ಶಿಶುಗಳಿಗೆ ಅಥವಾ ಮಕ್ಕಳಿಗೆ ನೀಡುವ ಆಹಾರವನ್ನು ಎಚ್ಐವಿ ಪೀಡಿತ ತಾಯಂದಿರು ಅಥವಾ ಮಕ್ಕಳನ್ನು ನೋಡಿಕೊಳ್ಳುವವರು ತಿಂದು ನೋಡಿದ ಮೂಲಕ ನೀಡುವುದರಿಂದಲೂ ಎಚ್ಐವಿ ಸೋಂಕು ಹಬ್ಬಲು ಸಾಧ್ಯ ಎಂಬುದನ್ನು ಪತ್ತೆ ಮಾಡಿರುವ ಸಂಶೋಧಕರು ಇಂತಹ ಮೊದಲ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ.
ಮಕ್ಕಳಿಗೆ ಆಹಾರವನ್ನು ನೀಡುವ ಮುಂಚಿತವಾಗಿ ಅದನ್ನು ರುಚಿನೋಡುವಾಗ ಅಥವಾ ತಿನ್ನುವ ವೇಳೆ ಎಚ್ಐವಿ ಸೋಂಕು ಪೀಡಿತ ರಕ್ತವು ಲಾಲರಸ ಅಥವಾ ಬಾಯಿಯ ಜೊಲ್ಲಿನ ಮೂಲಕ ಬುಹುತೇಕ ವರ್ಗಾವಣೆಯಾಗುತ್ತದೆ.
ಎಚ್ಐವಿ ಸೋಂಕು ಪೀಡಿತ ತಾಯಂದಿರು ಅಥವಾ ಇತರರು ಶಿಶುಗಳಿಗೆ ಆಹಾರ ನೀಡುವ ವೇಳೆಗೆ ಕಚ್ಚಿತಿಂದಿದ್ದರೆ ಇಂತಹ ಎಂಜಲು ಮಾಡಿರುವ ಆಹಾರವನ್ನು ನೀಡಬಾರದು ಎಂದು ಎಚ್ಚರಿಕೆ ನೀಡಬೇಕೆಂಬುದನ್ನು ತಮ್ಮ ಸಂಶೋಧನೆ ಕಂಡುಕೊಂಡಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಸೂರತ್‌ನಲ್ಲಿರುವ ದಕ್ಷಿಣ ಗುಜರಾತ್ ವಿಶ್ವವಿದ್ಯಾನಿಲಯದಲ್ಲಿ ತನ್ನ ವೈದ್ಯಕೀಯ ಪದವಿ ಪಡೆದಿರುವ ಪ್ರಸಕ್ತ ಅಮೆರಿಕದ ಸೈಂಟ್ ಜೂಡ್ ಮಕ್ಕಳ ಸಂಶೋಧನಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆದಿತ್ಯ ಗೌರ್ ನೇತೃತ್ವದಲ್ಲಿ ನಡೆಸಲಾಗಿತ್ತು.
ಆರಂಭದಲ್ಲಿ ಎಚ್ಐವಿ ಸೋಂಕು ಇಲ್ಲದಿದ್ದ ಒಂಬತ್ತು ತಿಂಗಳ ಶಿಶುವೊಂದರಲ್ಲಿ ಬಳಿಕ ಸೋಂಕು ವೃದ್ಧಿಯಾಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಮಗುವಿನ ಎಚ್ಐವಿ ಪೀಡಿತ ತಾಯಿ ಎದೆಹಾಲು ಉಣಿಸಿರಲಿಲ್ಲ. ಮತ್ತಷ್ಟು ತನಿಖೆ ನಡೆಸಿದಾಗ ರಕ್ತದ ಮೂಲಕ, ಗಾಯ ಅಥವಾ ಇನ್ಯಾವುದೇ ಲೈಂಗಿಕ ದೌರ್ಜನ್ಯದ ಮೂಲಕವೂ ಸೋಂಕು ಹರಡಿಲ್ಲ ಎಂಬುದು ಪತ್ತೆಯಾಗಿತ್ತು. ಆದರೆ ಮಗುವಿನಲ್ಲಿ ತಾಯಿ ಹೊಂದಿದ್ದುದೇ ಎಚ್ಐವಿ ತಳಿಯ ಸೋಂಕು ಪತ್ತೆಯಾಗಿದ್ದು, ಇದು ವೈದ್ಯರಿಗೆ ದೊಡ್ಡ ಸವಾಲಾಗಿತ್ತು.
ಸಂಶೋಧನಾ ಕೇಂದ್ರದ ಮಾರಿಯನ್ ಡೋನೋಹೆ ಅವರು ಮಗುವಿಗೆ ಆಹಾರ ನೀಡುವ ಪದ್ಧತಿಯ ಕುರಿತು ಕೂಲಂಕುಷವಾಗಿ ಪ್ರಶ್ನಿಸಿದ್ದರು. ನೀವು ಮಗುವಿಗೆ ಜಗಿದು ಆಹಾರ ನೀಡುತ್ತೀರಾ ಎಂದೂ ಪ್ರಶ್ನಿಸಿದ್ದರು. ಈ ವೇಳೆ ತಾಯಿ ಮಗುವಿಗೆ ಆಹಾರವನ್ನು ಜಗಿದು ನೀಡುವ ಅಂಶವನ್ನು ಹೊರಗೆಡಹಿತ್ತು ಎಂದು ಗೌರ್ ಹೇಳಿದ್ದಾರೆ.
ಆಹಾರವನ್ನು ಜಗಿಯುವಾಗ ವಸಡಿನಿಂದ ಅಥವಾ ಬಾಯಿಯ ಇತರ ಭಾಗದಿಂದ ಅಲ್ಪಪ್ರಮಾಣದಲ್ಲಿ ರಕ್ತ ಸುರಿಯಬಹುದಾದ ಸಂಭವವಿದ್ದು ಇದರಿಂದಾಗಿ ಲಾಲಾರಸದ ಮೂಲಕ ಸೋಂಕು ಹರಡಬಹುದಾದ ಸಂಭವವಿದೆ ಎಂದು ಸಂಶೋಧಕರು ಹೇಳಿದ್ದಾರೆ.