ಮಡಿಕೇರಿ : ಮೂರು-ನಾಲ್ಕು ವರ್ಷಗಳ ಅತಿವೃಷ್ಟಿ ಮತ್ತು ಕೊರೊನಾ ಸಂಕಷ್ಟದ ದಿನಗಳ ನಂತರ ಇದೀಗ ಕೊಡಗಿನಲ್ಲಿ ಮಕ್ಕಳನ್ನು ದತ್ತು ಸ್ವೀಕರಿಸುವ ಪೋಷಕರ ಸಂಖ್ಯೆಯೂ ಹೆಚ್ಚಾಗಿದೆ.
ಕೊಡಗು ಜಿಲ್ಲೆಯಲ್ಲದೇ ಹೊರ ಜಿಲ್ಲೆಗಳಿಂದಲೂ ಆನ್ಲೈನ್ ಅರ್ಜಿ ಸಲ್ಲಿಸಿ ಮಗುವನ್ನು ದತ್ತು ಪಡೆದುಕೊಳ್ಳಲು ಮಾತೃ ಹೃದಯಗಳು ಮುಂದಾಗುತ್ತಿವೆ. ಕಳೆದ ಐದು ವರ್ಷಗಳಲ್ಲಿ 48 ಕ್ಕೂ ಹೆಚ್ಚು ಪೋಷಕರು ದತ್ತು ಸ್ವೀಕರಿಸಲು ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಕೊಡಗಿನಲ್ಲಿಯೂ ದತ್ತು ಸ್ವೀಕಾರದ ಮನೋಭಾವ ಮುಕ್ತವಾಗಿ ವ್ಯಾಪಿಸಿಕೊಳ್ಳುತ್ತಿರುವುದು ಈ ಮೂಲಕ ಸಾಬೀತಾಗುತ್ತಿದೆ. ಹೌದು, ಕೊಡಗು ಜಿಲ್ಲೆಯಲ್ಲಿ ಸುಮಾರು 48 ಪೋಷಕರು ಸಲ್ಲಿಸಿದ್ದ ಅರ್ಜಿಯಲ್ಲಿ ಸುಮಾರು 15ಕ್ಕೂ ಹೆಚ್ಚು ಜನರು ತಾವು ತಂದೆ-ತಾಯಿಗಳಾಗಿ ಅನುಭವಿಸುವ ಸುಖವನ್ನು ದತ್ತು ಸ್ವೀಕಾರದ ಮೂಲಕ ತುಂಬಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಕೆಲವು ತಿಂಗಳ ಹಿಂದೆಯಷ್ಟೆ? ಸ್ಥಾಪನೆಯಾದ ಮಡಿಲು ದತ್ತು ಸ್ವೀಕಾರ ಸಂಸ್ಥೆಯ ಅಧೀನದಲ್ಲಿ ನಾಲ್ಕು ಮಕ್ಕಳು ತಮಗೆ ಸಿಗಬೇಕಾದ ತಂದೆ ತಾಯಿಗಳ ಪ್ರೀತಿಗಾಗಿ ಹಾತೊರೆಯುತ್ತಿವೆ.
ಜುಲೈ 2021ರಲ್ಲಿ ಸ್ಥಾಪನೆಯಾದ ಮಡಿಲು ಸಂಸ್ಥೆಯಿಂದ ಮಗುವೊಂದು ಪ್ರಥಮವಾಗಿ ತಂದೆ-ತಾಯಿಯ ಮಡಿಲಿನ ಆಶ್ರಯ ಪಡೆದುಕೊಂಡಿದೆ ಎಂದು ಇಲ್ಲಿನ ಅಧಿಕಾರಿಗಳು ಹರ್ಷಗೊಂಡಿದ್ದಾರೆ.
ಈ ಹಿಂದೆ ಕೊಡಗಿನಲ್ಲಿ ಸಂಸ್ಥೆ ಇಲ್ಲದೆ ಪುತ್ತೂರು, ಹಾಸನ ಅಥವಾ ಇತರ ಹೊರ ಜಿಲ್ಲೆಗಳಿಂದ ದತ್ತು ಸ್ವೀಕಾರಕ್ಕೆ ಸಲ್ಲಿಕೆಯಾದ ಅರ್ಜಿಗೆ ಮಕ್ಕಳನ್ನು ಪೋಷಕರ ಮಡಿಲಿಗೆ ಹಾಕುವ ಕಾರ್ಯ ನಡೆಯುತ್ತಿತ್ತು.
ಇದೀಗ ಕೊಡಗಿನಲ್ಲಿಯೇ ದತ್ತು ಸ್ವೀಕಾರ ಸಂಸ್ಥೆ ಪ್ರಾರಂಭವಾಗಿರುವುದರಿಂದ ಜಿಲ್ಲೆಯಲ್ಲಿ ದತ್ತು ಸ್ವೀಕಾರ ಕಾರ್ಯ ಸುಗಮವಾಗಿ ಕಾನೂನು ನಿಯಮದಂತೆ ನಡೆಯಲಿದೆ.