Select Your Language

Notifications

webdunia
webdunia
webdunia
webdunia

2024ರೊಳಗೆ ಗ್ರಾಮೀಣ ಭಾಗದ ಪ್ರತಿ ಮನೆಗೂ ನಲ್ಲಿ ನೀರು: ಈಶ್ವರಪ್ಪ

2024ರೊಳಗೆ ಗ್ರಾಮೀಣ ಭಾಗದ ಪ್ರತಿ ಮನೆಗೂ ನಲ್ಲಿ ನೀರು: ಈಶ್ವರಪ್ಪ
ಬೆಂಗಳೂರು , ಶನಿವಾರ, 25 ಸೆಪ್ಟಂಬರ್ 2021 (08:54 IST)
ಬೆಂಗಳೂರು : ರಾಜ್ಯದಲ್ಲಿ ಜಲ ಮಿಷನ್ ಯೋಜನೆಯಡಿ 2024ರ ಮಾರ್ಚ್ ವೇಳೆಗೆ ಗ್ರಾಮೀಣ ಭಾಗದ ಪ್ರತಿ ಮನೆಗೆ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಜೆಡಿಎಸ್ನ ಕೆ.ಎ. ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 97.91 ಲಕ್ಷ ಮನೆಗಳು ಗ್ರಾಮೀಣ ಪ್ರದೇಶದಲ್ಲಿದ್ದು, 2021ರ ಮಾರ್ಚ್ ಅಂತ್ಯಕ್ಕೆ 28.15 ಲಕ್ಷ ಮನೆಗಳಿಗೆ ನಲ್ಲಿ ಮೂಲಕ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಇದುವರೆಗೂ 34.90 ಲಕ್ಷ ಮನೆಗಳಿಗೆ ಈ ಸೌಲಭ್ಯ ಕಲ್ಪಿಸಲಾಗಿದ್ದು, 2024ರ ಮಾರ್ಚ್ ಅಂತ್ಯದ ವೇಳೆಗೆ ಉಳಿದ 69.75 ಲಕ್ಷ ಮನೆಗಳಿಗೆ ನಲ್ಲಿ ಮೂಲಕ ನೀರಿನ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ನಲ್ಲಿ ಮೂಲಕ ನೀರಿನ ಸೌಲಭ್ಯ ಕಲ್ಪಿಸಲು 11 ಸಾವಿರದ 10 ಕೋಟಿ ರೂ.ಹಾಗೂ ಸುಸ್ಥಿರ ಜಲಮೂಲಗಳ ಮೂಲಕ ನೀರು ಸರಬರಾಜು ಯೋಜನೆ ಕಲ್ಪಿಸಲು 30,790 ಕೋಟಿ ರೂ. ಸೇರಿ 41,800 ಕೋಟಿ ರೂ.ಗಳ ಯೋಜನಾ ವೆಚ್ಚ ಅಂದಾಜು ಮಾಡಲಾಗಿದೆ. 2022-23 ರಲ್ಲಿ 27 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಹಾಗೂ ಇನ್ನುಳಿದ ಮನೆಗಳಿಗೆ 2024ರೊಳಗೆ ನಲ್ಲಿ ಮೂಲಕ ನೀರಿನ ಸೌಲಭ್ಯ ಕಲ್ಪಿಸಲಾಗುವುದು. ನಿತ್ಯ 6ರಿಂದ 8 ಸಾವಿರ ಮನೆಗಳಿಗೆ ನಲ್ಲಿ ಮೂಲಕ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.
ಮಳೆ ಹಾನಿಗೆ 1905.58 ಕೋಟಿ
ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಪ್ರವಾಹ ಪೀಡಿತ 25 ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಆಸ್ತಿಪಾಸ್ತಿ ದುರಸ್ತಿಪಡಿಸಲು 2019-20ರಲ್ಲಿ 988.44 ಕೋಟಿ ರೂ. ಹಾಗೂ 2020-21ರಲ್ಲಿ 1,905.58 ಕೋಟಿ ರೂ. ಅನುದಾನ ನೀಡಲಾಗಿದೆ. ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ವರದಿಯಂತೆ ಹಾನಿಯಾದ ರಸ್ತೆ ಮತ್ತು ಸೇತುವೆಗಳ ದುರಸ್ತಿಗೆ 1,100.18 ಕೋಟಿ ರೂ., ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ವರದಿ ಪ್ರಕಾರ ರಸ್ತೆ ಮತ್ತು ಸೇತುವೆಗಳಿಗೆ 760.17 ಕೋಟಿ ರೂ., ಕೆರೆಗಳಿಗೆ 26.35 ಕೋಟಿ ರೂ., ಕಟ್ಟಡಗಳು, ಶಾಲಾ ಕಟ್ಟಡಗಳು, ಅಂಗನವಾಡಿ ಸಹಿತ ಇತರ ಸರಕಾರಿ ಕಟ್ಟಡಗಳ ದುರಸ್ತಿಗೆ 18.55 ಕೋಟಿ ರೂ., ನೈರ್ಮಲ್ಯ, ವಿದ್ಯುತ್ ದುರಸ್ತಿಗೆ 35 ಲಕ್ಷ ರೂ. ಸಹಿತ 1,905.58 ಕೋಟಿ ರೂ. ಅಗತ್ಯವಿದೆ ಎಂದು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

6- 12ನೇ ತರಗತಿವರೆಗೆ ಶೇ.100ರಷ್ಟು ಹಾಜರಾತಿಗೆ ಅನುಮತಿ: ಬಿ.ಸಿ ನಾಗೇಶ್