Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಹೂ ದರ ಭಾರೀ ಇಳಿಕೆ

ರಾಜ್ಯದಲ್ಲಿ ಹೂ ದರ ಭಾರೀ ಇಳಿಕೆ
ಚಿಕ್ಕಬಳ್ಳಾಪುರ , ಮಂಗಳವಾರ, 5 ಸೆಪ್ಟಂಬರ್ 2023 (07:02 IST)
ಚಿಕ್ಕಬಳ್ಳಾಪುರ : ರಾಜ್ಯದ ಬಹುತೇಕ ಕಡೆ ಬರದ ವಾತಾವರಣ, ಬರದ ನಡುವೆಯೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹಗಲು ರಾತ್ರಿ ಎನ್ನದೇ  ಪಾತಾಳದಿಂದ ಅಂರ್ತಜಲ ಬಗೆದು ಹನಿ ಹನಿ ನೀರುಣಿಸಿ ಬಂಗಾರದಂತಹ ಹೂಗಳನ್ನ ಬೆಳೆದಿದ್ದಾರೆ.

ಬರದ ನಡುವೆ ಕಳೆದ ಮೂರು ದಿನಗಳಿಂದ ಬಂದ ಮಳೆ ಈಗ ಆ ಜಿಲ್ಲೆಯ ಹೂ ಬೆಳೆಗಾರರಿಗೆ ಬರೆ ಹಾಕುವಂತೆ ಮಾಡಿದೆ. ರಾಶಿ ರಾಶಿ ಹೂ ಬಿಕರಿಯಾಗದೇ ರೈತರು ಸುಖಾಸುಮ್ಮನೆ ಬಿಸಾಡಿ ಹೋಗುವಂತಹ ಘಟನೆ ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆಯಲ್ಲಿ ನಡೆದಿದೆ.

ಹೂವಿನ ಬೆಲೆಯಲ್ಲಿ ಭಾರೀ ಕುಸಿತ ಕಂಡಿದ್ದು, ಹೂ ಮಾರಾಟ ಮಾಡಲು ಮಾರುಕಟ್ಟೆಗೆ ಹೂ ತಂದ ರೈತರು ಹೂ ಕೇಳುವವರಿಲ್ಲದೇ, ಖರೀದಿ ಮಾಡುವವರಿಲ್ಲದೇ  ಎಸೆದು ಹೋಗಿದ್ದಾರೆ.

ಕಳೆದ 1 ತಿಂಗಳು ಸೇರಿದಂತೆ ಅದರಲ್ಲೂ ವರಮಹಾಲಕ್ಷ್ಮೀ ಹಬ್ಬಕ್ಕೆ ಭಾರೀ ಏರಿಕೆ ಕಂಡಿದ್ದ ಹೂವಿನ ದರ ಈಗ ಪಾತಾಳಕ್ಕೆ ಕುಸಿದಿದೆ. ವರಮಹಾಲಕ್ಷ್ಮೀ ಹಬ್ಬದಂದು 1 ಕೆಜಿ ಚೆಂಡು ಹೂ 40 ರಿಂದ 70 ರೂ.ಗೆ ಮಾರಾಟವಾಗಿತ್ತು. ಆದರೆ ಈಗ ಚೆಂಡು ಹೂ ಖರೀದಿ ಮಾಡುವವರೇ ಇಲ್ಲ. ಈಗ 1 ಕೆಜಿ ಚೆಂಡು ಹೂ 1 ರೂ., 2 ರೂ.ಗೆ ಮಾರಾಟವಾಗುತ್ತಿದೆ. ಹೀಗಾಗಿ ರೈತರು ಮಾರಾಟಕ್ಕೆ ತಂದಿದ್ದ ಹೂವನ್ನ ಮಾರುಕಟ್ಟೆಯಲ್ಲೇ  ಬಿಸಾಡಿ ಹೋಗುತ್ತಿದ್ದಾರೆ. 

ವರಮಹಾಲಕ್ಷ್ಮೀ ಹಬ್ಬದ ಸಮಯದಲ್ಲಿ ಸೇವಂತಿಗೆ 300 ರಿಂದ 600 ರೂಪಾಯಿಗೂ ಮಾರಾಟವಾಗಿತ್ತು. ಈಗ 5 ರೂ. 10 ರೂ.ಗೆ ಇಳಿದಿದೆ. ಮಳೆಯಿಂದ ನೆನೆದು ಹೋದ ಒದ್ದೆಯಾದ ಹೂಗಳನ್ನ ಖರೀದಿ ಮಾಡುವವರೇ ಇಲ್ಲ. ಹೀಗಾಗಿ ಸೇವಂತಿಗೆ ಹೂಗಳನ್ನ ಸಹ ರೈತರು ಎಲ್ಲಂದರಲ್ಲಿ ಎಸೆಯುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

BBMP-ಗುತ್ತಿಗೆದಾರರ ‘ಕಸ’ ಫೈಟ್