Select Your Language

Notifications

webdunia
webdunia
webdunia
webdunia

ದಿಢೀರ್ ಏರಿಕೆಯಾದ ತರಕಾರಿ ಬೆಲೆ!

ದಿಢೀರ್ ಏರಿಕೆಯಾದ ತರಕಾರಿ ಬೆಲೆ!
ಹುಬ್ಬಳ್ಳಿ , ಮಂಗಳವಾರ, 23 ನವೆಂಬರ್ 2021 (16:22 IST)
ಹುಬ್ಬಳ್ಳಿ : ಅಕಾಲಿಕವಾಗಿ ಸುರಿದ ಭಾರಿ ಮಳೆ ಸೃಷ್ಟಿಸಿದ ಅವಾಂತರಗಳಿಗೆ ಲೆಕ್ಕವಿಲ್ಲ. ಮಳೆಯಿಂದಾಗಿ ಒಂದು ಕಡೆ ರೈತ ಸಮುದಾಯ  ಸಂಕಷ್ಟಕ್ಕೆ ಗುರಿಯಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಕೈಗೆ ಬಂದ ತುತ್ತು ರೈತರ ಬಾಯಿಗೆ ಬಾರದಂತಾಗಿದೆ. ಇದು ಹೀಗಿರಬೇಕಾದರೆ ಅತಿಯಾದ ಮಳೆ ಹೊಡೆತಕ್ಕೆ ಜನಸಾಮಾನ್ಯನೂ ಕಕ್ಕಾಬಿಕ್ಕಿಯಾಗುವಂತಾಗಿದೆ. ತರಕಾರಿಗಳ ದರ ದಿಢೀರ್ ಏರಿಕೆಯಾಗಿದ್ದು, ಗ್ರಾಹಕನ ಜೇಬಿಗೆ ಕತ್ತರಿ ಬೀಳುವಂತಾಗಿದೆ. ಅತಿವೃಷ್ಟಿಯಿಂದ ತರಕಾರಿ ಬೆಲೆ ಗಗನಕ್ಕೇರಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಟೊಮ್ಯಾಟೊ, ಮೆಣಸಿನಕಾಯಿ ಬೆಲೆ ಶತಕದ ಗಡಿ ದಾಟಿದೆ.
ಹುಬ್ಬಳ್ಳಿ ಜನತಾ ಬಜಾರ್, ದುರ್ಗದ ಬೈಲು, ಸರಾಫ್ ಕಟ್ಟಾ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಟೊಮ್ಯಾಟೋ 100 ರೂಪಾಯಿಗೆ ಮಾರಾಟವಾಗುತ್ತಿದೆ. ಸಣ್ಣ ಟೊಮೇಟೊ 70 ರಿಂದ 80 ರೂ.ಗಳಿಗೆ ಮಾರಾಟವಾಗುತ್ತಿದೆ. ಹಸಿ ಮೆಣಸಿನಕಾಯಿ ದರ ಪ್ರತಿ ಕೆ.ಜಿ.ಗೆ 100 ರಿಂದ 120 ರೂಪಾಯಿಗೆ ಏರಿಕೆಯಾಗಿದೆ.  ಈರುಳ್ಳಿ ದರ ಅರ್ಧ ಶತಕದ ಗಡಿ ದಾಟಿದೆ.
ಬೆಂಡೆಕಾಯಿ, ಹೀರೇಕಾಯಿ, ಸೌತೇಕಾಯಿ, ಕ್ಯಾರೆಟ್, ಹೂ ಕೋಸು, ಎಲೆ ಕೋಸು ಇತ್ಯಾದಿಗಳ ದರವೂ ಗಗನಮುಖಿಯಾಗಿದೆ. ಕೆಜಿ ಕ್ಯಾರೆಟ್-80 ರೂ., ಬೆಂಡೇಕಾಯಿ-80ರೂ., ಆಲೂಗೆಡ್ಡೆ-35 ರೂ, ಹೀರೇಕಾಯಿ-80, ಬದನೆಕಾಯಿ-50, ಹಸಿಮೆಣಸಿನಕಾಯಿ-100 ರಿಂದ 120 ರೂಪಾಯಿ, ಎಲೆಕೋಸು-40, ಸವತಿಕಾಯಿ-60 ರೂ ಹೀಗೆ ಕಾಯಿಪಲ್ಲೆಗಳ ಬೆಲೆಗಳಲ್ಲಿ ಭಾರೀ ಹೆಚ್ಚಳ ಕಂಡಿವೆ. ಇದರ ಜತೆಗೆ ಸೊಪ್ಪುಗಳ ಬೆಲೆಯಲ್ಲೂ ಭಾರೀ ಏರಿಕೆ ಕಾಣುತ್ತಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಫುಟ್ಬಾಲ್‍ನಿಂದ ಕೇಂದ್ರ ಸರ್ಕಾರದ ಆದಾಯವೆಷ್ಟು ಗೊತ್ತ?