Publish Date: Wed, 06 Jun 2018 (09:18 IST)
Updated Date: Wed, 06 Jun 2018 (09:19 IST)
ಬೆಂಗಳೂರು: ಎರಡು ದಿನ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾಗ ಹೆಲಿಕಾಪ್ಟರ್ ಪ್ರಯಾಣಕ್ಕೆ 13 ಲಕ್ಷ ರೂ. ಖರ್ಚು ಮಾಡಿದ್ದರು ಎಂಬ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಮಾಜಿ ಸಿಎಂ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ನಾವು ವೆಚ್ಚ ಕಡಿವಾಣಕ್ಕೆ ಪ್ರಯತ್ನಿಸುತ್ತಿದ್ದೇವೆ. ವಿಶೇಷ ವಿಮಾನದಲ್ಲಿ ಪ್ರಯಾಣಿಸಲ್ಲ. ಆದರೆ ಹಿಂದಿದ್ದ ಮುಖ್ಯಮಂತ್ರಿಗಳು ತಮ್ಮ ಎರಡು ದಿನದ ಪ್ರಯಾಣಕ್ಕೆ 13 ಲಕ್ಷ ಬಿಲ್ ಹಾಕಿದ್ದರು.ಇದಕ್ಕೆ ಯಾರು ಹೊಣೆ ಎಂದು ಸಿಎಂ ಕುಮಾರಸ್ವಾಮಿ ಕಿಡಿ ಕಾರಿದ್ದರು.
ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಈ ಬಗ್ಗೆ ಮುಖ್ಯ ಕಾರ್ಯದರ್ಶಿಯವರನ್ನೇ ಕೇಳಿ. ನಾನು ರಾಜ್ಯಪಾಲರ ಮನವಿ ಮೇರೆಗೆ ಎರಡು ದಿನ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದೆ. ಈ ಸಂದರ್ಭದಲ್ಲಿ ಮಹಾಂತ ಶಿವಯೋಗಿ ಸ್ವಾಮೀಜಿ ಲಿಂಗೈಕ್ಯ ಕಾರ್ಯಕ್ರಮ ಮತ್ತು ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಹೋಗಿ ಬಂದಿದ್ದಕ್ಕೆ 13 ಲಕ್ಷ ಬಿಲ್ ಬಂದಿದೆ.
ನಾನು ಹೆಲಿಕಾಪ್ಟರ್ ಬಾಡಿಗೆಯಲ್ಲಿ ಕಮಿಷನ್ ಪಡೆದಿದ್ದೇನೆ ಎನ್ನುವಂತೆ ಮಾತನಾಡುವುದನ್ನು ಕುಮಾರಸ್ವಾಮಿ ಬಿಡಲಿ. ಅಪ್ಪ ಮಕ್ಕಳು ಸತ್ಯ ಹರಿಶ್ಚಂದ್ರರಂತೆ ಆಡುವುದನ್ನು ಬಿಡಲಿ. ಈ ಪ್ರಯಾಣದ ವೆಚ್ಚವನ್ನು ಸ್ವಂತ ಜೇಬಿನಿಂದ ಪಾವತಿಸಲು ಸಿದ್ಧನಿದ್ದೇನೆ. ಈ ಬಗ್ಗೆ ವೃಥಾ ಗೊಂದಲದ ಹೇಳಿಕೆ ನೀಡುವುದು ಬೇಡ ಎಂದು ಯಡಿಯೂರಪ್ಪ ಖಡಕ್ ಆಗಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.