ಕೀವ್ : ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ನ್ಯಾಟೋ ಸದಸ್ಯತ್ವವನ್ನು ಪಡೆಯದಿರುವ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಮಾತುಕತೆ ನಡೆಸಲು ಸಿದ್ಧ ಎಂದು ಹೇಳಿದ್ದು,
ಇನ್ನಾದರೂ ಉಕ್ರೇನ್ ಹಾಗೂ ರಷ್ಯಾ ನಡುವಿನ ಬಿಕ್ಕಟ್ಟು ಶಮನಗೊಂಡು ಯುದ್ಧ ನಿಲ್ಲುವುದೋ ಎಂಬ ಕುತೂಹಲ ಮೂಡಿದೆ. ಕದನ ವಿರಾಮ, ರಷ್ಯಾದ ಪಡೆಗಳ ವಾಪಸಾತಿ ಮತ್ತು ಉಕ್ರೇನ್ನ ಭದ್ರತೆಯ ಭರವಸೆಗೆ ಬದಲಾಗಿ ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೋ) ಸದಸ್ಯತ್ವವನ್ನು ಪಡೆಯದಿರಲು ಉಕ್ರೇನ್ನಿಂದ ಬದ್ಧತೆಯನ್ನು ಚರ್ಚಿಸಲು ಸಿದ್ಧ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೋಮವಾರ ತಡರಾತ್ರಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಅಲ್ಲದೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನೇರ ಮಾತುಕತೆ ನಡೆಸುವ ವಿಚಾರವನ್ನು ಪುನರ್ ಪ್ರಸ್ತಾಪಿಸಿದ ಅವರು, ಪುಟಿನ್ ಅವರನ್ನು ಭೇಟಿಯಾಗದ ಹೊರತು, ರಷ್ಯಾ ಯುದ್ಧವನ್ನು ನಿಲ್ಲಿಸಲು ಬಯಸುತ್ತದೆಯೇ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯ ಎಂದು ಹೇಳಿದರು.
ಕದನ ವಿರಾಮದ ನಂತರ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳನ್ನು ಹೊಂದಿರುವ ಕ್ರೈಮಿಯಾ ಮತ್ತು ಪೂರ್ವ ಡೊನ್ಬಾಸ್ ಪ್ರದೇಶದ ಸ್ಥಿತಿ ಮತ್ತು ಭದ್ರತಾ ಖಾತರಿಗಳನ್ನು ಒದಗಿಸುವ ಕ್ರಮಗಳ ಬಗ್ಗೆ ಚರ್ಚಿಸಲು ಕೈವ್ ಸಿದ್ಧವಾಗಿದೆ ಎಂದು ಕೂಡ ಝೆಲೆನ್ಸಿಕಿ ಹೇಳಿದ್ದಾರೆ.
ಆದರೆ ಇದನ್ನು ತಿರಸ್ಕರಿಸಿರುವ ಉಕ್ರೇನ್ನ ಉಪ ಪ್ರಧಾನಿ ಐರಿನಾ ವೆರೆಶ್ಚುಕ್, ಶರಣಾಗತಿ ಮತ್ತು ಶಸ್ತ್ರಾಸ್ತ್ರಗಳನ್ನು ತ್ಯಜಿಸುವುದಿಲ್ಲ. ರಷ್ಯಾದ ತಂತ್ರಗಳಿಗೆ ಉಕ್ರೇನ್ ಮಣಿಯುವುದಿಲ್ಲ. ಈ ಕುರಿತಾಗಿ ನಮ್ಮ ನಿರ್ಣಯವನ್ನು ರಷ್ಯಾಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.