Select Your Language

Notifications

webdunia
webdunia
webdunia
webdunia

ದೇಶದ್ರೋಹ ಕಾಯ್ದೆ ಬಗ್ಗೆ ಸುಪ್ರೀಂ ಕೋರ್ಟ್ ಗರಂ!

ದೇಶದ್ರೋಹ ಕಾಯ್ದೆ ಬಗ್ಗೆ ಸುಪ್ರೀಂ ಕೋರ್ಟ್ ಗರಂ!
ನವದೆಹಲಿ , ಶುಕ್ರವಾರ, 16 ಜುಲೈ 2021 (10:02 IST)
ನವದೆಹಲಿ(ಜು.16): ದೇಶದಲ್ಲಿ ವ್ಯಾಪಕವಾಗಿ ದುರ್ಬಳಕೆಯಾಗುತ್ತಿದೆ ಎಂಬ ದೂರುಗಳಿರುವ ದೇಶದ್ರೋಹ ಕಾಯ್ದೆಯ ಮೇಲೆ ಸುಪ್ರೀಂಕೋರ್ಟ್ ಗದಾಪ್ರಹಾರ ನಡೆಸಿದ್ದು, ಬ್ರಿಟಿಷರ ಕಾಲದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಹಾಗೂ ಗಾಂಧೀಜಿ, ಗೋಖಲೆಯಂಥವರನ್ನು ಬಂಧಿಸಲು ಬಳಸುತ್ತಿದ್ದ ಈ ಕಾಯ್ದೆ ಇನ್ನೂ ಏಕಿದೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದೆ. ಅಲ್ಲದೆ ಈ ಕಾಯ್ದೆ ವ್ಯಾಪಕವಾಗಿ ದುರ್ಬಳಕೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದು, ಇದರ ಸಾಂವಿಧಾನಿಕತೆಯನ್ನು ಪರಿಶೀಲಿಸಬೇಕೆಂಬ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದೆ.

ಭಾರತೀಯ ದಂಡಸಂಹಿತೆಯ ಸೆಕ್ಷನ್ 124ಎ ದೇಶದ್ರೋಹ ಕಾಯ್ದೆಯೆಂದೇ ಪ್ರಸಿದ್ಧವಾಗಿದೆ. ಇದು ದೊಡ್ಡ ಪ್ರಮಾಣದಲ್ಲಿ ದುರ್ಬಳಕೆಯಾಗುತ್ತಿದೆ ಎಂದು ಆಕ್ಷೇಪಿಸಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹಾಗೂ ಕರ್ನಾಟಕ ಮೂಲದ ನಿವೃತ್ತ ಮೇಜರ್ ಜನರಲ್ ಎಸ್.ಜಿ.ವೊಂಬತ್ಕೆರೆ ಅವರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಕಾಯ್ದೆ ರದ್ದುಪಡಿಸಬೇಕು ಮತ್ತು ಇದರ ಸಂವಿಧಾನಿಕತೆಯನ್ನು ಪರಿಶೀಲಿಸಬೇಕು ಎಂದು ಕೋರಿದ್ದಾರೆ. ಈ ಅರ್ಜಿಯನ್ನು ಗುರುವಾರ ವಿಚಾರಣೆಗೆ ಅಂಗೀಕರಿಸಿದ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ವಿಭಾಗೀಯ ಪೀಠ, ಈ ಕುರಿತು ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿತು.
ಈ ವೇಳೆ ಸರ್ಕಾರದ ಪರವಾಗಿ ಉತ್ತರಿಸಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ದೇಶದ್ರೋಹ ಕಾಯ್ದೆ ಅಗತ್ಯವಾಗಿದೆ. ನ್ಯಾಯಾಲಯ ಬೇಕಾದರೆ ಇದರ ದುರ್ಬಳಕೆ ತಡೆಯಲು ನಿಯಮಾವಳಿ ರೂಪಿಸಬಹುದು ಎಂದು ಹೇಳಿದರು.
ಭಿನ್ನ ದನಿ ಹತ್ತಿಕ್ಕಲು ದುರ್ಬಳಕೆ:
ವಿಚಾರಣೆಯ ವೇಳೆ ಕೆಲ ತೀಕ್ಷ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ನ್ಯಾಯಪೀಠ, ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸಿದರೆ ಜಾಮೀನು ಸಿಗುವುದಿಲ್ಲ. ಇದು ಸರ್ಕಾರದ ವಿರುದ್ಧದ ಯಾವುದೇ ಭಿನ್ನಾಭಿಪ್ರಾಯ ಅಥವಾ ಅಸಮಾಧಾನ ವ್ಯಕ್ತಪಡಿಸುವವರನ್ನು ಕೂಡ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಕ್ರಿಮಿನಲ್ ಆರೋಪದಡಿ ಬಂಧಿಸಲು ಅವಕಾಶ ನೀಡುತ್ತದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ತಿಕ್ಕಲು ಬ್ರಿಟಿಷ್ ಅಧಿಕಾರಿಗಳು ಇದೇ ಕಾಯ್ದೆ ಬಳಸುತ್ತಿದ್ದರು. ಸ್ವಾತಂತ್ರ್ಯ ಬಂದು 75 ವರ್ಷದ ನಂತರವೂ ಈ ಕಾಯ್ದೆಯ ಅಗತ್ಯವಿದೆಯೇ? ಹಲವಾರು ನಿರುಪಯುಕ್ತ ಕಾಯ್ದೆಗಳನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರ ಏಕೆ ಈ ಕಾಯ್ದೆಯನ್ನು ರದ್ದುಪಡಿಸುತ್ತಿಲ್ಲ ಎಂದು ಪ್ರಶ್ನಿಸಿತು.
ಬಿಜೆಪಿ ನಾಯಕನ ಕಾರಿನ ಮೇಲೆ ದಾಳಿ: 100 ರೈತರ ವಿರುದ್ಧ ದೇಶದ್ರೋಹದ ಕೇಸ್!
ದೇಶದ್ರೋಹ ಕಾಯ್ದೆ ತೀವ್ರ ದುರ್ಬಳಕೆಯಾಗುತ್ತಿದೆ. ಅರ್ಜಿದಾರ ವೊಂಬತ್ಕೆರೆ ಅವರು ತಮ್ಮ ಇಡೀ ಜೀವನವನ್ನು ದೇಶಸೇವೆಗೆ ಅರ್ಪಿಸಿದವರು. ಅವರ ಅರ್ಜಿಯಲ್ಲಿ ಯಾವುದೇ ದುರುದ್ದೇಶವಿರಲು ಸಾಧ್ಯವಿಲ್ಲ. ಬಹಳ ಹಿಂದೆಯೇ ನಾವು ರದ್ದುಪಡಿಸಿದ ಐಟಿ ಕಾಯ್ದೆ ಸೆಕ್ಷನ್ 66ಎ ಅಡಿಯಲ್ಲಿ ಈಗಲೂ ಪೊಲೀಸರು ಕೇಸು ದಾಖಲಿಸುತ್ತಿದ್ದಾರೆ. ಇದು ಒಬ್ಬ ಬಡಗಿಗೆ ಮರದ ತುಂಡು ಕಡಿಯಲು ಹೇಳಿದರೆ ಇಡೀ ಕಾಡು ಕಡಿದಂತೆ. ತಮಗಾಗದವರನ್ನು ಹತ್ತಿಕ್ಕಲು, ತಮ್ಮ ವಿರುದ್ಧದ ದನಿಯನ್ನು ಅಡಗಿಸಲು ಇಂತಹ ಕಾಯ್ದೆಗಳನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಯಾವುದೋ ಹಳ್ಳಿಯ ಮೂಲೆಯಲ್ಲಿ ತನಗಾಗದ ವ್ಯಕ್ತಿಯೊಬ್ಬನನ್ನು ಮಟ್ಟಹಾಕಲು ಪೊಲೀಸ್ ಅಧಿಕಾರಿಯೊಬ್ಬ ಈ ಕೇಸು ಹಾಕಿ ಒಳಗೆ ತಳ್ಳಬಹುದಲ್ಲವೇ? ಎಲ್ಲಕ್ಕಿಂತ ಹೆಚ್ಚಾಗಿ ದೇಶದ್ರೋಹದ ಆರೋಪಗಳು ಸಾಬೀತಾಗುವುದು ಬಹಳ ಕಡಿಮೆ. ಈ ಎಲ್ಲ ಅಂಶಗಳನ್ನು ಸರ್ಕಾರ ಪರಿಗಣಿಸಿ ತನ್ನ ಅಭಿಪ್ರಾಯ ತಿಳಿಸಬೇಕು ಎಂದು ಕೋರ್ಟ್ ಸೂಚಿಸಿತು.


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಸೇರಿದ ಆರು ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಮಹತ್ವದ ಸಭೆ