Entertainment Bollywood Interview 0907 28 1090728051_1.htm

Daily Horoscope

Select Your Language

Notifications

webdunia
webdunia
webdunia
webdunia

ಕರೀನಾ ಹೊಟ್ಟೆಕಿಚ್ಚಿನ ಮೊಟ್ಟೆಕೋಳಿಯಾ!?

ಕರೀನಾ ಕಪೂರ್
IFM
ಕರೀನಾ ಇತ್ತೀಚೆಗೆ ಹೊಟ್ಟೆಕಿಚ್ಚಿನ ಮೊಟ್ಟೆಕೋಳಿಯಾಗಿಯೇ ಕಾಣಿಸಿಕೊಳ್ಳುತ್ತಿರುವುದ್ಯಾಕೆ.. ಎಂದೇ ಅರ್ಥವಾಗುತ್ತಿಲ್ಲ. ಆದರೆ, ಒಂದಂತೂ ಸತ್ಯ. ಪ್ರತಿದಿನವೂ ಒಂದಲ್ಲ ಒಂದು ಹೇಳಿಕೆಗಳನ್ನು ನೀಡುತ್ತಲೇ ವಿವಾದಗಳಿಗೆ ಸಿಲುಕಿಕೊಳ್ಳುವುದು ಈ ಕಪೂರ್ ಬೆಡಗಿಗೆ ಜನ್ಮಸಿದ್ಧ ಹಕ್ಕೇ ಅನಿಸುತ್ತದೆ.

ಇತ್ತೀಚೆಗೆ ತನ್ನ ಇನಿಯ ಸೈಫ್ ಆಲಿ ಖಾನ್ ನಿರ್ಮಿಸುತ್ತಿರುವ ಇಮ್ತಿಯಾಜ್ ಅಲಿ ನಿರ್ದೇಶನದ ಲವ್ ಆಜ್ ಕಲ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಅತ್ತ ಕರೀನಾ ಮಾತ್ರ ದಿನವಿಡೀ ಸೈಫ್ ಜತೆಗೆ ತನಗೆ ನಟಿಸಲು ಸಿಕ್ಕಲಿಲ್ಲವಲ್ಲಾ ಎಂಬರ್ಥದಲ್ಲಿ ದೀಪಿಕಾ ಪಡುಕೋಣೆಗೆ ನಾನೇ ಅವಕಾಶ ಒದಗಿಸಿದ್ದು ಎಂದೆಲ್ಲಾ ಮಾತನಾಡುತ್ತಿದ್ದಾಳೆ. 'ಜಬ್ ವಿ ಮೆಟ್‌ ಚಿತ್ರಕ್ಕೆ ಕರೀನಾ ಆಯ್ಕೆ ಮಾಡಿದ ಇಮ್ತಿಯಾಜ್, ಲವ್ ಆಜ್ ಕಲ್ ಚಿತ್ರಕ್ಕೆ ಸೈಫ್ ಜತೆಗೆ ಕರೀನಾರನ್ನು ಯಾಕೆ ಆಯ್ಕೆ ಮಾಡಿಲ್ಲ?' ಎಂದು ಹುಟ್ಟಿಕೊಂಡ ಪ್ರಶ್ನೆಗೆ ಕರೀನಾ ಹೋದಲ್ಲೆಲ್ಲಾ, ಲವ್ ಆಜ್ ಕಲ್ ಚಿತ್ರಕ್ಕೆ ದೀಪಿಕಾಳನ್ನು ಆಯ್ಕೆ ಮಾಡಿ ಅಂತ ಇಮ್ತಿಯಾಜ್‌ಗೆ ನಾನೇ ಹೇಳಿದ್ದು ಅಂತ ತಿಪ್ಪೆ ಸಾರಿಸುತ್ತಾ ಬಂದಿದ್ದಾಳೆ.

ಒಮ್ಮೆ ಹೇಳಿದರೆ ಸರಿ. ಹೋಗಲಿ ಪರವಾಗಿಲ್ಲ ಅಂತ ಬಿಟ್ಟ ದೀಪಿಕಾಗೂ ಕರೀನಾ ಹೀಗೆ ಪದೇ ಪದೇ ಆಕೆಯ ಯಾವುದೇ ಪಾತ್ರವಿಲ್ಲದ ಸಿನಿಮಾ ವಿಷಯದಲ್ಲಿ ಮೂಗು ತೂರಿಸುತ್ತಿರುವುದು ಸಿಕ್ಕಾಪಟ್ಟೆ ಸಿಟ್ಟು ತರಿಸಿದೆ. ಮೊದಮೊದಲು ಕರೀನಾ ಹೇಳಿಕೆಗೆ ಸಾಫ್ಟಾಗಿಯೇ ಸ್ಪಂದಿಸುತ್ತಿದ್ದ ದೀಪಿಕಾಗೆ ಈಗ ಕರೀನಾಳ ಹೇಳಿಕೆಯಿಂದ ಸಾಕಾಗಿಹೋಗಿದೆ. ಅದಕ್ಕಾಗಿ ಈ ಬಾರಿ ಸ್ವಲ್ಪ ಖಾರವಾಗಿಯೇ ದೀಪಿಕಾ ಪ್ರತಿಕ್ರಿಯಿಸಿದ್ದಾಳೆ.

webdunia
IFM
ದೀಪಿಕಾ ತನ್ನ ಪಾತ್ರವನ್ನು ಸಮರ್ಥಿಸುತ್ತಾ, ತಾನು ಆಯ್ಕೆಯಾದ ಬಗೆಯನ್ನೂ ವಿವರಿಸಿದ್ದಾಳೆ. ಕರೀನಾಳ ಮೂಗು ತೂರಿಸುವಿಕೆ ಬಗ್ಗೆ ದೀಪಿಕಾ ಪ್ರತಿಕ್ರಿಯಿಸೋದು ಹೀಗೆ. ''ನಾನು ಮಾಡೆಲಿಂಗ್‌ನಲ್ಲಿದ್ದಾಗ ಅಂದರೆ, ಓಂ ಶಾಂತಿ ಓಂ ಚಿತ್ರಕ್ಕೆ ಸಹಿ ಹಾಕುವ ಮೊದಲೇ ಇಮ್ತಿಯಾಜ್ ಅಲಿ ನನಗೆ ಪರಿಚಿತರು. ಅವರೊಮ್ಮೆ ನನ್ನನ್ನು ಭೇಟಿಯಾಗಿ ತಮ್ಮ ಚಿತ್ರದಲ್ಲಿ ನಟಿಸಲು ಕೇಳಿಕೊಂಡರು. ಆದರೆ ಆ ಸಮಯದಲ್ಲಿ ನಾನು ಸಿನಿಮಾದಲ್ಲಿ ನಟಿಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿರಲಿಲ್ಲ. ಅವರು ನನ್ನನ್ನು ನಟಿಸಲು ಆಮಂತ್ರಿಸಿದ್ದು ತುಂಬ ಖುಷಿಯಾಗಿತ್ತಾದರೂ, ನಾನೀಗ ಚಿತ್ರರಂಗಕ್ಕೆ ಬರುವ ಯೋಚನೆ ಸದ್ಯಕ್ಕಿಲ್ಲ ಎಂದಿದ್ದೆ. ಆಗ ಇಮ್ತಿಯಾಜ್ ನೀವು ಯಾವಾಗ ಚಿತ್ರರಂಗಕ್ಕೆ ಬರುವ ನಿರ್ಧಾರ ಮಾಡುತ್ತೀರೋ, ಆಗ ನನಗೆ ತಿಳಿಸಿ ಎಂದಿದ್ದರು. ಆಮೇಲೆ ಅವರು ಜಬ್ ವಿ ಮೆಟ್ ಚಿತ್ರ ಮಾಡಿದರು. ಚಿತ್ರ ಯಶಸ್ಸಾಯಿತು. ನಾನು ಚಿತ್ರರಂಗಕ್ಕೆ ಬರುವ ನಿರ್ಧಾರ ಮಾಡಿದೆ. ಓಂ ಶಾಂತಿ ಓಂ ಚಿತ್ರಕ್ಕೆ ಸಹಿ ಹಾಕಿದೆ. ನನ್ನ ಚಿತ್ರವೂ ಯಶಸ್ಸು ಕಂಡಿತು. ಹಾಗಾಗಿ ಅವರು ನನ್ನ್ನನು ಲವ್ ಆಜ್ ಕಲ್ ಚಿತ್ರಕ್ಕಾಗಿ ಆಯ್ಕೆ ಮಾಡಿದ್ದು, ಅವರ ಸ್ವಂತ ನಿರ್ಧಾರ. ಇದರಲ್ಲಿ ಯಾರ ಹೇರಿಕೆ, ಒತ್ತಡವೂ ಇಲ್ಲ.''

''ಕರೀನಾಳ ಜಾಗದಲ್ಲಿ ನಾನಿದ್ದರೂ ನನಗೂ ಹೀಗೆಯೇ ಅನಿಸುತ್ತಿತ್ತೇನೋ... ತನ್ನ ನಿಜವಾದ ಬಾಯ್‌ಫ್ರೆಂಡ್ ಜತೆಗೆ ಚಿತ್ರದಲ್ಲೂ ಕಾಣಿಸಬೇಕೆಂದು ಯಾರಿಗೆ ತಾನೇ ಆಸೆಯಿರೋದಿಲ್ಲ ಹೇಳಿ. ನಾನೂ ಕೂಡಾ ಬಚ್‌ನಾ ಏ ಹಸೀನೋ ಚಿತ್ರದಲ್ಲಿ ರಣಬೀರ್ ಜತೆ ಕಾಣಿಸಿಕೊಂಡಿದ್ದು ನನ್ನ ಹೃದಯಕ್ಕೆ ತುಂಬ ಹತ್ತಿರವಾಗಿದೆ. ಹಾಗಾಗಿ ಲವ್ ಆಜ್ ಕಲ್‌ನಂತಹ ಚಿತ್ರ ಸಿಕ್ಕಿದರೆ ನಿಜವಾದ ಜೋಡಿಯೇ ತೆರೆ ಮೇಲೆ ಕಾಣಿಸಿಕೊಳ್ಳಬೇಕೆಂದು ಅನಿಸಬಹುದು. ಕರೀನಾಗೆ ಹಾಗೆ ಅನಿಸಿದ್ದೂ ನಿಜ, ನಾನು ಒಪ್ಪುತ್ತೇನೆ. ಆದರೆ, ಪದೇ ಪದೇ ಅದನ್ನೇ ದೊಡ್ಡ ಸುದ್ದಿಯನ್ನಾಗಿ ಮಾಡಿದರೆ ನನಗೆ ಇಷ್ಟವಾಗುವುದಿಲ್ಲ. ನನಗೆ ಪ್ರತಿಭೆ ಇದೆ. ಅದಕ್ಕಾಗಿ ಈ ಪಾತ್ರ ಸಿಕ್ಕಿತು. ನನ್ನ ಸ್ವಂತ ಬಲದಿಂದಲೇ ಈ ಪಾತ್ರ ನನಗೆ ಸಿಕ್ಕಿದ್ದು. ಇನ್ಯಾರದೋ ಕೃಪಾ ಕಟಾಕ್ಷದಿಂದ ಖಂಡಿತ ಅಲ್ಲ.'' ಎನ್ನುತ್ತಾಳೆ ದೀಪಿಕಾ.

ಅತ್ತ ನಿರ್ದೇಶಕ ಇಮ್ತಿಯಾಜ್ ಕೂಡಾ ಕರೀನಾ ನಡವಳಿಕೆಗೆ ರೋಸಿ ಹೋಗಿದ್ದಾರೆ. ಕರೀನಾಳದ್ದು ಇದ್ಯಾಕೋ ಅತಿಯಾಯಿತು ಅಂತ ಇಮ್ತಿಯಾಜ್‌ಗೂ ಅನಿಸಿದೆಯಂತೆ. ''ಯಾರೇ ಇರಲಿ. ಚಿತ್ರ ಚೆನ್ನಾಗಿ ಬರಬೇಕು, ಚೆನ್ನಾಗಿ ಓಡಬೇಕು ಅಷ್ಟೆ. ಆದರೆ ಚಿತ್ರಕ್ಕಿಂತಲೂ ಬೇರೆಯವರು ಬೇರೆ ವಿಷಯವನ್ನು ದೊಡ್ಡದು ಮಾಡಿ ಅದನ್ನೇ ರಾದ್ದಾಂತ ಮಾಡುವುದು ಒಂದು ದುರದೃಷ್ಟವೇ ಸರಿ'' ಎಂದಿದ್ದಾರೆ.

ಅಂತೂ ಕರೀನಾಗೆ ಕೂಡಾ ಸೈಫ್ ಚಿತ್ರ ಬಾಕ್ಸ್ ಆಫೀಸಿನಲ್ಲಿ ಹಿಟ್ ಆಗೋದು ಗ್ಯಾರೆಂಟಿ ಎಂದು ಅನಿಸಿದೆ. ಸೈಫ್ ಚಿತ್ರ ಹಿಟ್ ಆದರೆ ತನಗೆ ಖುಷಿ ಎಂದು ಖುಲ್ಲಂಖುಲ್ಲಾ ಹೇಳಿಕೊಂಡು ಓಡಾಡುತ್ತಿರುವ ಕರೀನಾ, ಒಳಗಿಂದಲೇ ಸೈಫ್ ಜತಗೆ ತೆರೆಯ ಮೇಲೆ ದೀಪಿಕಾ ರೊಮ್ಯಾನ್ಸ್ ಮಾಡಿದ ಪರಿಗೆ ಉರಿದು ಹೋಗಿದ್ದಾಳೇನೋ.. ಅತ್ತ ತನ್ನ ನಿರೀಕ್ಷಿತ ಚಿತ್ರ ಕಂಭಕ್ತ್ ಇಶ್ಕ್ ಯಾಕೋ ಮೊದಲು ಉತ್ತಮ ಗತಿ ಪಡೆದರೂ, ನಂತರ ತೋಪೆದ್ದಿದೆ. ಬಹುಶಃ, ಲವ್ ಆಜ್ ಕಲ್ ಅವಕಾಶ ತನಗೆ ಸಿಕ್ಕಿದ್ದಿದ್ದರೆ ಎಂದು ಕರೀನಾ ಕೈಕೈ ಹೊಸಕಿಕೊಳ್ಳುತ್ತಿದ್ದಾಳೋ.. ಗೊತ್ತಿಲ್ಲ. ಚಿತ್ರ ಜು.31ರಂದು ತೆರೆಕಾಣಲಿದೆ.
webdunia
IFM

Share this Story:

Follow Webdunia kannada