ಬೆಂಗಳೂರು : ಭಾರತದ ಮೊದಲ ಸ್ವದೇಶಿ ತರಬೇತಿ ವಿಮಾನ ಹಂಸ-ಎನ್ಜಿಯ ಸಮುದ್ರದ ಮೇಲಿನ ಹಾರಾಟ ಪರೀಕ್ಷೆ ಯಶಸ್ವಿಯಾಗಿದೆ.
ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಈ ವಿಮಾನ ವಿವಿಧ ಪರೀಕ್ಷೆಗಳಲ್ಲಿ ಉತ್ತಿರ್ಣವಾಗಿದ್ದು ವಾಣಿಜ್ಯ ಬಳಕೆಗೆ ಅವಕಾಶ ಪಡೆಯುವ ಅಂತಿಮ ಹಂತಕ್ಕೆ ಬಂದಿದೆ.
ಪುದುಚೇರಿಯ ಕಡಲ ಮೇಲೆ ಈ ಪ್ರಯೋಗಾರ್ಥ ಹಾರಾಟ ನಡೆದಿದ್ದು, 140 ನಾಟಿಕಲ್ ಮೈಲಿ (1 ನಾಟಿಕಲ್ ಮೈಲಿ-1.852 ಕಿ.ಮೀ.) ಅಂತರವನ್ನು ಒಂದೂವರೆ ಗಂಟೆಯಲ್ಲಿ ಕ್ರಮಿಸಿದೆ. ಈ ಹಾರಾಟದ ಸಂದರ್ಭದಲ್ಲಿ ವಿಮಾನ ಏರುವ, ಇಳಿಯುವ, ನೆಲ ಸ್ಪರ್ಶಿಸುವ, ವಿಮಾನದ ಸಂರಚನೆಯ ಪ್ರದರ್ಶನ ಮುಂತಾದ ಅಗತ್ಯ ಅಂಶಗಳನ್ನು ಪರಿಶೀಲಿಸಲಾಗಿದೆ ಎಂದು ಎನ್ಎಎಲ್ ಹೇಳಿದೆ.
18 ಗಂಟೆ ಸಮುದ್ರದ ಮೇಲಿನ ಹಾರಾಟ ನಡೆಸಲಾಗಿದೆ. ಸಮುದ್ರ ಪರೀಕ್ಷೆಯಲ್ಲಿ ಪರಿಗಣಿಸಬೇಕಾದ ಎಲ್ಲ ಉದ್ದೇಶಗಳೂ ಈಡೇರಿದ್ದು, ಈ ವಿಮಾನವನ್ನು ಮತ್ತೆ ಬೆಂಗಳೂರಿಗೆ ತರಲಾಗಿದೆ. ಇನ್ನೂ ಕೆಲ ಸುತ್ತಿನ ಹಾರಾಟದ ಬಳಿಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಪ್ರಮಾಣೀಕರಣಕ್ಕೆ ಏಪ್ರಿಲ್ನಲ್ಲಿ ಅರ್ಜಿ ಸಲ್ಲಿಸಲಾಗುವುದು.
ಈ ವಿಮಾನಕ್ಕೆ ಮಾನ್ಯತೆ ಸಿಕ್ಕರೆ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಈ ವಿಮಾನದ ಉತ್ಪಾದನೆಯ ಪ್ರಯತ್ನಕ್ಕೆ ಕೈ ಹಾಕಲಾಗುವುದು ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್ ಮಹಾನಿರ್ದೇಶಕ ಶೇಖರ್ ಸಿ. ಮಂಡೆ ಹೇಳಿದ್ದಾರೆ.
ಈ ವಿಮಾನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಎನ್ಎಎಲ್, ಎಎಸ್ಟಿಇ, ಡಿಜಿಸಿಎ ಮತ್ತು ಎಚ್ಎಎಲ್ ಸಂಸ್ಥೆಗಳನ್ನು ಅವರು ಅಭಿನಂದಿಸಿದ್ದಾರೆ.