ದೆಹಲಿ : ಆಸ್ಟ್ರೇಲಿಯಾದ ಥೆರಪೆಟಿಕ್ ಗೂಡ್ಸ್ ಅಡ್ಮಿನಿಸ್ಟ್ರೇಷನ್ (ಟಿಜಿಎ) ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಹೆಸರಿನ ಕೊವಿಡ್ 19 ವಿರುದ್ಧದ ಲಸಿಕೆಯನ್ನು ಅಂಗೀಕರಿಸಿದೆ.
ಈ ಲಸಿಕೆಯು ಆಸ್ಟ್ರೇಲಿಯಾದಲ್ಲಿ ರಿಜಿಸ್ಟರ್ ಆಗಿಲ್ಲ. ಆದರೆ ಗಣನೀಯ ಪ್ರಮಾಣದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರು ಈ ಲಸಿಕೆಯನ್ನು ಹಾಕಿಸಿಕೊಂಡಿರುವುದನ್ನು ಗುರುತಿಸಿ ಈ ನಿರ್ಧಾರ ಕೈಗೊಂಡಿದೆ.
ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಜೊತೆಗೆ ಚೀನಾದ BBIBP- CorV ಕೂಡ ಆಸ್ಟ್ರೇಲಿಯಾದ ಪಟ್ಟಿ ಸೇರಿಕೊಂಡಿದೆ. ಟಿಜಿಎಯು ಇತ್ತೀಚೆಗಿನ ವಾರದಲ್ಲಿ ಕಂಡುಕೊಂಡ ಮಾಹಿತಿಯನ್ನು ಮತ್ತು ಅಂಕಿ ಅಂಶಗಳನ್ನು ಹೇಳಿದೆ. ಅದರಂತೆ, ಮೇಲೆ ಉಲ್ಲೇಖಿಸಿರುವ ಲಸಿಕೆಗಳು ಕೊರೊನಾ ಹರಡುವಿಕೆಯನ್ನು ತಡೆಗಟ್ಟುತ್ತವೆ ಎಂದು ತಿಳಿಸಿದೆ.
ಇದರ ಜೊತೆಗೆ ಭಾರತದ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆ ಹಾಗೂ ಕೊರೊನಾವ್ಯಾಕ್ ಮತ್ತು BBIBP- CorV ಲಸಿಕೆಗಳು ಆಸ್ಟ್ರೇಲಿಯಾದಲ್ಲಿ ಅನುಮೋದನೆ ಪಡೆದುಕೊಂಡಿದೆ. ಆಸ್ಟ್ರೇಲಿಯಾದಲ್ಲಿ ಏಷ್ಯಾದ ಈ ಉಭಯ ದೇಶಗಳ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು, ಕೆಲಸಗಾರರು ಬಹಳಷ್ಟು ಸಂಖ್ಯೆಯಲ್ಲಿ ಇದ್ದಾರೆ.
ಕೊವ್ಯಾಕ್ಸಿನ್ ಭಾರತದ ಮೊದಲ ಸ್ವದೇಶಿ ಕೊವಿಡ್ 19 ಲಸಿಕೆ ಆಗಿದೆ. ಇದನ್ನು ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಐಸಿಎಮ್ಆರ್ ಮತ್ತು ಎನ್ಐವಿ ಜೊತೆಗೂಡಿ ಈ ಲಸಿಕೆ ಸಿದ್ಧಪಡಿಸಲಾಗಿದೆ. ಮಾರಿಷಸ್, ಓಮನ್, ಫಿಲಿಫೈನ್ಸ್, ನೇಪಾಳ, ಮೆಕ್ಸಿಕೊ, ಇರಾನ್, ಶ್ರೀಲಂಕಾ, ಗ್ರೀಸ್, ಎಸ್ಟೋನಿಯಾ ಮತ್ತು ಜಿಂಬಾಬ್ವೆ ಈ ಲಸಿಕೆಗೆ ಅನುಮೋದನೆ ಸೂಚಿಸಿವೆ.