Publish Date: Thu, 27 Jul 2023 (14:13 IST)
Updated Date: Thu, 27 Jul 2023 (15:43 IST)
ನವದೆಹಲಿ : ಟೊಮೆಟೋ ಬೆಲೆ ಏರಿಕೆಗೆ ಕಡಿವಾಣ ಹಾಕಲು ಸಬ್ಸಿಡಿ ದರದಲ್ಲಿ ಮಾರಾಟ ನಡೆಸುತ್ತಿರುವ ಕೇಂದ್ರ ಸರ್ಕಾರ ಇದೀಗ ಟೊಮೆಟೋ ಸಬ್ಸಿಡಿಯನ್ನು ಇನ್ನಷ್ಟು ಹೆಚ್ಚಿಸಿದೆ.
ಇದೀಗ ಕಿಲೋಗೆ 70 ರುಪಾಯಿಯಂತೆ ಸರ್ಕಾರದ ವತಿಯಿಂದ ಟೊಮೆಟೋ ಮಾರಾಟವಾಗುತ್ತಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಸಂಸ್ಥೆಗಳ ರೀಟೇಲ್ ಔಟ್ಲೆಟ್ಗಳ ಮೂಲಕ ಮತ್ತು ಮೊಬೈಲ್ ವ್ಯಾನ್ಗಳ ಮೂಲಕ ಟೊಮೆಟೋವನ್ನು ಸಬ್ಸಿಡಿ ದರದಲ್ಲಿ ಮಾರಲಾಗುತ್ತಿದೆ. ಬೆಲೆ ಏರಿಕೆ ಹೆಚ್ಚು ಇರುವ ಕಡೆ ಸಬ್ಸಿಡಿ ಟೊಮೆಟೋ ಮಾರಾಟ ಹೆಚ್ಚು ಮಾಡಲಾಗಿದೆ.
ಭಾರತದಲ್ಲಿ ಟೊಮೆಟೋ ರೀಟೇಲ್ ಮಾರುಕಟ್ಟೆಯ ಸರಾಸರಿ ಬೆಲೆ ಕಿಲೋಗೆ 120 ರೂ ಇದೆ. ಕೆಲವೆಡೆ ಅದರ ಬೆಲೆ 200 ರೂ ಮೇಲೆಯೇ ಇದೆ. ಕೋಲಾರದಲ್ಲಿ ಟೊಮೆಟೋ ಅತಿಹೆಚ್ಚು ಬೆಳೆಯಲಾಗುತ್ತಿದ್ದರೂ ನೆರೆಯ ಬೆಂಗಳೂರಿನಲ್ಲಿ ಟೊಮೆಟೋದ ರೀಟೇಲ್ ದರ 100 ರೂಗಿಂತ ಕಡಿಮೆಗೆ ಇಳಿಯುತ್ತಲೇ ಇಲ್ಲ. ಬೆಂಗಳೂರಿನಂತಹ ಸ್ಥಿತಿಯ ಮುಂಬೈಗೂ ಇದೆ. ಮಹಾರಾಷ್ಟ್ರದಲ್ಲೂ ಟೊಮೆಟೋ ಹೆಚ್ಚು ಬೆಳೆಯಲಾಗುತ್ತಿದ್ದರೂ ಮುಂಬೈನಲ್ಲಿ ಟೊಮೆಟೋದ ರೀಟೇಲದ್ ದರ 150 ರೂ ಮೇಲೆಯೇ ಇದೆ.