ನವದೆಹಲಿ : ಕೋವಿಡ್-19 ಸಾಂಕ್ರಾಮಿಕದ ಕಾರಣ ಭಾರತದಿಂದ ಬರುವ ವಿಮಾನಗಳ ಮೇಲೆ ಹೇರಿದ್ದ ನಿರ್ಬಂಧವನ್ನು ಕೆನಡಾ ತೆರವುಗೊಳಿಸಿದೆ. ನೇರ ಮತ್ತು ಬೇರೊಂದು ದೇಶದ ಮೂಲಕ ಕೆನಡಾ ವಿಮಾನ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ.
ಭಾರತದಿಂದ ನೇರ ಕೆನಡಾಗೆ ವಿಮಾನಯಾನ ಕೈಗೊಳ್ಳುವವರು ಪ್ರಯಾಣದ 18 ಗಂಟೆ ಒಳಗಾಗಿ ಕೋವಿಡ್ ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ. ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮೆಟ್ರೊ ನಿಲ್ದಾಣದ ಬಳಿ ಇರುವ 'ಜೆನೆಸ್ಟ್ರಿಂಗ್ಸ್ ಪ್ರಯೋಗಾಲಯ'ದಲ್ಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕೆನಡಾ ಸರ್ಕಾರ ತಿಳಿಸಿದೆ.
ಈಗಾಗಲೇ ಕೋವಿಡ್ ತಗುಲಿ ಗುಣಮುಖರಾದವರಾಗಿದ್ದರೆ ಭಾರತದ ಯಾವುದೇ ಅಧಿಕೃತ ಪ್ರಯೋಗಾಲಯದಿಂದ ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿ ಹೊಂದಿದ್ದರೆ ಸಾಕು ಎಂದು ಕೆನಡಾ ಹೇಳಿದೆ.
ಈ ನಿಯಮಗಳನ್ನು ಪಾಲಿಸದಿದ್ದರೆ ವಿಮಾನ ಪ್ರಯಾಣಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದೂ ಹೇಳಿದೆ. ಬೇರೊಂದು ದೇಶದ ಮೂಲಕ ಕೆನಡಾಗೆ ತೆರಳುವವರಾಗಿದ್ದರೆ, ಆ ದೇಶದಿಂದ ನೆಗೆಟಿವ್ ಪ್ರಮಾಣಪತ್ರ ತರಬೇಕು ಎಂದು ಹೇಳಲಾಗಿದೆ.