[
ಪ.ಗೋ. ಎಂದೇ ಖ್ಯಾತರಾಗಿದ್ದ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ ಅವರ ಸಂಸ್ಮರಣಾ ಗ್ರಂಥದಲ್ಲಿ (1999) ಪ್ರಕಟವಾದ ಈ ಲೇಖನವನ್ನು ಪ.ಗೋ. ಅವರ ಪುತ್ರ, ದೋಹಾ-ಖತಾರ್‌ನಲ್ಲಿ ಎಂಜಿನಿಯರ್ ಆಗಿರುವ ಪದ್ಯಾಣ ರಾಮಚಂದ್ರ ಅವರು ವೆಬ್‌ದುನಿಯಾ ಜೊತೆಗೆ ಹಂಚಿಕೊಂಡಿದ್ದಾರೆ. ಪದ್ಯಾಣ ಗೋಪಾಲಕೃಷ್ಣ ಅವರ ಪರಿಚಯ ಲೇಖನ ಮುಂದಿನ ಪುಟದಲ್ಲಿದೆ. -ಸಂ ]
ಲೇಖಕ ಪೆರುವೋಡಿ ನಾರಾಯಣ ಭಟ್ಟ ಅವರ ಕುರಿತು : ಅಭಿನಯದ ಸಹಜತೆ, ಅರ್ಥಗಾರಿಕೆಯಲ್ಲಿನ ಪಾತ್ರೌಚಿತ್ಯಗಳನ್ನು ಸದಾ ಕಾಪಾಡಿಕೊಂಡು ಬಂದ ಅಜಾತಶತ್ರು, ಯಕ್ಷಗಾನ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ಟರದ್ದು ಯಕ್ಷಗಾನ ಲೋಕದಲ್ಲಿ ದೊಡ್ಡ ಹೆಸರು. ಕಡಲ ತೀರದ ಭಾರ್ಗವ ಡಾ.ಶಿವರಾಮ ಕಾರಂತರು ಚಿತ್ರೀಕರಿಸಿದ ಯಕ್ಷಗಾನ ಸಿನಿಮಾದಿಂದ ಹಿಡಿದು ಯಕ್ಷಗಾನದ ಯಾವುದೇ ಪ್ರಸಂಗಕ್ಕೂ ಸೈ ಎನ್ನುವ ಭಟ್ಟರನ್ನು ಹಲವು ಪ್ರಶಸ್ತಿ, ಪುರಸ್ಕಾರಗಳು ಅರಸಿಕೊಂಡು ಬಂದಿದೆ. ಈ ಯಕ್ಷರಂಗದ ದಿಗ್ಗಜ ಪತ್ರಿಕೋದ್ಯಮದ ಇನ್ನೋರ್ವ ದಿಗ್ಗಜ ಪ.ಗೋಪಾಲಕೃಷ್ಣರ ಕುರಿತು ಆತ್ಮೀಯತೆಯಿಂದ ಬರೆದ ಪ.ಗೋ. ಕುರಿತಾದ ಭಟ್ಟರ ಮಾತುಗಳು ನಿಮಗಿಷ್ಟವಾದೀತು.
-----------
ದಕ್ಷಯಜ್ಞ ನೋಡಿ ಖುದ್ದು ಕ್ರುಶ್ಚೇವ್ ಕೈಕುಲುಕಿದ್ದರು!
1955
ನೇ ಇಸ್ವಿ ಸೆಪ್ಟೆಂಬರ್ ತಿಂಗಳಲ್ಲಿ ಒಂದು ದಿವಸ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ನಮ್ಮ ಮನೆಯಲ್ಲಿ ಪ್ರತ್ಯಕ್ಷನಾದ. ಆತ ಮೈಸೂರಿನಿಂದ ಬಂದಿದ್ದ. ಪ್ರಸಿದ್ಧ ದಸರಾ (ವಸ್ತು ಪ್ರದರ್ಶನ)ದಲ್ಲಿ ಒಂದು ಯಕ್ಷಗಾನ ಬಯಲಾಟ ಪ್ರದರ್ಶನವನ್ನು ಏರ್ಪಾಡು ಮಾಡುವ ಪೂರ್ವ ಸಿದ್ಧತೆಗಾಗಿ ಆತ ಬಂದಿದ್ದ. ಧರ್ಮಸ್ಥಳ ಮೇಳದ ವ್ಯವಸ್ಥಾಪಕ ಸ್ಥಾನದಲ್ಲಿದ್ದ ಹಿರಿಯ ಕಲಾವಿದ ಕುರಿಯ ವಿಠಲ ಶಾಸ್ತ್ರಿ ಮೊದಲಾದವರನ್ನೆಲ್ಲ ಭೇಟಿ ಮಾಡಿಕೊಂಡೇ, ಆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನನ್ನನ್ನು ಆಹ್ವಾನಿಸಲು ಬಂದಿದ್ದ. ಗೆಜ್ಜೆ ಬಿಚ್ಚಿ ಇರಿಸಿದ ದಿನಗಳವು. ಎಂದರೆ ವಾರ್ಷಿಕ ತಿರುಗಾಟ ಮುಗಿಸಿಕೊಂಡು, 'ಪತ್ತನಾಜೆ'ಗೆ, ದೇವಸ್ಥಾನಕ್ಕೆ ಪೆಟ್ಟಿಗೆ ಸಹಿತ ಹಿಂದಿರುಗಿದ ಮೇಲೆ, ಮುಂದೆ 'ದೀಪಾವಳಿ' ತರುವಾಯವೇ ಆಟ-ತಿರುಗಾಟ ಪ್ರಾರಂಭವಾಗುವುದು ಮೇಳದ ಕಟ್ಟಳೆಯಾಗಿತ್ತು. ಈ ಸಂಪ್ರದಾಯವನ್ನು ಮೀರುವುದು ಸಾಧ್ಯವಿರಲಿಲ್ಲ. ಈ ವಿಚಾರ ತಿಳಿದಿದ್ದ ಗೋಪಾಲಕೃಷ್ಣ, 'ಇದು ಮೇಳ ಅಲ್ಲ, ತಿರುಗಾಟವೂ ಅಲ್ಲ, ಕೆಲವು ಕಲಾವಿದರನ್ನು (ವೇಷಧಾರಿಗಳು) ವೇಷಭೂಷಣ- ಕಿರೀಟ ಇತ್ಯಾದಿ ಸಲಕರಣೆಗಳನ್ನು ಎರವಲು ಪಡೆದುಕೊಂಡು ಹೋಗುತ್ತಿರುವುದು' ಎಂದಿತ್ಯಾದಿಯಾಗಿ ವಿವರಣೆ ನೀಡಿ ಮೇಳದ ಕೃಪಾ ಪೋಷಕರಾದ ಧರ್ಮಾಧಿಕಾರಿಗಳ ಅಪ್ಪಣೆ ಪಡೆದುಕೊಂಡಿದ್ದ. ಇನ್ನೊಂದು ಪ್ರಬಲವಾದ ಕಾರಣವೆಂದರೆ, 'ಜಗದ್ವಿಖ್ಯಾತ ಮೈಸೂರು ದಸರಾ'ದಲ್ಲಿ ಆಟ ಆಡಲು ಮೈಸೂರು ಸರಕಾರದ ವತಿಯಿಂದ ಬಂದ ಆಹ್ವಾನವನ್ನು ಮಾನ್ಯ ಮಾಡದೆ ಇರುವುದು ಸೌಜನ್ಯವಲ್ಲ-200 ವರ್ಷಗಳ ಹಿಂದೊಮ್ಮೆ 'ಅರಮನೆ'ಯ ಆಮಂತ್ರಣದ ಮೇರೆಗೆ, ದರ್ಬಾರ್‌ನಲ್ಲಿ ಆಡಿದ ಬಯಲಾಟದ ತರುವಾಯ ದೊರಕಿದ ಮೊದಲ ಆಹ್ವಾನ ಇದು. ಗೌರವಾಸ್ಪದ ಅಂಶ ಎಂದು ವಿವರಣೆ ನೀಡಿ, ಅವರ ಮನ ಒಲಿಸುವುದರಲ್ಲಿ ಪ.ಗೋ.ಯಶಸ್ವಿಯಾಗಿದ್ದ.ಪ್ರಸಂಗವನ್ನು ಎರಡು ಗಂಟೆಗಳ ಮಿತಿಯಲ್ಲಿ ಪ್ರದರ್ಶಿಸಿದ್ದಾಯಿತು. ಆಟ ಚೆನ್ನಾಗಿ ಆಯಿತು. ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿತು-ಯಕ್ಷಗಾನದ ಭಾಷೆಯಲ್ಲೇ ಹೇಳುವುದಾದರೆ 'ಜಯಜಯಾ' ಎನ್ನಿಸಿತು. (ಆ ಪ್ರಸಂಗದಲ್ಲಿ ನಾನು ಹಾಸ್ಯ ಪಾತ್ರವಹಿಸಿದ್ದೆ.) ಮರುದಿನ ಒಂದು ತಾಳಮದ್ದಲೆ ಕಾರ್ಯಕ್ರಮ. ಪಿಟೀಲು ಚೌಡಯ್ಯನವರ 'ಅಯ್ಯನಾರ್ ಕಲಾಶಾಲೆ'ಯಲ್ಲಿ ನಡೆಯಿತು. ಹಿರಿಯ ಕವಿ ಪ್ರೊ.ಗೋಪಾಲಕೃಷ್ಣ ಅಡಿಗರು ಅಧ್ಯಕ್ಷರಾಗಿದ್ದರು. (ಆಗ ಮೈಸೂರಿನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದ ಎಂ.ಬಿ.ಮರಕಿಣಿ ಮತ್ತು ಕೆ.ಆರ್.ಗೋಪಾಲ ಕೃಷ್ಣಯ್ಯ(ಕೀಲಾರು) ಇವರ ಕೋಣೆಯಲ್ಲಿ ಪ.ಗೋ. ತಾತ್ಕಾಲಿಕವಾಗಿ ಠಿಕಾಣಿ ಹೂಡಿದ್ದು ಈ ಎಲ್ಲ ಸಾಧನೆಗಳ ಹಿಂದೆ ಅವರ ಪೂರ್ಣ ಸಹಯೋಗವಿತ್ತು.)