ಬೆಂಗಳೂರು : ರಾಜ್ಯದಲ್ಲಿ ದಿನಕಳೆದಂತೆ ಬಿಸಿಲಿನ ಬೇಗೆ ಹೆಚ್ಚಾಗ್ತಾ ಇದೆ. ಈ ನಡುವೆ ಹೀಟ್ ವೇವ್ ಆತಂಕ ಕೂಡ ಹೆಚ್ಚಾಗಿದ್ದು, ಹವಾಮಾನದ ತಾಪಮಾನದ ಬಗ್ಗೆ ಕಡ್ಡಾಯ ಗಮನ ಹರಿಸುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹೌದು. ಬೇಸಿಗೆ ಬಂದಾಗಿದೆ. ಜೊತೆಗೆ ಸುಡುಬಿಸಿಲಿನ ಅಬ್ಬರ ಕೂಡ ಜೋರಾಗಿಯೇ ಇದೆ. ಈ ನಡುವೆ ರಾಜ್ಯದಲ್ಲಿ ಹೀಟ್ ವೇವ್ ಆತಂಕ ಶುರುವಾಗಿದ್ದು, ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಗರಿಷ್ಠ ತಾಪಮಾನವು ಬಯಲು ಪ್ರದೇಶಗಳಲ್ಲಿ ಕನಿಷ್ಠ 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಕನಿಷ್ಠ 30 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನವನ್ನು ತಲುಪಿದರೆ ಆ ಪ್ರದೇಶವನ್ನು ಶಾಖದ ಅಲೆಯ ಹಿಡಿತ ಅಥವಾ ಹೀಟ್ ವೇವ್ ಎಂದು ಕರೆಯಲಾಗುತ್ತೆ. ಗರಿಷ್ಠ ತಾಪಮಾನ ನಿರ್ಗಮನವು 4.5 ಮತ್ತು 6 ಡಿಗ್ರಿಗಳ ನಡುವೆ ಇದ್ದಾಗ, ಭಾರತೀಯ ಹವಾಮಾನ ಇಲಾಖೆ ಶಾಖದ ಅಲೆಯನ್ನು ಘೋಷಿಸುತ್ತದೆ.
ಸದ್ಯ ರಾಜ್ಯದ ಉತ್ತರ ಕರ್ನಾಟಕ ಸೇರಿದಂತೆ ದಕ್ಷಿಣದ ಜಿಲ್ಲೆಗಳಲ್ಲೂ ತಾಪಮಾನ ಹೆಚ್ಚಾಗ್ತಿರೋದು ಆತಂಕ ಹೆಚ್ಚಿಸಿದೆ. ಉತ್ತರ ಕರ್ನಾಟಕದಲ್ಲಿ ಸದ್ಯ ತಾಪಮಾನದಲ್ಲಿ 38-39ರ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗಿದ್ದು, ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ 34-36 ಡಿಗ್ರಿ ಸೆಲ್ಸಿಯಸ್, ದಾಖಲಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್ಗೆ ಏರಿದೆ. ಜೂನ್ವರೆಗೆ ಬಿರುಬಿಸಿಲು ಕಾಡಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.