Select Your Language

Notifications

webdunia
webdunia
webdunia
webdunia

'ಸೂಪರ್' ಬಗ್ಗೆ ಅಂಬಿ, ಸುದೀಪ್, ದರ್ಶನ್, ಗಣೇಶ್ ಏನಂತಾರೆ?

'ಸೂಪರ್' ಬಗ್ಗೆ ಅಂಬಿ, ಸುದೀಪ್, ದರ್ಶನ್, ಗಣೇಶ್ ಏನಂತಾರೆ?
ಕನ್ನಡ ಚಿತ್ರಾಭಿಮಾನಿಗಳಲ್ಲಿ ಉಪೇಂದ್ರ ಕ್ರೇಜ್ ಆರಂಭವಾಗಿದೆ. ಸೂಪರ್ ಮೇನಿಯಾ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಹುಟ್ಟಿಕೊಂಡಿದೆ. ಈ ನಿಟ್ಟಿನಲ್ಲಿ ಅವರ ನಿರ್ದೇಶನದ ಚಿತ್ರಗಳನ್ನು ನೋಡುತ್ತಾ ಬೆಳೆದು, ಇಂದು ದೊಡ್ಡ ನಾಯಕರುಗಳಾಗಿ, ನಿರ್ದೇಶಕರುಗಳಾಗಿ ಬೆಳೆದಿರುವ ಹಲವು ಮಂದಿಯ ನಿರೀಕ್ಷೆ ದೊಡ್ಡ ಮಟ್ಟದಲ್ಲೇ ಇರುವುದು ಅಚ್ಚರಿಯೇನಲ್ಲ.

ಶುಕ್ರವಾರ ಬಿಡುಗಡೆಯಾಗುತ್ತಿರುವ (ಡಿಸೆಂಬರ್ 3) ನಯನತಾರಾ, ತುಲಿಪ್ ಜೋಶಿ ನಾಯಕಿಯರಾಗಿರುವ 'ಸೂಪರ್' ಚಿತ್ರದ ಮೂಲಕ ಬರೋಬ್ಬರಿ 10 ವರ್ಷಗಳ ನಂತರ ನಿರ್ದೇಶಕ ಸ್ಥಾನಕ್ಕೆ ಮರಳಿರುವ ಉಪೇಂದ್ರ ಬಗ್ಗೆ ಚಿತ್ರರಂಗ ಏನು ಹೇಳುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ.

'ಚಿತ್ರಲೋಕ.ಕಾಮ್' ವೆಬ್‌ಸೈಟ್ ಪ್ರಕಟಿಸಿರುವ ಈ ಸಂದರ್ಶನವನ್ನು ಇಲ್ಲಿ ಕನ್ನಡೀಕರಿಸಿ ಪ್ರಕಟಿಸಲಾಗಿದೆ.

PR
ರೆಬೆಲ್ ಸ್ಟಾರ್ ಅಂಬರೀಷ್
ಉಪೇಂದ್ರ ಕ್ರಿಯಾಶೀಲತೆ ಬಗ್ಗೆ ನಾನು ಎದೆತಟ್ಟಿ ಹೇಳಬಲ್ಲೆ. ಯಾಕೆಂದರೆ ಆತನ ನಿರೂಪನೆಯಿಂದ ಪ್ರಭಾವಿತನಾಗಿ 'ಆಪರೇಷನ್ ಅಂತ'ದಲ್ಲಿ ನಟಿಸಲು ತಕ್ಷಣಕ್ಕೆ ಒಪ್ಪಿಕೊಂಡವನು ನಾನೂ. ಖಂಡಿತಾ ಉಪೇಂದ್ರ ಶ್ರೇಷ್ಠ ಸಾಧನೆಗಳನ್ನು ಮಾಡಲಿದ್ದಾನೆ. ಆತನ ನಿರ್ದೇಶನದ ಬಗ್ಗೆಯೂ ಎರಡು ಮಾತಿಲ್ಲ. ಸಾಧ್ಯವಾದಷ್ಟು ಬೇಗ ನಾನು ಸೂಪರ್ ನೋಡುತ್ತೇನೆ.

webdunia
PR
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
ಉಪ್ಪಿ ಮತ್ತು ಅವರ ಕ್ರಿಯೇಟಿವಿಟಿಗಿದೋ ಸಲಾಂ. ನೂತನ ಚಿತ್ರ ಸೂಪರ್ ಮೂಲಕ ಉಪ್ಪಿ ಎಲ್ಲಾ ದಾಖಲೆಗಳನ್ನು ಮುರಿದು ಅಭಿಮಾನಿಗಳನ್ನು ಈ ಹಿಂದೆ ಯಾರಿಂದಲೂ ಸಾಧ್ಯವಾಗದಷ್ಟು ರಂಜಿಸಲಿದ್ದಾರೆ ಎಂಬ ನಿರೀಕ್ಷೆ ನನ್ನದು. ಅವರ ಕ್ರಿಯಾಶೀಲ ಹಾದಿಯ ಕಿರೀಟ ಸೂಪರ್ ಎಂದುಕೊಂಡಿದ್ದೇನೆ.

webdunia
PR
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ
ನನ್ನ ಇಬ್ಬರು ಅಣ್ಣಂದಿರ ಚಿತ್ರಗಳನ್ನು ಉಪೇಂದ್ರ ನಿರ್ದೇಶಿಸಿದ್ದಾರೆ. ಅವರು ನನ್ನನ್ನು ಹಾಕಿಕೊಂಡು ಕೂಡ ನಿರ್ದೇಶಿಸುತ್ತಾರೆ ಎಂದು ಬಯಸುತ್ತಿದ್ದೇನೆ. ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ. ಸುದೀರ್ಘ ಅಂತರದ ಬಳಿಕ ಅವರು ನಿರ್ದೇಶನಕ್ಕೆ ಮರಳಿದ್ದು, ಈ ಚಿತ್ರ ಕನ್ನಡ ಚಿತ್ರಾಭಿಮಾನಿಗಳನ್ನು ತಣಿಸಲಿದೆ ಎಂಬುದು ನನ್ನ ನಿರೀಕ್ಷೆ.

webdunia
PR
ರಾಧಿಕಾ ಪಂಡಿತ್
ಉಪ್ಪಿ ಸಾರ್ ನನ್ನ ಸಾರ್ವಕಾಲಿಕ ನೆಚ್ಚಿನ ನಿರ್ದೇಶಕ-ನಟ. ಅವರೊಬ್ಬ ತೀವ್ರ ತುಡಿತಗಳನ್ನು ಹೊಂದಿರುವ ನಟ ಮತ್ತು ಕ್ರಿಯಾಶೀಲ ನಿರ್ದೇಶಕ. ಅವರ ಚಿತ್ರಗಳನ್ನು ನೋಡುವುದೆಂದರೆ ನನಗೆ ತುಂಬಾ ಇಷ್ಟ. ಅವರು ನಿರ್ದೇಶಿಸಿದ ಓಂ, ಎ ಮತ್ತು ಉಪೇಂದ್ರ ಸೇರಿದಂತೆ ಎಲ್ಲಾ ಚಿತ್ರಗಳನ್ನು ನಾನು ನನ್ನ ಗೆಳೆಯರು ಮತ್ತು ಸಂಬಂಧಿಕರ ಜತೆ ಚಿತ್ರಮಂದಿರಗಳಲ್ಲಿ ಕೂತು ನೋಡಿದ್ದೇನೆ. ಇತರರಿಗಿಂತ ಭಿನ್ನವಾಗಿ ಯೋಚಿಸಿ, ಅದನ್ನು ತನ್ನ ಚಿತ್ರಗಳಲ್ಲಿ ಪ್ರಚುರ ಪಡಿಸುವ ಭಿನ್ನ ಮತ್ತು ಸ್ವಂತಿಕೆ ಹೊಂದಿರುವ ನಿರ್ದೇಶಕ ಉಪ್ಪಿ ಸಾರ್. ಟಿಕೆಟ್ ಸಿಗುವುದು ಕಷ್ಟ, ಆದರೂ ಸಾಧ್ಯವಾದಷ್ಟು ಬೇಗ ಸೂಪರ್ ನೋಡುತ್ತೇನೆ.

webdunia
PR
ಶ್ರೀನಗರ ಕಿಟ್ಟಿ
ಎ, ಉಪೇಂದ್ರ ಮುಂತಾದ ಉಪ್ಪಿ ಸಾರ್ ಚಿತ್ರಗಳನ್ನು ನಾನು ನಂದಾ ಚಿತ್ರಮಂದಿರದಲ್ಲಿ ನೋಡಿದ್ದೆ. ಮೊದಲ ದಿನ ಮೊದಲ ಪ್ರದರ್ಶನ ವೀಕ್ಷಣೆ ನಮ್ಮದಾಗಬೇಕೆಂದು ಟಿಕೆಟ್‌ಗಾಗಿ ಗೆಳೆಯರ ಜತೆ ಗಲಾಟೆ ಕೂಡ ಮಾಡಿದ್ದೆ. ತನ್ನ ಕ್ರಿಯಾಶೀಲ ಕಾರ್ಯನಿರ್ವಹಣೆ ಮೂಲಕ ಅತಿ ಹೆಚ್ಚು ಗಮನ ಸೆಳೆದಿರುವ ನಿರ್ದೇಶಕ ಉಪೇಂದ್ರ. ನನ್ನ ಜತೆ ಆಚಾರ್ಯ ಪಾಠಶಾಲೆಯಲ್ಲಿ ಕಲಿತ ಹಳೆ ಗೆಳೆಯರ ಜತೆ ಮೊದಲ ದಿನವೇ ಸೂಪರ್ ನೋಡುತ್ತೇನೆ. ಉಪ್ಪಿ ಸಾರ್ ಕೂಡ ಅದೇ ಕಾಲೇಜಿನ ಹಳೆ ವಿದ್ಯಾರ್ಥಿ ಕೂಡ ಹೌದು.

webdunia
PR
ಲೂಸ್ ಮಾದ ಯೋಗೀಶ್
ಓಂ ನನ್ನ ಸಾರ್ವಕಾಲಿಕ ನೆಚ್ಚಿನ ಚಿತ್ರ. ಅದನ್ನು ಎಷ್ಟು ಬಾರಿ ನೋಡಿದ್ದೇನೋ ನನಗೇ ಗೊತ್ತಿಲ್ಲ. ಆ ಚಿತ್ರ ನೋಡಿದ ಬಳಿಕ ನಾನು ಶಿವಣ್ಣ ಸಾರ್ ಮತ್ತು ಉಪ್ಪಿ ಸರ್ ಅವರ ದೊಡ್ಡ ಅಭಿಮಾನಿಯಾಗಿದ್ದೆ. ಅವರು ನಿರ್ದೇಶನಕ್ಕೆ ಮರಳುವುದನ್ನು ನಾನು ಕಾತರದಿಂದ ಎದುರು ನೋಡುತ್ತಿದ್ದೆ. ಈಗ ಸೂಪರ್ ಚಿತ್ರದ ಹಾಡುಗಳನ್ನು ಕೂಡ ಕೇಳಿದ್ದೇನೆ. 'ಸಿಕ್ಕಾಪಟ್ಟೆ' ಹಾಡು ನನಗೆ ತುಂಬಾ ಇಷ್ಟವಾಗಿದೆ. ಚಿತ್ರದ ಪ್ರೋಮೊ ಕೂಡ ನನ್ನಲ್ಲಿ ರೋಮಾಂಚನವನ್ನುಂಟು ಮಾಡಿದೆ.

webdunia
PR
ಕಿಚ್ಚ ಸುದೀಪ್
ಉಪ್ಪಿ ಸಾರ್ ಯಾವತ್ತಿದ್ದರೂ ನನ್ನ ಸ್ಫೂರ್ತಿಯ ಚಿಲುಮೆ. ಆದಷ್ಟು ಬೇಗ ಯಾವುದಾದರೂ ಮಲ್ಟಿಪ್ಲೆಕ್ಸ್‌ನಲ್ಲಿ ನಾನು ಸೂಪರ್ ಚಿತ್ರವನ್ನು ನೋಡುತ್ತೇನೆ. ಉಪ್ಪಿ ಸಾರ್ ನಿರ್ದೇಶನದಿಂದ ದೂರ ಉಳಿದ ನಂತರ ಅವರ ಕ್ರಿಯಾಶೀಲ ನಿರ್ದೇಶಕನ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಹಲವರು ಯತ್ನಿಸಿದರು. ಆದರೆ ಅವರ ಹತ್ತಿರಕ್ಕೆ ಸರಿಯುವುದು ಕೂಡ ಸಾಧ್ಯವಿಲ್ಲ ಎನ್ನುವುದು ವಾಸ್ತವ ಸಂಗತಿ. ಖಂಡಿತಾ ಸೂಪರ್ ಕನ್ನಡ ಚಿತ್ರರಂಗದಲ್ಲಿ ಕ್ರಿಯೇಟಿವಿಟಿ ಮತ್ತು ಯಶಸ್ಸಿನ ವಿಚಾರದಲ್ಲಿ ದಾಖಲೆ ಸೃಷ್ಟಿಸುವ ಭರವಸೆ ನನ್ನಲ್ಲಿದೆ.

webdunia
PR
ಚಾಲೆಂಜಿಂಗ್ ಸ್ಟಾರ್ ದರ್ಶನ್
ನೀವು ನಿರ್ದೇಶನಕ್ಕೆ ಯಾವಾಗ ಮರಳುತ್ತೀರಿ ಎಂದು ಉಪ್ಪಿ ಸಾರ್ ಜತೆ 'ಅನಾಥರು' ಚಿತ್ರದಲ್ಲಿ ಜತೆಯಾಗಿ ಕೆಲಸ ಮಾಡುತ್ತಿದ್ದಾಗ ಯಾವಾಗಲೂ ಕೇಳುತ್ತಿದ್ದೆ. ಅವರು ಸೂಪರ್ ಮೂಲಕ ವಾಪಸ್ ಬಂದಿರುವುದು ನನಗೆ ಸಂತಸವಾಗಿದೆ. ಈ ಚಿತ್ರದ ಮೂಲಕ ಅವರು ಕ್ರಿಯೇಟಿವಿಟಿಯ ತುತ್ತ ತುದಿಯನ್ನು ತಲುಪಲಿದ್ದಾರೆ ಎನ್ನುವುದು ನನ್ನ ನಿರೀಕ್ಷೆ. ಪ್ರಸಕ್ತ ನಾನು 'ಸಂಗೊಳ್ಳಿ ರಾಯಣ್ಣ' ಚಿತ್ರೀಕರಣಕ್ಕಾಗಿ ಬೆಳಗಾವಿಯಲ್ಲಿದ್ದೇನೆ. ಸಾಧ್ಯವಾದಷ್ಟು ಬೇಗ ಸೂಪರ್ ನೋಡುತ್ತೇನೆ. ಉಪ್ಪಿ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ನೋಡಲು ಕೂಡ ನಾನು ಕಾತರದಿಂದಿದ್ದೇನೆ.

webdunia
PR
ಗೋಲ್ಡನ್ ಸ್ಟಾರ್ ಗಣೇಶ್
ಉಪ್ಪಿ ಸಾರ್ ಹಲವು ನಟ-ನಿರ್ದೇಶಕರಿಗೆ ಪ್ರೇರಣೆ. ನಾನು ನಿರ್ದೇಶಕನ ಟೋಪಿಗೆ 'ಕೂಲ್' ಚಿತ್ರದ ಮೂಲಕ ತಲೆ ಕೊಟ್ಟದ್ದು ಅನಿವಾರ್ಯ ಸ್ಥಿತಿಯಲ್ಲಿ. ಆದರೆ ನಾನು ಉಪೇಂದ್ರ ಮತ್ತು ಅವರಲ್ಲಿನ ಕ್ರಿಯಾಶೀಲತೆ ಕುರಿತು ಯೋಚಿಸಿದ್ದೇನೆ. ಈ ವಿಚಾರದಲ್ಲಿ ಉಪ್ಪಿ ಸಾರ್ ಎಲ್ಲಾ ನಿರ್ದೇಶಕರುಗಳಿಗಿಂತ ಮೈಲುಗಟ್ಟಲೆ ಮುಂದಿರುತ್ತಾರೆ. ಸೂಪರ್ ಬಾಕ್ಸಾಫೀಸಿನ ಎಲ್ಲಾ ದಾಖಲೆಗಳನ್ನು ಮುರಿದು, ಉಪೇಂದ್ರ ಭಾರತೀಯ ಚಿತ್ರರಂಗದ ಜನಪ್ರಿಯ ನಿರ್ದೇಶಕ ಪಟ್ಟವನ್ನು ಏರಲಿದ್ದಾರೆ.

ಮುಂದಿನ ಪುಟಕ್ಕೆ ಹೋಗಲು ಇಲ್ಲಿ ಕ್ಲಿಕ್ ಮಾಡಿ...




webdunia
PR
ವಿಜಯ ರಾಘವೇಂದ್ರ
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭಕ್ಕಾಗಿ ಗೋವಾಕ್ಕೆ ಹೋಗುತ್ತಿರುವುದರಿಂದ ಸೂಪರ್ ಚಿತ್ರವನ್ನು ಮೊದಲ ದಿನ ನೋಡಲು ಸಾಧ್ಯವಾಗುತ್ತಿಲ್ಲ. ಆದರೂ ಬೆಂಗಳೂರಿಗೆ ವಾಪಸ್ಸಾದ ಕೂಡಲೇ ಖಂಡಿತಾ ನೋಡುತ್ತೇನೆ. ನಾನು ಉಪ್ಪಿ ಸಾರ್ ಅವರ ದೊಡ್ಡ ಅಭಿಮಾನಿ, ಅವರ ಚಿತ್ರಗಳನ್ನು ನೋಡುತ್ತಲೇ ಬೆಳೆದವನು. ಅವರ ಭಾವ ತೀವ್ರತೆ ಮತ್ತು ಶೈಲಿಯನ್ನು ಕೇವಲ ಶಬ್ಧಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅವರು ಯಾವತ್ತೂ ಟ್ರೆಂಡ್ ಹಿಂದೆ ಬಿದ್ದವರಲ್ಲ. ಅವರು ದೇಶದಲ್ಲೇ ಉನ್ನತ ನಿರ್ದೇಶಕ ಎಂಬ ಖ್ಯಾತಿಯನ್ನು ಗಳಿಸುವ ವಿಶ್ವಾಸ ನನ್ನದು.

webdunia
PR
ಶ್ರೀ ಮುರಳಿ
ಒಬ್ಬ ನಟ, ನಿರ್ದೇಶಕನಾಗಿ ನಾನು ಉಪ್ಪಿ ಸರ್ ಅವರನ್ನು ಬಹುವಾಗಿ ಮೆಚ್ಚುತ್ತೇನೆ. ಖಂಡಿತಾ ಸೂಪರ್ ಚಿತ್ರವನ್ನು ನೋಡುವುದನ್ನು ಮಿಸ್ ಮಾಡಿಕೊಳ್ಳಲಾರೆ. ಉಪ್ಪಿಯವರ ಓಂ, ಎ ಮತ್ತು ಉಪೇಂದ್ರ ಚಿತ್ರಗಳು ನನ್ನನ್ನು ಬಹುವಾಗಿ ಕಾಡಿದ ಚಿತ್ರಗಳು. ಅವರು ನಿರ್ದೇಶನಕ್ಕೆ ವಾಪಸ್ ಬರುತ್ತಿರುವುದನ್ನು ಕಾತರದಿಂದ ಕಾಯುತ್ತಿದ್ದವನು ನಾನು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಬೇಕು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಬೇಕು ಎನ್ನುವುದು ನನ್ನ ಬಯಕೆ.

webdunia
PR
ಯಶ್
ಉಪೇಂದ್ರ ಸಾರ್ ಅವರ ಸೂಪರ್ ಚಿತ್ರಕ್ಕಾಗಿ ಕಾಯುತ್ತಿರುವುದು ಅವರ ಉನ್ಮಾದಗೊಂಡಿರುವ ಅಭಿಮಾನಿಗಳು ಮಾತ್ರವಲ್ಲ, ನನ್ನಂತಹ ದೊಡ್ಡ ಅಭಿಮಾನಿಗಳು ಕೂಡ. ಶನಿವಾರ ನಾನು ಬೆಂಗಳೂರಿಗೆ ಬಂದ ಕೂಡಲೇ ಆ ಚಿತ್ರವನ್ನು ನೋಡುತ್ತೇನೆ. ಸೂಪರ್ ನೋಡುವಾಗ ಜತೆಗಿರುವಂತೆ ಗೆಳೆಯರಾದ ಯೋಗಿ, ಚಿರು ಮುಂತಾದವರಿಗೆ ಹೇಳಿದ್ದೇನೆ. ಬಹುಶಃ ಯೋಗಿ ಮೊದಲೇ ನೋಡುತ್ತಾನೆ, ಮತ್ತೆ ನನ್ನ ಜತೆ ಬರಬಹುದು.

webdunia
PR
ಎಸ್. ನಾರಾಯಣ್
ಉಪೇಂದ್ರ ಮರಳಿ ನಿರ್ದೇಶನಕ್ಕೆ ಬರಬೇಕು ಎಂದು ಆಗಾಗ ಹೇಳುತ್ತಿದ್ದವರಲ್ಲಿ ನಾನೂ ಒಬ್ಬ. ಎರಡು-ಮೂರು ವರ್ಷಕ್ಕೆ ಒಂದು ಚಿತ್ರ ನಿರ್ದೇಶಿಸಿದರೂ ಸಾಕು. ಆದರೆ ಹತ್ತು ವರ್ಷಗಳಷ್ಟು ಸುದೀರ್ಘ ಅಂತರ ನೀಡುವುದು ಸರಿಯಲ್ಲ ಎಂದಿದ್ದೆ. ನನ್ನಂತಹ ಹಲವು ನಿರ್ದೇಶಕರಿಗೆ ಉಪೇಂದ್ರ ಒಂದು ಮಾದರಿ, ಸ್ಫೂರ್ತಿ.

webdunia
PR
ಶಶಾಂಕ
ಉಪ್ಪಿ ಸಾರ್ ಮಾಮೂಲಿ ವಿಚಾರಗಳಲ್ಲಿ ಸಿನಿಮಾಗಳನ್ನು ಮಾಡಿದವರಲ್ಲ. ಅವರು ಯಾವತ್ತೂ ಡಿಫರೆಂಟ್. ಏನೇನೋ ಹೇಳದೆ ಅವರು ಪರದೆಯಲ್ಲಿ ತನ್ನ ಭಿನ್ನತೆಯನ್ನು ಮೆರೆದವರು. ಈ ವಿಚಾರದಲ್ಲಿ ನಿಜಕ್ಕೂ ಅವರು ಸೂಪರ್ ನಿರ್ದೇಶಕ. ಖಂಡಿತಾ ಮೊದಲ ದಿನ ಮೊದಲ ಪ್ರದರ್ಶನದಲ್ಲೇ ಸೂಪರ್ ಚಿತ್ರವನ್ನು ನೋಡುತ್ತೇನೆ. ನಾನೂ ಸೇರಿದಂತೆ ಅಭಿಮಾನಿಗಳ ನಿರೀಕ್ಷೆಯನ್ನು ಅವರು ತಣಿಸಲಿದ್ದಾರೆ ಎಂಬ ಭರವಸೆ ನನ್ನಲ್ಲಿದೆ.

webdunia
PR
ಯೋಗರಾಜ್ ಭಟ್
ಈ ಹಿಂದೆ ಹೇಳಿದ್ದನ್ನೇ ಮತ್ತೆ ಹೇಳುತ್ತಿದ್ದೇನೆ. ಉಪ್ಪಿ ಸಾರ್ ನನ್ನ ಗುರು ಮತ್ತು ಸ್ಫೂರ್ತಿ. ಚಲನಚಿತ್ರ ಪ್ರೇಕ್ಷಕರ ವಾತಾವರಣ, ಪೀಳಿಗೆ ಬದಲಾಗಿರುವ ಈ ಹೊತ್ತಿನಲ್ಲಿ ಅವರು ತನ್ನ ಚಿತ್ರವನ್ನು ಹೇಗೆ ಮಾಡಿರುತ್ತಾರೆ ಎಂಬುದನ್ನು ನೋಡಲು ನಾನು ಭಾರೀ ಕುತೂಹಲದೊಂದಿಗೆ ಚಿತ್ರ ನೋಡಲು ಕಾಯುತ್ತಿದ್ದೇನೆ. ಖಂಡಿತಾ ಅವರು ಮೋಸ ಮಾಡಲಾರರು. ನೀವು ನವೆಂಬರ್ 19ರಂದು ಆಡಿಯೋ ಬಿಡುಗಡೆ ಮಾಡದಿದ್ದರೆ ನಾನು ನಿಮ್ಮ ಮನೆ ಎದುರು ಧರಣಿ ಮಾಡುತ್ತೇನೆ ಎಂದು ಅವರಿಗೆ ಕೆಲ ದಿನಗಳ ಹಿಂದೆ ಎಸ್ಎಂಎಸ್ ಮಾಡಿದ್ದೆ. ಅಷ್ಟು ಕುತೂಹಲ ನನ್ನಲ್ಲಿದೆ.

webdunia
PR
ದುನಿಯಾ ಸೂರಿ
ಉಪ್ಪಿ ಸಾರ್ ಕಳೆದ ಹತ್ತು ವರ್ಷಗಳಲ್ಲಿ ಯಾವ ರೀತಿಯಾಗಿ ಬದಲಾಗಿದ್ದಾರೆ ಎಂಬುದನ್ನು ಸೂಪರ್ ಚಿತ್ರದಲ್ಲಿ ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ. ಕನ್ನಡ ಚಿತ್ರಗಳ ಪ್ರೇಕ್ಷಕರ ಅಭಿರುಚಿ ಮತ್ತು ನಿರೀಕ್ಷೆಗಳು, ರಾಜ್ಯದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳು ಸಾಕಷ್ಟು ಬದಲಾವಣೆ ಕಂಡಿವೆ. ಅವರ ಓಂ ಮತ್ತು ಉಪೇಂದ್ರ ಚಿತ್ರಗಳನ್ನು ಅಪಾರವಾಗಿ ಮೆಚ್ಚಿದ್ದೆ. ಆದಷ್ಟು ಬೇಗ ಸೂಪರ್ ನೋಡುತ್ತೇನೆ.

webdunia
PR
ಡಿ. ರಾಜೇಂದ್ರ ಬಾಬು
ಉಪೇಂದ್ರ ನಾಯಕರಾಗಿದ್ದ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ನನಗೆ ಅವರ ಸೂಪರ್ ಕುತೂಹಲ ಹುಟ್ಟಿಸಿದೆ. ಕ್ರಾಂತಿಕಾರಿ ಯೋಚನೆಗಳು ಮತ್ತು ತಾಜಾ ಕಲ್ಪನೆಗಳ ಮೂಲಕ ಉಪ್ಪಿ ಒಬ್ಬ ಅದ್ಭುತ ನಿರ್ದೇಶಕ ಎನ್ನುವುದು ಪ್ರತಿಯೊಬ್ಬ ಕನ್ನಡ ಚಿತ್ರಾಭಿಮಾನಿಗೂ ಗೊತ್ತು. ಅವರ ನಟನೆ ಮತ್ತು ನಿರ್ದೇಶನ -- ಎರಡರ ಕುರಿತೂ ನಾನು ತೀವ್ರ ಆಸಕ್ತಿ ಹೊಂದಿದ್ದೇನೆ.

Share this Story:

Follow Webdunia kannada