(ಚಿತ್ರ, ಲೇಖನ :ಬಿ.ಎಂ.ಲವಕುಮಾರ್, ಮೈಸೂರು )
ಆನೆಗಳು ಮೈಸೂರು ದಸರಾದ ಪ್ರಮುಖ ಆಕರ್ಷಣೆ. ಜೊತೆಗೆ ಜಂಬೂ ಸವಾರಿಯ ರೂವಾರಿಗಳೂ ಹೌದು. ಆನೆಗಳಿಲ್ಲದ ದಸರಾವನ್ನು ಊಹಿಸಲೂ ಸಾಧ್ಯವಿಲ್ಲ. ವಿವಿಧ ಆನೆ ಶಿಬಿರಗಳಿಂದ ಎರಡು ತಂಡವಾಗಿ ಆಗಮಿಸುವ ಗಜಪಡೆ, ಕಾಡಿನಿಂದ ನಗರ ಪ್ರವೇಶಿಸುತ್ತಿದ್ದಂತೆಯೇ ಮೈಸೂರಿಗೆ ದಸರಾ ಕಳೆ ಬಂದು ಬಿಡುತ್ತದೆ.ದಸರಾಕ್ಕೆ ಸುಮಾರು ಒಂದೂವರೆ ತಿಂಗಳಿರುವಾಗಲೇ ನಾಗರಹೊಳೆಯ ವೀರನಹೊಸಹಳ್ಳಿಯಿಂದ ಬಲರಾಮ ನೇತೃತ್ವದ ಆರು ಆನೆಗಳ ಮೊದಲ ತಂಡದ ಗಜಪಯಣ ಮೈಸೂರಿಗೆ ಆಗಮಿಸಿದರೆ, ಆ ನಂತರ ದಸರಾಕ್ಕೆ ಕೆಲವೇ ದಿನಗಳ ಅಂತರದಲ್ಲಿ ಉಳಿದ ಆರು ಆನೆಗಳ ಎರಡನೆಯ ತಂಡ ಬರುತ್ತದೆ. ಈ ಗಜಪಡೆಗೆ ಮೈಸೂರಿನ ಅರಮನೆ ಆವರಣದಲ್ಲಿ ದಿನನಿತ್ಯ ವಿವಿಧ ಬಗೆಯ ಭೂರೀ ಭೋಜನ. ಅದರಲ್ಲೂ ಜಂಬೂ ಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಬಲರಾಮನಿಗೆ ವಿಶೇಷ ಸತ್ಕಾರಗಳು ನಡೆಯುತ್ತವೆ. ಉದ್ದು. ಗೋಧಿ, ಕುಸುಲಕ್ಕಿ, ಈರುಳ್ಳಿ, ಹಸಿ ತರಕಾರಿಗಳ ದೊಡ್ಡ ಉಂಡೆ, ಜೊತೆಗೆ ಬೆಣ್ಣೆ, ಭತ್ತ, ತೆಂಗಿನಕಾಯಿ, ಹಿಂಡಿ, ಕಬ್ಬು, ಬೆಲ್ಲ, ಉಚ್ಚೆಳ್ಳು ಮೊದಲಾದ ಸೈಡ್ ಐಟಂಗಳೂ ಇರುತ್ತವೆ. ಇದಲ್ಲದೆ, ಹಸಿರು ಮೇವುಗಳಾಗಿ ಆಲದ ಮರದ ಸೊಪ್ಪು, ಹುಲ್ಲನ್ನು ಆಗಾಗ್ಗೆ ನೀಡಲಾಗುತ್ತದೆ. ದಿನಕ್ಕೆರಡು ಬಾರಿ ಅರಮನೆ ಆವರಣದ ತೊಟ್ಟಿಯಲ್ಲಿ ಮಜ್ಜನದ ವೈಭೋಗ.ಜಂಬೂ ಸವಾರಿಯಲ್ಲಿ ಯಾವುದೇ ಅಡೆತಡೆಗೆ ಬಗ್ಗದೆ ಮುನ್ನಡೆಯಲು ಸಿದ್ಧವಾಗಿರಲು ಬಲರಾಮನಿಗೆ ಸುಮಾರು 750 ಕೆ.ಜಿ. ತೂಕದ ಮರದ ಅಂಬಾರಿಯನ್ನು, ಉಳಿದ ಆನೆಗಳಿಗೆ ಮರಳಿನ ಮೂಟೆಯನ್ನು ಕಟ್ಟಿ ದಿನಕ್ಕೊಮ್ಮೆ ಅರಮನೆಯಿಂದ ಸಯ್ಯಾಜಿರಾವ್ ರಸ್ತೆಯಲ್ಲಿ ಬನ್ನಿ ಮಂಟಪದವರೆಗೆ ಕಡ್ಡಾಯ ಮಾರ್ಚ್‌ಫಾಸ್ಟ್ ನಡೆಯುತ್ತದೆ. ಈ ಗಜಪಡೆಯ ಉಸ್ತುವಾರಿಗೆ ಮಾವುತರು, ಕಾವಡಿಗರು ಇರುವುದರೊಂದಿಗೆ ಪಶುವೈದ್ಯಾಧಿಕಾರಿಗಳಿಂದ ಆಗಾಗ್ಗೆ ತಪಾಸಣೆಯೂ ನಡೆಯುತ್ತಿರುತ್ತದೆ. ಈ ಗಜಪಡೆಯನ್ನು ಜತನದಿಂದ ನೋಡಿಕೊಳ್ಳಲು ಮಾವುತರ ಕುಟುಂಬಗಳಿಗೆ ಅರಮನೆಯ ಆವರಣದಲ್ಲಿಯೇ ಶೆಡ್ ಹಾಕಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗುತ್ತದೆ.