ಸ್ಲಮ್ ಸುಂದರಿ ಪಿಂಟೋ ಮದುವೆ ವೃತ್ತಾಂತ..!
Publish Date: Wed, 28 Jan 2009 (20:11 IST)
Updated Date: Wed, 28 Jan 2009 (20:10 IST)
ಇದೇನಪ್ಪಾ ಈ ಸ್ಲಮ್ ಸುಂದರಿಗೆ ಇಷ್ಟು ಬೇಗ ಮದುವೆನಾ ಎಂದು ಅಭಿಮಾನಿಗಳು ಮೂಗು ಮುರಿಯುತ್ತಾರೆ ಎಂಬುದನ್ನು ಮೈಲು ದೂರಗಳಿಂದಲೇ ಅಂದಾಜು ಮಾಡಿಕೊಂಡಿರುವ ಫ್ರೀದಾ ಪಿಂಟೋ ನಿಶ್ಚಿತಾರ್ಥ ರದ್ದು ಮಾಡಿದ್ದಾಳಂತೆ ! ಹಾಗಾಗಿ ಆಕೆಯ ಇನ್ನಷ್ಟು ಚಿತ್ರಗಳನ್ನು ನೋಡುವ ಭಾಗ್ಯ ಅಭಿಮಾನಿಗಳಿಗಿದೆ.ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿ ಮಾಡುತ್ತಿರುವ ಭಾರತದ 'ಘನತೆ'ಯನ್ನು ಜಾಗತಿಕ ಮಟ್ಟದಲ್ಲಿ ಸಾರುವ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದಲ್ಲಿ ನಾಯಕಿಯಾಗಿರುವ 24ರ ಫ್ರೀದಾ ಪಿಂಟೋ ಮೂಲತಃ ಮಂಗಳೂರಿನವಳು. ಈಕೆಯ ತಂದೆ ಫ್ರೀದಾರಿಕ್ ಪಿಂಟೋ ನೀರುಡೆಯವರು ಬರೋಡಾ ಬ್ಯಾಂಕ್‌ನಲ್ಲಿ ಹಿರಿಯ ವ್ಯವಸ್ಥಾಪಕ ಹಾಗೂ ತಾಯಿ ಸಿಸ್ವಿಯಾ ಪಿಂಟೋ ದೇರೇಬೈಲ್‌ರವರು ಗೋರೆಗಾಂವ್ ಸೈಂಟ್ ಜಾನ್ ಹೈಸ್ಕೂಲ್‌ನಲ್ಲಿ ಫ್ರಿನ್ಸಿಪಾಲ್. ಇಂತಿಪ್ಪ ತೌಳವ ಸುಂದರಿಗೆ ಇತ್ತೀಚೆಗೆ ಬೆಂಗಳೂರಿನ ಉದ್ಯಮಿಯೊಬ್ಬನ ಜತೆ ಎಂಗೇಜ್‌ಮೆಂಟ್ ಫಿಕ್ಸ್ ಆಗಿತ್ತಂತೆ. ಆದರೆ 'ಸ್ಲಮ್‌ಡಾಗ್ ಮಿಲಿಯನೇರ್' ಜಾಗತಿಕವಾಗಿ ಸುದ್ದಿ ಮಾಡುತ್ತಿದ್ದಂತೆ ಈಕೆ ಕೂಡ ಮಿಲಿಯನೇರ್ ಆಗಲು ಹೊರಟಂತೆ ಮದುವೆ ರದ್ದು ಮಾಡಿದ್ದಾಳೆ ಎನ್ನುವುದು ತೀರಾ ಕುಹಕವಲ್ಲ ಬಿಡಿ. ನಿಜ ಸಂಗತಿ ಬಗ್ಗೆ ಆಕೆ ಬಾಯಿ ಬಿಡದ ಕಾರಣ ಹೀಗೆಲ್ಲಾ ಯೋಚಿಸುವುದು ಸಹಜ ತಾನೇ..!ಆಕೆಯಲ್ಲಿ ಹೌದೇ ಎಂದು ಪ್ರಶ್ನಿಸಿದಾಗ, "ನೀವು ಸ್ಲಮ್‌ಡಾಗ್ ಬಗ್ಗೆ ನನ್ನ ಸಂದರ್ಶನ ಮಾಡುತ್ತಿದ್ದೀರಾ ಅಥವಾ ಖಾಸಗಿ ವಿಚಾರಗಳ ಬಗ್ಗೆ ಕೇಳುತ್ತಿದ್ದೀರಾ? ನಾನು ನನ್ನ ವೈಯಕ್ತಿಕ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಿದ್ಧಳಿಲ್ಲ. ಅಷ್ಟಕ್ಕೂ ನಿಶ್ಚಿತಾರ್ಥ ನಡೆದಿರುವುದಕ್ಕೆ ನಿಮ್ಮಲ್ಲಿ ಏನು ಸಾಕ್ಷ್ಯಗಳಿವೆ?" ಎಂದು ಸಿಡಿಮಿಡಿಗೊಳ್ಳುತ್ತಾಳೆ ಕೃಷ್ಣ ಸುಂದರಿ.