂ ಯಾವುದೇ ಸ್ಥಿರ ನಿಯಮವಿಲ್ಲ, ಇಷ್ಟಿದ್ದರೂ ಇಂಗ್ಲೀಷಿನವರು ಆ ಮಟ್ಟವನ್ನು ಹೇಗೆ ಸಾಧಿಸಿದರು? ಅವರಲ್ಲಿರುವುದು ಬರೇ 26 ಅಕ್ಷರಗಳಲ್ಲ, 42 ಅಕ್ಷರಗಳಿಗೆ ದೊಡ್ಡಕ್ಷರ, ಸಣ್ಣಕ್ಷರ ಹೀಗೆ 52! ಅವರಲ್ಲಿಲ್ಲದ ಧ್ವನಿಗೆ ಅಕ್ಷರ-ಅಕ್ಷರಗಳನ್ನು ಸೇರಿಸಿ ರೂಪಿಸಿಕೊಂಡಿದ್ದಾರೆ. ಶ್‌ಗೆ SH, ಚ್‌ಗೆ CH, ಹೀಗೆ. ನನ್ನ ಅಜ್ಜ ಹೇಳುತ್ತಿದ್ದರು: ಕನ್ನಡವನ್ನು ನೀನು ಎಷ್ಟು ಸ್ವಷ್ಟವಾಗಿ ಮಾತನಾಡುತ್ತೀಯೋ ಅದು ಅಷ್ಟು ಚಂದ: ಅದೇ ಇಂಗ್ಲೀಷಿನಲ್ಲಿ ಮಾತನಾಡುವುವಾಗ ಎಷ್ಟು ನುಂಗುತ್ತೀಯೋ ಅದು ಅಷ್ಟು ಫ್ಯಾಶನ್!
ಚೀನಾ ಭಾಷೆಯದು ಪುರಾತನ ಕಾಲದ ಬರಹದಂತೆ ಚಿತ್ರಲಿಪಿ, ಅವರಲ್ಲಿ ಅಸಂಖ್ಯ ಅಕ್ಷರಗಳು, ಕಲಿಯುವುದೂ, ಬರೆಯುವುದೂ ಕಷ್ಟ.
ಇನ್ನು ನಮಗೆ ಹತ್ತಿರವಾದ ತಮಿಳು:ತಮಿಳರಿಗೆ ಮೂರು ವಿಶಿಷ್ಚ ಗುಣಗಳಿವೆ, ಭಾಷಾ ದುರಭಿಮಾನ, ಇಂಗ್ಲೀಷ್ ವ್ಯಾಮೋಹ, ಪರಭಾಷಾ ದ್ವೇಷ, ತಮಗೆ ಪ್ರಿಯವಾದ ಇಂಗ್ಲೀಷ್‌ಗೇ 26 ಅಕ್ಷರಗಳಿರುವಾಗ ನಮಗೇಕೆ ಸಂಸ್ಕೃತದ 50. ಎಂದು ಎಲ್ಲವನ್ನೂ ಕೈಬಿಟ್ಟು ಈಗ 29 ಅಕ್ಷರಗಳಿಗೆ ಬಂದು ನಿಂತಿದ್ದಾರೆ. ಅವರ ಗುರು, 26 ಅಥವಾ ಅದಕ್ಕಿಂತ ಕಡಿಮೆ.
ಕುತರ್ಕ
ವಾದವೇ ಮಾಡುವುದಾದಲ್ಲಿ, ಖಂಡಿಯವಾಗಿಯೂ ಪದಗಳ ಸೃಷ್ಟಿಗೆ 50-55 ಅಕ್ಷರಗಳು ಬೇಡ, ಉದಾಹರಣೆಗೆ ನಮ್ಮಲ್ಲಿ ಎರಡು ವ್ಯಂಜನಗಳು ಮತ್ತು ಎರಡನೇ ಸ್ವರಗಳು ಇವೆಯೆಂದು ಭಾವಿಸೋಣ: ಕ್,ಪ್,ಅ ಮತ್ತು ಇ, ಇವುಗಳಿಂದ ನಮಗೆ ನಾಲ್ಕು ಅಕ್ಷರಗಳು ದೊರಕುತ್ತವೆ: ಕ,ಕಿ,ಪ,ಪಿ,ಈ ನಾಲ್ಕು ಅಕ್ಷರಗಳನ್ನು ಬಳಸುವ ಎರಡರ, ಮೂರಕ್ಷರ,ನಾಲ್ಕಕ್ಷರ,ಐದಕ್ಷರ ಮತ್ತು ಆರಕ್ಷರದ ಎಷ್ಟು ಪದಗಳನ್ನು ಸೃಷ್ಟಿಸಬಹುದು? ಕೆಲವು ಭಾಷೆಯಲ್ಲಿ ಮಾತನಾಡುವಾಗ ಪದಗಳ ಉಚ್ಛರಣೆಯಲ್ಲಿ ಏಕತಾನತೆಯನ್ನು ನೀವು ಗಮನಿಸಿರಬಹುದು. ಕಡಿಮೆ ಸಂಖ್ಯೆಯ ಅಕ್ಷಗಳಿರುವ ಭಾಷೆಗಳಲ್ಲೆಲ್ಲಾ ಇದು ಎದ್ದು ಕಾಣುತ್ತದೆ, ಬಾಯ್ತುಂಬ ವಿವಿಧ ಧ್ವನಿಗಳಿಂದ ಕೂಡಿದ ಸಮೃದ್ಧವಾದ ಪದಗಳನ್ನು ಮಾತನಾಡುವ ಸಾಮರ್ಥ್ಯ ಮನುಷ್ಯನಿಗೆ ಪ್ರಕೃತಿದತ್ತವಾಗಿ ಬಂದಿರುವಾಗ ಖಂಡಿತವಾಗಿಯೂ ಕನ್ನಡದ ಎಲ್ಲ ಅಕ್ಷರಗಳೂ ಬೇಕು, ಅದು ನಮ್ಮ ಹೆಗ್ಗಳಿಕೆ!
ಕನ್ನಡದ ಭವಿಷ್ಯ
ಇಂತಹ ಭವ್ಯ ಇತಿಹಾಸವುಳ್ಳ ಕನ್ನಡ ಬಹು ವಿಶಾಲವಾಗಿ, ಅಷ್ಟೇ ಆಳವಾಗಿ ಬೆಳದಿದೆ ಎಂದರೆ ಅತಿಶಯೋಕ್ತಿಯಾಗಲಾರದು, ಪ್ರಪಂಡದಲ್ಲಿ ಇನ್ನಾವುದೇ ಭಾಷೆಗೂ ಇಲ್ಲದ ಧ್ವನಿಭಂಡಾರ ಮತ್ತು ಅಕ್ಷರಭಂಡಾರವೇ ಕನ್ನಡದ ಆಸ್ತಿ, ಮುಂದೇನು? ಎಂದಾಗ ಕನ್ನಡಕ್ಕೆ ಇನ್ನೂ ಭವ್ಯವಾದ ಭವಿಷ್ಯವಿದೆ ಎಂದು ಸಂಭ್ರಮದಿಂದ ಹೇಳಬಹುದು.
ಹೇಳಿ-ಕೇಳಿ ಇದು ಕಂಪ್ಯೂಟರ್ ಯುಗ, ಕಂಪ್ಯೂಟರ್ ಬಳಕೆ ಇವತ್ತು ಎಲ್ಲ ಕ್ಷೇತ್ರಗಳಲ್ಲಿಯೂ ಅನಿವಾರ್ಯ ಅವಶ್ಯಕತೆಯಾಗಿಬಿಟ್ಟಿದೆ. ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಿಕಗಳು, ಮುಂತಾದ ನಿಯತಕಾಲಿಕಗಳೊಂದಿಗೆ ಪ್ರತಿದಿನ ಹೊಸಹೊಸ ಪ್ರಕಾಶನಗಳು, ಹೊಸಹೊಸ ಪುಸ್ತಕಗಳು ಬೆಳಕಿಗೆ ಬರುತ್ತಿವೆ. ಲಕ್ಷಾಂತರ ಮಂದಿ ಕನ್ನಡಿಗರು ಸಾಹಿತ್ಯ ಕೃಷಿಗೆ ಕೈಹಾಕಿದ್ದಾರೆ.
ಮುದ್ರಣ ಮಾಧ್ಯಮ ತೀವ್ರಗತಿಯಲ್ಲಿ ಮುನ್ನಡೆದಂತೆ ಹೇರಳವಾಗಿ ಹೆಚ್ಚುತ್ತಿರುವ ನಿಯತಕಾಲಿಕಗಳು, ಲೇಖನಗಳು, ಕತೆ-ಕಾದಂಬರಿಗಳು,ಇನ್ನಿತರ ಪುಸ್ತಕಗಳು, ಮುಂತಾದುವುಗಳ ಫಲವಾಗಿ ಇಂದು ಲೇಖಕರ-ಕವಿಗಳ ಸಂಖ್ಯಾಬಾಹುಳ್ಯವೂ ಕನ್ನಡಕ್ಕೆ ಸೇರ್ಪಡೆಗೊಂಡಿವೆ. ಈ ನಿಟ್ಟಿನಲ್ಲಿ ನಾವು ನೋಡಿದಾಗ, ಪ್ರಚಲಿತ ವಿದ್ಯಮಾನದಲ್ಲಿ ಕನ್ನಡ ಭಾಷೆಯ ಅಕ್ಷರಮಾಲೆ ವರ್ತಮಾನ ಸಾಹಿತ್ಯಪ್ರಕಾರಗಳಲ್ಲಿ ಸಮರ್ಥವಾದ ಆಸರೆ ನೀಡುತ್ತಿದೆಯೇ ಎಂಬುದನ್ನು ನಾವು ವುನರ್ವಿಮರ್ಳಿಸುವ ಸಂದರ್ಭ ಬಂದಿದೆ ಎಂದು ನನಗೆ ಅನ್ನಿಸುತ್ತದೆ.
ಹಿಂದೆ ಪ್ರೆಸ್‌ಗಳಲ್ಲಿ ಒಂದು ಕನ್ನಡ ಲೇಖನವನ್ನು ಅಚ್ಚಿಗೆ ಜೋಡಿಸಲು ಬಹಳ ಕಷ್ಟವಿತ್ತು, ಅಚ್ಚುಮೊಳೆಗಳನ್ನು ಒಂದೊಂದೇ ಜೋಡಿಸಬೇಕು. ಇಂಗ್ಲೀಷಿನಲ್ಲಾದರೆ ಬರೆ 26 ಮೊಳೆಗಳು, ಆದರೆ ಕನ್ನಡದಲ್ಲಿ ತಲೆಕಟ್ಟು, ಕೊಂಬು, ಈಳಿ,ಒತ್ತಕ್ಷರ ಎಲ್ಲ ಸೇರಿ ನೂರಕ್ಕೂ ಹೆಚ್ಚು ಮೊಳೆಗಳು! ಇದರ ಜೊತೆಗೆ ತಪ್ಪೊಪ್ಪು, ಹೊಸ ತಪ್ಪುಗಳು, ಮುದ್ರಾರಾಕ್ಷಸನ ಹಾವಳಿ, ಇವುಗಳಿಂದ ಬಹಳಷ್ಟು ಸಮಯ, ಶ್ರಮ ವ್ಯರ್ಥವಾಗುತ್ತಿತ್ತು. ಈಗ ಕಂಪ್ಯೂಟರ್ ಬಳಕೆ ಎಲ್ಲೆಡೆ ವ್ಯಾಪಿಸಿ ಇದರಿಂದ ಪ್ರಿಂಟಿಂಗ್ ಬಹಳ ಸುಲಭವಾಗಿದೆ, ಕನ್ನಡದಲ್ಲಯೂ ನೂರಾರು ಅರವಿನ್ಯಾಸಗಳಿದ್ದು, ಅಚ್ಚುಕಟ್ಟಾದ, ಆಕರ್ಷಕವಾದ ಸಾಹಿತ್ಯವನ್ನು ಕಾಗದದ ಮೇಲೆ ನಾವು ಕಾಣುವಂತಾಗಿದೆ.
ಇದರೊಂದಿಗೆ ಒಂದು ಲಿಪಿಯನ್ನು ಮತ್ತೊಂದು ಲಿಪಿಗೆ ಬದಲಾಯಿಸಲು ಲಿಪ್ಯಂತರ ತತ್ರಾಂಶಗಳೂ ಬಂದಿವೆ. ಇದನ್ನು transliteration ಎನ್ನುತ್ತಾರೆ. ಇದು-translation-ಭಾಷಾಂತರ-ಅಲ್ಲ, ಉದಾ: ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಎಂದು ಕನ್ನಡದಲ್ಲಿ type ಮಾಡಿ, ಅದನ್ನು ಹಿಂದಿ ಲಿಪಿಗೆ ಲಿಪ್ಯಂತರ ಬಹು ಸುಲಭವಾಗಿ ಮಾಡಬಹುದು. ಅದನ್ನೇ ಒರಿಯಾ, ಮಲಯಾಳ ಅಥವಾ ತೆಲುಗಿಗೆ ಅಷ್ಟೇ ಸುಲಭವಾಗಿ ಬದಲಾಯಿಸಬಹುದು, ಹಲವು ವರ್ಷಗಳಿಂದ ಈ ತತ್ರಾಂಶಗಳನ್ನು ನಾವೆಲ್ಲ ಬಳಸುತ್ತಿದ್ದೇವೆ.
ಧ್ವನಿ ಲಿಪ್ಯಂತರ
ಕಂಪ್ಯೂಟರ್ ತಾಂತ್ರಿಕತೆ ಅಭಿವೃದ್ಧಿ ಹೊಂದಿದಂತೆ ಎಲ್ಲ ಭಾಷೆಗಳಲ್ಲಿಯೂ ಹೊಸ ಹೊಸ ತಂತ್ರಾಂಶಗಳ ಸೇರ್ಪಡೆಯೂ ಆಗುತ್ತಿವೆ. ಈ ನಿಟ್ಟಿನಲ್ಲಿ ನಾವು ಭಾಷೆಯಲ್ಲಿ ಸುಮಾರು ಹದಿನೈದು-ಹದಿನಾರು ವರ್ಷಗಳಿಂದ ಪ್ರಗತಿ ಸಾಧಿಸಿರುವ voice recognition ತಂತ್ರಾಂಶವನ್ನು ಕಾಣುತ್ತಿದ್ದೇವೆ. ಇದನ್ನು transphonetic literation ಅಥವಾ ಕನ್ನಡದಲ್ಲಿ 'ಧ್ವನಿ ಲಿಪ್ಯಂತರ' ತಂತ್ರಾಂಶ ಎನ್ನಬಹುದು. ಇದರಲ್ಲಿ ಒಬ್ಬ ವ್ಯಕ್ತಿ ಮೈಕ್ರೋಫೋನಲ್ಲಿ ಹೇಳಿದ ಧ್ವನಿತರಂಗಗಳನ್ನು ಕಂಪ್ಯೂಟರ್ ಗ್ರಹಿಸಿ ಅದನ್ನು ಅಕ್ಷರರೂಪದಲ್ಲಿ ಬರೆಯುವುದು.
ಇಂಗ್ಲೀಷಿನಲ್ಲಿ ಈ ತಂತ್ರಾಂಶವನ್ನು ರೂಪಿಸುವುದು Software Engineerಗಳಿಗೆ ಅತಿ ಕ್ಲಿಷ್ಟವಾದ ಕಾರ್ಯ, ಏಕೆಂದರೆ, ಇಂಗ್ಲೀಷಿನಲ್ಲಿ ನಾವು ಉಚ್ಚರಿಸುವುದು ಒಂದಾದರೆ, ಬರವಣಿಗೆಯಲ್ಲಿ ಬರೆಯುವುದೇ ಬೇರೆ. ಅಲ್ಲದೆ ಒಂದೇ ಪದವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿ ಉಚ್ಛರಿಸುತ್ತೇವೆ. ಇವೆಲ್ಲವನ್ನೂ ಕಂಪ್ಯೂಟರ್ ಗ್ರಹಿಸಿ ಸಂದರ್ಭಕ್ಕೆ ತಕ್ಕಂತೆ ಬರೆಯಬೇಕು. ಇನ್ನೂ ಪ್ರಗತಿಯಲ್ಲಿರುವ ಈ ಅಮೋಘ ಕಾರ್ಯ ಈವತ್ತು ಶೇಕಡ 98 ರಷ್ಟು ನಿಖರತೆ ಪಡೆದಿದೆ.
ಹೀಗೆ ಆ ತಂತ್ರಾಂಶದಲ್ಲಿ ಇಂಗ್ಲೀಷ್ ಭಾಷೆಯ ಸಂಪೂರ್ಣ ನಿಘಂಟನ್ನು ಮೊದಲಿಗೆ ಕಂಪ್ಯೂಟರ್‌ನ ನೆನಪಿನ ಭಂಡಾರದಲ್ಲಿಟ್ಟು, ಅದರಲ್ಲಿನ ಒಂದೊಂದು ಪದವೂ ಸಾಮಾನ್ಯವಾಗಿ ಹೇಗೆ ಉಚ್ಛರಿಸಲ್ಪಡುತ್ತದೆ ಎಂಬ ವಿಚಾರವನ್ನು ಒಂದೊಂದಾಗಿ ಅದರ ನೆನಪಿಗೆ ತುಂಬಬೇಕು. ಅಲ್ಲಿಂದ ಮತ್ತೊಬ್ಬ ವ್ಯಕ್ತಿ ಆ ಭಂಡಾರದಲ್ಲಿರುವ ಯಾವುದೇ ಪದವನ್ನು ಉಚ್ಛರಿಸಿದರೂ ಆ ಧ್ವನಿ ತರಂಗಗಳನ್ನು ಗ್ರಹಿಸಿ, ಅದಕ್ಕೆ ಯಾವ ಅಕ್ಷರ ಜೋಡಣೆ ಹೊಂದುತ್ತದೆ ಎಂದು ತುಲನೆ ಮಾಡಿ ಆ ಪದವನ್ನು ಬರೆಯುತ್ತದೆ. ಇಂಗ್ಲೀಷಿನಲ್ಲಿ ಈ ತತ್ರಾಂಶವನ್ನು ತಯಾರಿಸಲು ಎಷ್ಟೊಂದು ಕ್ಲಿಷ್ಟ ಮತ್ತು ಈ ಕಾರ್ಯ ಎಷ್ಟು ಸಂಕೀರ್ಣತೆಯಿಂದ ಕೂಡಿದೆ ಎಂಬುದು ನಿಮಗೆ ಅರ್ಥವಾಗಿರಬಹುದು.
ಈಗ ಕನ್ನಡಕ್ಕೆ ಬನ್ನಿ! ಕನ್ನಡದಲ್ಲಿ ನಾವು ಏನು ಉಚ್ಛರಿಸುತ್ತೇವೋ ಅದನ್ನೇ ಲಿಪಿಯಲ್ಲಿ ಬರೆಯುತ್ತೇವೆ. ಮೈಕ್ರೋಫೋನಿನಲ್ಲಿ ಹೇಳಿದ ಧ್ವನಿಯನ್ನು ಗಣಕಯಂತ್ರ ಗ್ರಹಿಸಿ ಅದನ್ನು ನೇರವಾಗಿ ಅಕ್ಷರರೂಪಕ್ಕೆ ಲಿಪ್ಯಂತರಿಸುವುದು ಬಹಳ ಸುಲಭಸಾಧ್ಯವಾದ ಕೆಲಸ. ಹೇಳಿದ್ದನ್ನು ಹೇಳಿದ ಹಾಗೆ ಬರೆದುಕೊಂಡು ಹೋಗುತ್ತದೆ. ನನಗೆ ಗೊತ್ತಿಲ್ಲ ಎನ್ನುವಂತಿಲ್ಲ, ನಿಘಂಟಿನ ಅವಶ್ಯಕತೆಯಿಲ್ಲ! ಶೇಕಡ ನೂರಕ್ಕೆ ಮೀರದಷ್ಟು ಕರಾರುವಕ್ಕಾದ ಪದ್ಧತಿ! ಇಂತಹ ತತ್ರಾಂಶವನ್ನು ಒಂದು ಸಾರಿ ಕನ್ನಡದಲ್ಲಿ ರೂಪಿಸಿಬಿಟ್ಟರೆ, ಭಾರತದ ಎಲ್ಲ ಭಾಷೆಗಳಿಗೂ ಅನುಕೂಲ, ಅಲ್ಲದೆ ಪ್ರಪಂಚದ ಯಾವುದೇ ಭಾಷೆಯನ್ನು ಈ ತತ್ರಾಂಶಕ್ಕೆ ಅಳವಡಿಸಬಹುದು.
ಉದಾಹರಣೆಗೆ ಒಬ್ಬ ಬಂಗಾಳಿ ಲೇಖಕ ಬಂಗಾಳಿ ಭಾಷೆಯಲ್ಲಿ ಒಂದು ಲೇಖನವನ್ನು ಬರೆಯಬೇಕಾದಲ್ಲಿ ಈ ಕನ್ನಡ ಧ್ವನಿಲಿಪ್ಯಂತರ ತಂತ್ರಾಂಶವನ್ನು ಬಳಸಿ, ಮೊದಲಿಗೆ ಲಿಪಿಯನ್ನು ಬಂಗಾಳಿ ಎಂದು ಕಂಪ್ಯೂಟರ್‌ಗೆ ನಿರ್ದೇಶಿಸಿ, ಅಲ್ಲಿಂದ ಮುಂದೆ ತನ್ನ ಭಾಷೆಯಲ್ಲಿ ಹೇಳುತ್ತಾ ಹೋದರೆ,
ಯಾವುದೇ ಅಡೆತಡೆಯಿಲ್ಲದೆ ಬಂಗಾಳ ಭಾಷೆಯಲ್ಲಿಯೇ ಕೃತಿಯನ್ನು ರಚಿಸಬಹುದು. ಇದನ್ನೇ ಒಬ್ಬ ಮಲೆಯಾಳಿಯೂ ಮಾಡಬಹುದು. ತತ್ರಾಂಶ ಕನ್ನಡದ್ದಾದ್ದರಿಂದ ಇದನ್ನು ಬಳಸಿ ಯಾವ ಭಾಷೆಯಲ್ಲಿ ಬೇಕಾದರೂ ಬರವಣಿಗೆಯಲ್ಲಿ ಸಿದ್ಧಪಡಿಸಬಹುದು. ಇದು ಕನ್ನಡದ ಅತಿಶಯ ವಿಶೇಷತೆಯಲ್ಲದೆ ಮತ್ತಿನ್ನೇನು?
ಆದ್ದರಿಂದ ನಾವು ಈವತ್ತು ಒಂದು ತೀರ್ಮಾನಕ್ಕೆ ಬರಬಹುದು. ಇಂದು ಪ್ರಪಂಚದಲ್ಲಿ ಪ್ರಚಲಿತವಿರುವ ಭಾಷೆಗಳಲ್ಲೆಲ್ಲ ಅತ್ಯಂತ ವೈಜ್ಞಾನಿಕ ತಳಹದಿಯ ಮೇಲೆ ರಚನೆಯಾದ. ಗಣಕ ತಾಂತ್ರಿಕತೆಗೆ ಅತ್ಯಂತ ಸರಳವೂ, ಪೂರಕವೂ ಆದ ಮತ್ತು ಎಲ್ಲಕಿಂತಲೂ ಪರಿಪೂರ್ಣವಾದ ಭಾಷೆ ನಮ್ಮ ಕನ್ನಡ! ಇದನ್ನು ನಾನು ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದಾಗಲೀ, ಈ ನೆಲದ ಮಣ್ಣಿನ ಋಣಭಾರ ಕಡಿಮೆಯಾಗಲಿ ಎಂದಾಗಲೀ ಹೇಳುತ್ತಿರುವ ಮಾತಲ್ಲ. ಕನ್ನಡಕ್ಕೆ ಈ ಒಂದು ಅದ್ಭುತವಾದ ಉನ್ನತ ಸ್ಥಾನ ಇರುವುದು ನೂರಕ್ಕೆ ನೂರು ಸತ್ಯ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಗಬೇಕೆಂಬ ವಿಚಾರದಲ್ಲಿ ಆಂದೋಲನ ನಡೆದಿದೆ. ಇದನ್ನೂ ನಾವು ಕಲಿತಿದ್ಧು ತಮಿಳರಿಂದ. ಅಲ್ಲಿಯವರೆಗೂ ಅಂತಹ ಒಂದು ಸ್ಥಾನವಿದೆಯೆಂದೆ ನಮಗೆ ತಿಳಿದಿರಲಿಲ್ಲ! ರಾಷ್ಟ್ರಕವಿ ಕುವೆಂಪುರವರು ಬಾರಿಸು ಕನ್ನಡ ಡಿಂಡಿಮವ ಎಂದು ಕರೆ ಇತ್ತಿದ್ದಾರೆ. ನಾವು ಹಲವು ದಶಕಗಳಿಂದ ಡಿಂಡಿಮವನ್ನು ಬಾರಿಸುತ್ತಲೇ ಇದ್ದೇವೆ. ಆದರೆ,ತಮಿಳರು ಬೊಂಬಡ ಬಾರಿಸುತ್ತಾರೆ ಮತ್ತು ಬೇಕಾದ್ದನ್ನು ಸಾಧಿಸುತ್ತಾರೆ! ಶಾಸ್ತ್ರೀಯ ಸ್ಥಾನ ಕನ್ನಡಕ್ಕೆ ದೊರಕಲಿ, ಅದಕ್ಕೂ ಮಿಗಿಲಾದ ಸ್ಥಾನ ಕನ್ನಡಕ್ಕೆ ಸ್ವಾಭಾವಿಕವಾಗಿಯೇ ಇದೆ, ಎಂಬುದನ್ನು ಹೇಳಲು ನಾನು ಪ್ರಯತ್ನಿಸಿದ್ದೇನೆ.
ಕನ್ನಡ ಭಾಷೆಯ ಎತ್ತರ, ಅದರ ಗಟ್ಟಿತನ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇದು ಉಪಯುಕ್ತತೆ ಇವಲ್ಲ ಪ್ರಪಂಚದಾದ್ಯಂತ ಹರಡಬೇಕು. ಸಾವಿರದ ಇನ್ನೂರು ವರ್ಷಗಳ ನೃಪತುಂಗ ಮಹಾರಾಜಇದನ್ನು ಊಹಿಸಿದ್ದನೋ ಇಲ್ಲವೋ. ವಸುಧಾವಲಯ ವಿಲೀನ ವಿಶದ ವಿಷಯ ವಿಶೇಷಂ- ಎಂದು ಹೇಳಿದ ಮಾತು ಇಂದು ಸತ್ಯವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಕನ್ನಡಕ್ಕೆ ಆ ಸ್ಥಾನ ಸಿಗಲಿ, ಈ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನಿಸೋಣ.