ವಿಶ್ವಸಂಸ್ಥೆ : ಉಕ್ರೇನ್-ರಷ್ಯಾ ನಡುವಿನ ಯುದ್ಧ ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರಿದರೂ ಭಾರತ ವಿಶ್ವದಲ್ಲೇ ಅತಿ ವೇಗದ ಆರ್ಥಿಕ ಪ್ರಗತಿ ಕಾಣಲಿರುವ ದೇಶವಾಗಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
2022ನೇ ಸಾಲಿನಲ್ಲಿ ಭಾರತ ಶೇ.6.4ರ ದರದಲ್ಲಿ ಪ್ರಗತಿ ಕಾಣಲಿದೆ ಎಂದು ಅದು ತಿಳಿಸಿದೆ. ಬುಧವಾರ ವಿಶ್ವಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ವ್ಯವಹಾರಗಳ ಇಲಾಖೆ ವಿಶ್ವ ಆರ್ಥಿಕ ಪರಿಸ್ಥಿತಿ ಹಾಗೂ ಮುನ್ನೋಟ ಎಂಬ ವರದಿ ಬಿಡುಗಡೆ ಮಾಡಿದೆ.
ಅದರಲ್ಲಿ 2022ರಲ್ಲಿ ವಿಶ್ವವು ಕೇವಲ ಶೇ.3.1ರ ದರದಲ್ಲಿ ಆರ್ಥಿಕ ಪ್ರಗತಿ ಕಾಣಲಿದೆ ಎಂದು ತಿಳಿಸಿದೆ. ಇದಕ್ಕೂ ಮುನ್ನ ಜನವರಿಯಲ್ಲಿ ವಿಶ್ವವು ಶೇ.4ರ ದರದಲ್ಲಿ ಆರ್ಥಿಕ ಪ್ರಗತಿ ಕಾಣಲಿದೆ ಎಂದು ವರದಿ ಅಂದಾಜಿಸಲಾಗಿತ್ತು.
ಭಾರತವು ಈ ಮುನ್ನ ಶೇ.8.8ರ ಬೆಳವಣಿಗೆ ದರ ಕಾಣಲಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ ಪ್ರಗತಿ ದರದ ಅಂದಾಜು ಶೇ.6.4ಕ್ಕೆ ಇಳಿದರೂ ಇಷ್ಟುವೇಗದ ಜಿಡಿಪಿ ಬೆಳವಣಿಗೆ ದರ ದಾಖಲಿಸುವ ಏಕೈಕ ದೇಶವಾಗಲಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ. ಈ ನಡುವೆ 2023ನೇ ಸಾಲಿನಲ್ಲಿ ಭಾರತ ಶೇ.6ರ ದರದಲ್ಲಿ ಪ್ರಗತಿ ಸಾಧಿಸಲಿದೆ ಎಂದು ಅದು ಅಂದಾಜಿಸಿದೆ.