ಭಾರತದಲ್ಲಿನ ಅಪೌಷ್ಟಿಕ ಸಮಸ್ಯೆಗೆ 'ಸ್ಪಿರುಲಿನಾ' ರಾಮಬಾಣ!
ಪುರಾತನ ಮೆಕ್ಸಿಕೋ ಜನರ ಆಹಾರವೆಂದು ನಂಬಲಾಗಿರುವ ಸ್ಪಿರುಲಿನಾ ಸಸ್ಯವು ಭಾರತದಲ್ಲಿ ತಲೆದೋರಿರುವ ಅಪೌಷ್ಟಿಕತೆ ಸಮಸ್ಯೆಯನ್ನು ನಿವಾರಿಸುವ ಸಾಮರ್ಥ್ಯ ಹೊಂದಿದೆ ಎಂಬುದು ಎಂಬುದು ಇತ್ತೀಚಿಗಿನ ಸಂಶೋಧನೆಯಿಂದ ತಿಳಿದು ಬಂದಿದೆ. ನೀಲಿ ಹಸಿರು ಬಣ್ಣದ ಸಾದಾ ಸಸ್ಯದಿಂದ ತಯಾರಿಸಲಾದ ಕ್ಯಾಂಡಿಯು ಸಣ್ಣ ಮಕ್ಕಳ ಎಲ್ಲಾ ರೀತಿಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಹೊಸ ಅಧ್ಯಯನವು ತಿಳಿಸಿದೆ. ಸ್ಪಿರುಲಿನಾ ತುಂಬಾ ಚಿಕ್ಕದಾದ ಶುದ್ಧ ನೀರಿನಲ್ಲಿ ಬೆಳೆಯುವ ಸಸ್ಯವಾಗಿದ್ದು ತನ್ನಲ್ಲಿ ಸಮೃದ್ಧವಾದ ಪ್ರೋಟೀನ್, ನ್ಯೂಟ್ರೀನ್‌ಗಳನ್ನು ಒಳಗೊಂಡಿದೆ. ಕಡಿಮೆ ಪ್ರಮಾಣದ ಕ್ಯಾಲೋರಿ ಹಾಗೂ ಪೂರ್ತಿ ಆರ್ದವಾದ ಕೊಬ್ಬನ್ನು ತನ್ನಲ್ಲಿ ಒಗ್ಗೂಡಿಸಿಕೊಂಡಿರುವ ಇದು ಲೋಳೆ ರಹಿತ ಸಸ್ಯವಾಗಿದೆ ಮತ್ತು ಆಸಿಡ್ ರಹಿತವಾಗಿದೆ. ಇದು ಹೆಚ್ಚು ಪ್ರೋಟೀನ್ ಭರಿತ ಆಹಾರವನ್ನು ಉತ್ಪತ್ತಿ ಮಾಡುವುದರಿಂದ 'ನಾಸಾ' ವು ತನ್ನ ಗಗನ ಯಾತ್ರಿಗಳ ಆಹಾರದ ಪಟ್ಟಿಯಲ್ಲಿ ಇದನ್ನು ಸೇರಿಸಿಕೊಂಡಿದೆ.ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿರುವ ಬುಡಕಟ್ಟು ಪ್ರದೇಶದ 2 ರಿಂದ 5 ವರ್ಷದ ಒಳಗಿನ ಸುಮಾರು 2,000 ಮಕ್ಕಳನ್ನು ಒಳಗೊಂಡಂತೆ ಈ ಸಸ್ಯದಿಂದ ಮಾಡಿದ ಪ್ರಯೋಗವು ಅಭೂತಪೂರ್ವ ಬದಲಾವಣೆಗಳನ್ನು ಈ ಮಕ್ಕಳಲ್ಲಿ ಉಂಟು ಮಾಡಿದೆ ಎಂದು ಅಧ್ಯಯನವು ತಿಳಿಸಿದೆ. ಇದು ಮಕ್ಕಳ ಬೆಳವಣಿಗೆಗೆ ಪೂರಕವಾದ ಹೆಚ್ಚಿನ ಪೋಷಕಾಂಶವನ್ನು ಒದಗಿಸುವುದರಿಂದ ಸಾಮಾನ್ಯವಾಗಿ ಉದ್ದ ಹಾಗೂ ಆರೋಗ್ಯವಂತರಾಗಿರುತ್ತಾರೆ ಎಂಬುದು ಚೈಲ್ಟ್ ಫಂಡ್ ಇಂಡಿಯಾದ ರಾಷ್ಟ್ರೀಯ ನಿರ್ದೇಷಕ ಡೋಲಾ ಮಹಾಪತ್ರ ಅವರ ಅಭಿಪ್ರಾಯವಾಗಿದೆ.