ನವದೆಹಲಿ : ಭೂಸೇನೆಗೆ 118 ಅರ್ಜುನ ಎಂಕೆ-1 ಯುದ್ಧ ಟ್ಯಾಂಕರ್ ನಿರ್ಮಿಸಲು ಆದೇಶ ನೀಡಿದ್ದ ಕೇಂದ್ರ ಸರ್ಕಾರ, ಈಗ ವಾಯುಪಡೆಗಾಗಿ 20 ಸಾವಿರ ಕೋಟಿ ರೂ. ಮೌಲ್ಯದ 56 ಮಧ್ಯಮ ಪ್ರಮಾಣದ ಸರಕು ಸಾಗಣೆ ವಿಮಾನ, “ಸಿ-295′ ಖರೀದಿಗೆ ಅನುಮತಿ ನೀಡಿದೆ.
ಸದ್ಯ ಇರುವ ಆಯವ್ರೋ-748 ವಿಮಾನಗಳ ಸ್ಥಾನವನ್ನು ಹೊಸ ವಿಮಾನಗಳು ತುಂಬಲಿವೆ. ಸ್ಪೇನ್ನ ಏರ್ಬಸ್ ಡಿಫೆನ್ಸ್ ಆಯಂಡ್ ಸ್ಪೇಸ್ ಜತೆಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರ ಅನ್ವಯ ಮೊದಲ ಹಂತದಲ್ಲಿ 16 ವಿಮಾನಗಳನ್ನು ಸ್ಪೇನ್ನಿಂದ ದೇಶಕ್ಕೆ ತರಲಾಗುತ್ತದೆ. ಉಳಿದ 40 ವಿಮಾನಗಳನ್ನು ಏರ್ಬಸ್ ಡಿಫೆನ್ಸ್ ಆಯಂಡ್ ಸ್ಪೇಸ್ ಹಾಗೂ ಟಾಟಾ ಅಡ್ವಾನ್ಸ್ ಸಿಸ್ಟಮ್ಸ್ ಲಿ.(ಟಿಎಎಸ್ಎಲ್) ಜಂಟಿಯಾಗಿ ದೇಶದಲ್ಲಿಯೇ 10 ವರ್ಷಗಳ ಅವಧಿಯಲ್ಲಿ ಸಿದ್ಧಪಡಿಸಲಿವೆ. ಖಾಸಗಿ ಕಂಪನಿಯೊಂದು ದೇಶದಲ್ಲಿಯೇ ಸೇನಾ ವಿಮಾನ ಅಭಿವೃದ್ಧಿಪಡಿಸುತ್ತಿರುವುದು ಇದೇ ಮೊದಲು ಎಂದು ರಕ್ಷಣಾ ಸಚಿವಾಲಯದ ವಕ್ತಾರ ಎ.ಭರತ್ ಭೂಷಣ್ ಬಾಬು ಟ್ವೀಟ್ ಮಾಡಿದ್ದಾರೆ.
ರತನ್ ಟಾಟಾ ಶ್ಲಾಘನೆ
ಒಪ್ಪಂದದ ಬಗ್ಗೆ ಟಾಟಾ ಟ್ರಸ್ಟ್ನ ಅಧ್ಯಕ್ಷ ರತನ್ ಟಾಟಾ ಸಂತಸ ವ್ಯಕ್ತಪಡಿಸಿದ್ದಾರೆ. “ದೇಶೀಯವಾಗಿಯೇ ಅಂತಾರಾಷ್ಟ್ರೀಯ ಗುಣಮಟ್ಟದ ಪೂರೈಕೆ ವ್ಯವಸ್ಥೆಯನ್ನು ನೀಡಲು ಈ ಒಪ್ಪಂದ ಸಹಕಾರಿಯಾಗಲಿದೆ. ಈ ಐತಿಹಾಸಿಕ ನಿರ್ಧಾರಕ್ಕೆ ರಕ್ಷಣಾ ಸಚಿವಾಲಯ ಮತ್ತು ಏರ್ಬಸ್ ಅನ್ನು ಟಾಟಾ ಟ್ರಸ್ಟ್ ಅಭಿನಂದಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಖರೀದಿಯೇನು?
– 56 “ಸಿ- 295 ವಿಮಾನಗಳು
20 ಸಾವಿರ ಕೋಟಿ ರೂ.- ಒಪ್ಪಂದದ ಮೌಲ್ಯ
ಯಾರ ಜತೆಗೆ?- ಸ್ಪೇನ್ನ ಏರ್ಬಸ್ ಡಿಫೆನ್ಸ್ ಆಯಂಡ್ ಸ್ಪೇಸ್
ಉಪಯೋಗ- ಸರಕು ಸಾಗಣೆ
5-10 ಟನ್- ವಿಮಾನದ ಸಾಮರ್ಥ್ಯ
16- ಮೊದಲ ಹಂತದಲ್ಲಿ ಸಿಗುವ ವಿಮಾನಗಳು
40- ಭಾರತದಲ್ಲೇ ನಿರ್ಮಾಣವಾಗಲಿರುವ ವಿಮಾನಗಳು
10 ವರ್ಷ- ದೇಶದಲ್ಲಿ ವಿಮಾನಗಳ ನಿರ್ಮಾಣ ಅವಧಿ