ಇಂದು ಪೆಟ್ರೋಲಿಯಂ ಕಂಪನಿಗಳು ಸಾಮಾನ್ಯ ಜನರಿಗೆ ಮತ್ತೊಂದು ಶಾಕ್ ನೀಡಿವೆ.
19 ಕೆಜಿ ತೂಕದ ಕಮರ್ಷಿಯಲ್ ಸಿಲಿಂಡರ್ ಬೆಲೆಯನ್ನು 100 ರೂಪಾಯಿಗಳಷ್ಟು ಹೆಚ್ಚಿಸಿವೆ. ಇನ್ನು ಮುಂದೆ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಕೂಡ ಆಹಾರ, ಪಾನೀಯಗಳು ದುಬಾರಿಯಾಗಲಿವೆ.
ಈಗಿನ ಬೆಲೆ ಏರಿಕೆಯೊಂದಿಗೆ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ದೆಹಲಿಯಲ್ಲಿ 2101 ರೂಪಾಯಿಗೆ ತಲುಪಿದೆ. ನವೆಂಬರ್ನಲ್ಲಿ ಇಲ್ಲಿ ಕಮರ್ಷಿಯಲ್ ಸಿಲಿಂಡರ್ ಬೆಲೆ 2000.50 ರೂ.ಇತ್ತು.
ಸದ್ಯದ ಸಮಾಧಾನವೆಂದರೆ ಗೃಹಬಳಕೆಯ ಅಂದರೆ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆ ಆಗಿಲ್ಲ. ಆದರೆ 19 ಕೆಜಿ ಸಿಲಿಂಡರ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದು ರೆಸ್ಟೋರೆಂಟ್, ಹೋಟೆಲ್ ಮಾಲೀಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಕಳೆದ ಕೆಲವು ತಿಂಗಳುಗಳಿಂದಲೂ ಏರಿಕೆಯಾಗುತ್ತಿದೆ. ನವೆಂಬರ್ನಲ್ಲಿ 266 ರೂಪಾಯಿ ಹೆಚ್ಚಾಗಿತ್ತು. ಈ ಬಾರಿ 100 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 2101 ರೂ.ಆಗಿದ್ದು, ಕೋಲ್ಕತ್ತದಲ್ಲಿ 2177 ರೂ., ಮುಂಬೈನಲ್ಲಿ 2051 ರೂ., ಚೆನ್ನೈನಲ್ಲಿ 2234 ರೂ.ರಷ್ಟಾಗಿದೆ. ಸದ್ಯಕ್ಕೆ ಗೃಹ ಬಳಕೆಯ ಸಿಲಿಂಡರ್ ಬೆಲೆ ಏರದೆ ಇದ್ದರೂ, ಮುಂದಿನ ದಿನಗಳಲ್ಲಿ ಅದೂ ಕೂಡ ಹೆಚ್ಚಾಗಲಿದೆ.
ಸದ್ಯ ಪೆಟ್ರೋಲ್-ಡೀಸೆಲ್, ಸಿಲಿಂಡರ್ ಗ್ಯಾಸ್ ಅಷ್ಟೇ ಅಲ್ಲದೆ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗಿದೆ. ಇನ್ನು ಪೆಟ್ರೋಲ್-ಡೀಸೆಲ್ ಮೇಲಿನ ಸುಂಕ ಕಡಿಮೆ ಮಾಡಿದ್ದರಿಂದ ಸ್ವಲ್ಪಮಟ್ಟಿಗೆ ಹೊರೆ ಕಡಿಮೆಯಾಗಿದೆ. ಹಾಗೇ, ಸಿಲಿಂಡರ್ ಬೆಲೆಯನ್ನೂ ಇಳಿಸಲು ಮೋದಿ ಸರ್ಕಾರ ಮುಂದಾಗಬೇಕು ಎಂಬುದು ಗ್ರಾಹಕರ ಆಗ್ರಹವಾಗಿದೆ.