Select Your Language

Notifications

webdunia
webdunia
webdunia
webdunia

ಆರೋಗ್ಯ ಸಮಸ್ಯೆಗಳಿರುವ ಮಕ್ಕಳಿಗೆ ಆದ್ಯತೆಯಲ್ಲಿ ಲಸಿಕೆ; ಸುಧಾಕರ್

ಆರೋಗ್ಯ ಸಮಸ್ಯೆಗಳಿರುವ ಮಕ್ಕಳಿಗೆ ಆದ್ಯತೆಯಲ್ಲಿ ಲಸಿಕೆ; ಸುಧಾಕರ್
ಬೆಂಗಳೂರು , ಬುಧವಾರ, 22 ಸೆಪ್ಟಂಬರ್ 2021 (14:52 IST)
ಬೆಂಗಳೂರು, ಸೆ 22 : ಇತರೆ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಮಕ್ಕಳಿಗೆ ಆದ್ಯತೆಯಲ್ಲಿ ಕೊರೊನಾ ಲಸಿಕೆಗಳನ್ನು ನೀಡಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.

ಆರೋಗ್ಯ ನಂದನ ಕಾರ್ಯಕ್ರಮದ ಅಡಿಯಲ್ಲಿ ಸೆಪ್ಟೆಂಬರ್ 15ರವರೆಗೂ ರಾಜ್ಯದಲ್ಲಿ 53,82,106 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ 7259 ಮಕ್ಕಳಿಗೆ ಗಂಭೀರವಾದ ಅಪೌಷ್ಟಿಕತೆ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವಿವರಣೆ ನೀಡಿದ್ದಾರೆ.
ಸುಮಾರು 1,05,150 ಮಕ್ಕಳು ತೀವ್ರ ಅಪೌಷ್ಟಿಕತೆ, 1759 ಮಕ್ಕಳಿಗೆ ಮಧುಮೇಹ, 150 ಮಕ್ಕಳಿಗೆ ದೀರ್ಘಕಾಲದ ಪಿತ್ತ ಜನಕಾಂಗದ ಕಾಯಿಲೆ, 371 ದೀರ್ಘಕಾಲದ ಶ್ವಾಸಕೋಶ ಸಮಸ್ಯೆ, 585 ದೀರ್ಘಕಾಲದ ಮೂತ್ರಪಿಂಡ ವೈಫಲ್ಯ, 338 ರಕ್ತ ಸಂಬಂಧಿ ಅಸ್ವಸ್ಥತೆ ಹಾಗೂ 48 ಮಕ್ಕಳು ಕ್ಯಾನ್ಸರ್ ಸಮಸ್ಯೆ ಹೊಂದಿದ್ದಾರೆ ಎಂದು ತಿಳಿಸಿದರು.
12 ರಿಂದ 17 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯವಾದ ನಂತರ ಆದ್ಯತೆಯಲ್ಲಿ ಕೇಂದ್ರ ಪ್ರಕಟಿಸುವ ಪಟ್ಟಿಯನ್ನು ಆಧರಿಸಿ ಲಸಿಕೆ ನೀಡಲಾಗುತ್ತದೆ. ರಾಜ್ಯದಲ್ಲಿ 1.5 ಕೋಟಿ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸುವ ಗುರಿಯಿದೆ ಎಂದು ಹೇಳಿದರು.
'ನಾವು ಮಕ್ಕಳಲ್ಲಿ ಅಸ್ವಸ್ಥತೆಗಳನ್ನು ಗುರುತಿಸಲು ಆರೋಗ್ಯ ನಂದನಾ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ' ಎಂದು ಸಚಿವರು ತಿಳಿಸಿದರು. ಚಿತ್ರದುರ್ಗ ಜಿಲ್ಲೆಯಲ್ಲಿ ಇದುವರೆಗೆ 189 ಮಕ್ಕಳಲ್ಲಿ ಮೂತ್ರಪಿಂಡ ವೈಫಲ್ಯ ಸಮಸ್ಯೆ ಹೊಂದಿರುವ ಮಕ್ಕಳು ಕಂಡುಬಂದಿದ್ದಾರೆ.
ಇತರೆ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಗಳೆಂದರೆ; ರಾಯಚೂರು ಜಿಲ್ಲೆಯಲ್ಲಿ 1447 ಮಕ್ಕಳಿಗೆ ಮಧುಮೇಹ ಸಮಸ್ಯೆ, ಚಿಕ್ಕಮಗಳೂರಿನಲ್ಲಿ 55 ಮಕ್ಕಳಿಗೆ ಪಿತ್ತಜನಕಾಂಗ ಸಮಸ್ಯೆ, ಕಲಬುರಗಿ ಜಿಲ್ಲೆಯಲ್ಲಿ 109 ಮಕ್ಕಳಿಗೆ ಶ್ವಾಸಕೋಶದ ಕಾಯಿಲೆ, ಯಾದಗಿರಿ ಜಿಲ್ಲೆಯಲ್ಲಿ 14 ಮಕ್ಕಳಿಗೆ ಕ್ಯಾನ್ಸರ್ ಇರುವ ಸಮಸ್ಯೆ ಕಂಡುಬಂದಿದೆ.
ಬೆಳಗಾವಿ ಜಿಲ್ಲೆಯಲ್ಲಿ 14,04,414 ಮಕ್ಕಳ ಮೇಲೆ ಪರೀಕ್ಷೆ ನಡೆಸಲಾಗಿದ್ದು, ಈ ಕಾರ್ಯಕ್ರಮದಡಿಯಲ್ಲಿ ಪರೀಕ್ಷಿಸಿದ ಅತಿ ಹೆಚ್ಚು ಮಕ್ಕಳ ಸಂಖ್ಯೆ ಇದಾಗಿದೆ. ಹಾವೇರಿಯಲ್ಲಿ 7,59,156 ಹಾಗೂ ಕೊಪ್ಪಳದಲ್ಲಿ 4,03,354 ಮಕ್ಕಳು ಪರೀಕ್ಷೆಗೆ ಒಳಗಾಗಿದ್ದಾರೆ.
ಬಿಬಿಎಂಪಿ ಮಕ್ಕಳ ಪರೀಕ್ಷೆಯಲ್ಲಿ ಹಿಂದೆ ಉಳಿದಿದ್ದು, 25,467 ಮಕ್ಕಳಿಗೆ ಪರೀಕ್ಷೆ ನಡೆಸಿದೆ. ಬೆಂಗಳೂರು ನಗರ ಪ್ರದೇಶದಲ್ಲಿ 75,420 ಮಕ್ಕಳು ಹಾಗೂ ಬೆಂಗಳೂರು ಗ್ರಾಮೀಣ ಪ್ರದೇಶದಲ್ಲಿ 68,499 ಮಕ್ಕಳನ್ನು ಪರೀಕ್ಷೆ ನಡೆಸಲಾಗಿದೆ.
ಸದ್ಯಕ್ಕೆ ದೇಶದಲ್ಲಿ 12-18 ವರ್ಷದವರಿಗೆ ನೀಡಲು ಝೈಡಸ್ ಕ್ಯಾಡಿಲಾದ ಝೈಕೋವ್-ಡಿ ಲಸಿಕೆಗೆ ಅನುಮೋದನೆ ನೀಡಲಾಗಿದೆ, ಅಕ್ಟೋಬರ್ ಆರಂಭದ ವೇಳೆಗೆ ಝೈಡಸ್ ಕ್ಯಾಡಿಲಾದ ಸೂಜಿರಹಿತ ಲಸಿಕೆ "ಝೈಕೋವ್-ಡಿ' ಲಭ್ಯವಾಗಲಿದ್ದು, ಲಸಿಕೆ ಅಭಿಯಾನದಲ್ಲಿ ಈ ಲಸಿಕೆಯನ್ನು ಒಳಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.
ಮಕ್ಕಳ ಮೇಲೆ ಕೋವೋವ್ಯಾಕ್ಸ್ ವೈದ್ಯಕೀಯ ಪ್ರಯೋಗವನ್ನು (ಅಮೆರಿಕ ಕಂಪನಿ ನೋವಾವ್ಯಾಕ್ಸ್ ಅಭಿವೃದ್ಧಿಪಡಿಸಿರುವ) ಭಾರತದಲ್ಲಿ ನಡೆಸಲಾಗುತ್ತಿದೆ. ಭಾರತ್ ಬಯೋಟೆಕ್ನ ಮೂಗಿನ ಲಸಿಕೆ ಪ್ರಯೋಗದಲ್ಲಿದ್ದು, ಅದನ್ನು ಕೂಡ ಮಕ್ಕಳ ಮೇಲೆ ಪ್ರಯೋಗಿಸಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಕೊರೊನಾ ಸೋಂಕು:
ರಾಜ್ಯದಲ್ಲಿ ಹೊಸ ಸೋಂಕಿತ ಪ್ರಕರಣಗಳ ಪ್ರಮಾಣ ಶೇ.0.60ರಷ್ಟಿದ್ದು, ಆದರೆ ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 3.54ರಷ್ಟಿದೆ. ಕರ್ನಾಟಕ ರಾಜ್ಯದಲ್ಲಿ ಸೋಮವಾರ ಹೊಸದಾಗಿ 677 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,68,543ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 29,16,530 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಅದೇ ರೀತಿ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ 24 ಜನರ ಸಾವು ಸಂಭವಿಸಿದ್ದು, ರಾಜ್ಯದಲ್ಲಿ ಈವರೆಗೆ ಕೊರೊನಾ ಸೋಂಕಿನಿಂದ 37,627 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 14,358 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕ್ರಮ:ಜೆ.ಸಿ ಮಾಧುಸ್ವಾಮಿ