ಬೆಂಗಳೂರು:ಕೊರೊನಾ ಹಿನ್ನೆಲೆ ನಗರ ಪ್ರದೇಶ ತೊರೆದು ಗ್ರಾಮೀಣ ಪ್ರದೇಶಗಳಿಗೆ ಪೋಷಕರು ಮುಖ ಮಾಡಿದ್ದಾರೆ. ಹೀಗಾಗಿ ಹೆಚ್ಚಿನ ಪೋಷಕರು ಮಕ್ಕಳನ್ನ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.
ಸರ್ಕಾರಿ ಶಾಲೆನಾ ಎಂದು ಮೂಗು ಮುರಿಯುತ್ತಿದ್ದವರು ಈಗ ಬೆರಳಿಟ್ಟುಕೊಳ್ಳುವ ಪ್ರಸಂಗ ಎದುರಾಗ್ತಿದೆ. ಖಾಸಗಿ ಶಾಲೆಗೆ ಸೇರಿಸುತ್ತಿದ್ದ ಮಕ್ಕಳು ಕೊರೊನಾದಿಂದಾಗಿ ಸರ್ಕಾರಿ ಶಾಲೆ ದಾಖಲಾಗುತ್ತಿದ್ದಾರೆ. ಕೊರೊನಾ ಕಳೆದ ಒಂದೂವರೆ ವರ್ಷದಿಂದಲೂ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಆನ್ ಲೈನ್, ಯೂಟ್ಯೂಬ್ ಪಾಠ ಜಂಜಾಟದ ನಡುವೆ ಪೋಷಕರಿಗೆ ಫೀಸ್ ಪೀಕಲಾಟ ಕೂಡ ಶುರುವಾಗಿತ್ತು. ಕಳೆದ 15 ತಿಂಗಳುಗಳಿಂದ ಶಾಲೆಯ ಮುಖವನ್ನೇ ನೋಡದ ಮಕ್ಕಳಿಗೆ ಯಾಕೆ ಪೂರ್ಣ ಶುಲ್ಕ ಕಟ್ಟಬೇಕೆಂಬ ಗಲಾಟೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜೋರಾಗಿತ್ತು. ದಿನ ಬೆಳಗಾದ್ರೆ ಶುಲ್ಕ ವಿಚಾರವಾಗಿ ಖಾಸಗಿ ಶಾಲೆಗಳು ಪೋಷಕರ ನಡುವೆ ವಾಗ್ವಾದ ನಡೀತಿತ್ತು. ಕಳೆದ ವರ್ಷದಿಂದ ಎಷ್ಟೋ ಪ್ರತಿಭಟನೆ ಹೋರಾಟ ನಡೆಯುತ್ತಿದ್ರೂ ಶುಲ್ಕ ಕಡಿತವನ್ನ ಹಲವು ಶಾಲೆಗಳು ಧಿಕ್ಕರಿಸಿವೆ. ಇದರ ಕೊರೊನಾ ಕಾಟದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸೋದಕ್ಕೆ ಒದ್ದಾಡುತ್ತಿದ್ದರು.ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಸರ್ಕಾರಿ ಶಾಲೆಗಳಲು ದಾಖಲೆ ಮಟ್ಟದಲ್ಲಿ ದಾಖಲಾತಿ ಆಗ್ತಿದೆ. 2021-22ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಗಣನೀಯವಾಗಿ ಅಡ್ಮಿಷನ್ ಪ್ರಕ್ರಿಯೆ ಹೆಚ್ಚಾಗ್ತಿದೆ 1ರಿಂದ 10ನೇ ತರಗತಿವರೆಗೂ ಸರ್ಕಾರಿ ಶಾಲೆಗಳಿಗೆ ಲಕ್ಷಾಂತರ ಮಕ್ಕಳ ದಾಖಲಾತಿ ಆಗಿದ್ದಾರೆ. ಜೂನ್ 15 ರಿಂದ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು, ಕೇವಲ 15 ದಿನದಲ್ಲೇ ಸರ್ಕಾರಿ ಶಾಲೆಗಳಿಗೆ ಬಂಪರ್ ಹೊಡೆದಿದೆ. ಜೂ.15 ರಿಂದ ಈವರೆಗೆ ಒಟ್ಟು 16,52,613 ಮಕ್ಕಳು ಸರ್ಕಾರಿ ಶಾಲೆಗೆ ಸೇರ್ಪಡೆಯಾಗಿದ್ದಾರೆ. ಆರ್ಥಿಕ ಸಂಕಷ್ಟದಿಂದ ಖಾಸಗಿ ಶಾಲೆಗಳ ಪೋಷಕರು ಶುಲ್ಕ ಕಟ್ಟಲಾಗದೆ ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಜೊತೆಗೆ ಕೊರೊನಾ ಭಯಕ್ಕೆ ತಮ್ಮ ಸ್ವಂತ ಊರುಗಳನ್ನ ಸೇರಿರುವ ಪೋಷಕರು ತಮ್ಮ ಮಕ್ಕಳಿಗೆ ಗ್ರಾಮೀಣ ಭಾಗದಲ್ಲೇ ಶಿಕ್ಷಣ ಕೊಡಿಸಲು ಮುಂದಾಗಿದ್ದು, ಸರ್ಕಾರಿ ಶಾಲೆಗಳಿಗೆ ಹೆಚ್ಚು ಅಡ್ಮಿಷನ್ ಮಾಡ್ತಿದ್ದಾರೆ.