ಕಿವ್ : ಉಕ್ರೇನ್ನಿಂದ ಸ್ವಾಯತ್ತೆ ಬಯಸುತ್ತಿರುವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧನಿದ್ದೇನೆ ಎಂದೂ ಜೆಲೆನ್ಸ್ಕಿ ತಿಳಿಸಿದ್ದು ಯುದ್ಧ ಅಂತ್ಯವಾಗುವ ಸಾಧ್ಯತೆಯಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
ಯುದ್ಧ ನಿಲ್ಲಿಸಬೇಕಾದರೆ ರಷ್ಯಾ 4 ಷರತ್ತನ್ನು ಉಕ್ರೇನ್ಗೆ ವಿಧಿಸಿತ್ತು. ಈ 4 ಷರತ್ತನ್ನು ಒಪ್ಪಿಕೊಳ್ಳುವವರೆಗೂ ಯುದ್ಧ ನಿಲ್ಲಿಸುವುದೇ ಇಲ್ಲ ಎಂದು ರಷ್ಯಾ ಸಂಧಾನ ಸಭೆಯಲ್ಲಿ ಖಡಕ್ ಆಗಿ ಹೇಳಿತ್ತು.
1. ನ್ಯಾಟೋ ಸೇರಬಾರದು
ಅಮೆರಿಕ ನೇತೃತ್ವದ 30 ಪಾಶ್ಚಾತ್ಯ ದೇಶಗಳ ನ್ಯಾಟೋ ಸಂಘಟನೆ ಸೇರಿದಂತೆ ಯಾವುದೇ ಗುಂಪುಗಳನ್ನು ಉಕ್ರೇನ್ ಸೇರಬಾರದು. ಉಕ್ರೇನ್ ತಟಸ್ಥವಾಗಿ ಉಳಿಯುವ ನಿರ್ಧಾರ ತೆಗೆದುಕೊಳ್ಳಬೇಕು. ಮುಂದೆ ಯಾವುದೇ ಕಾರಣಕ್ಕೂ ಹೊಸ ಸಂಘಟನೆಯನ್ನು ನಾನು ಸೇರುವುದಿಲ್ಲ ಎಂದು ಸಂವಿಧಾನಕ್ಕೆ ತಿದ್ದುಪಡಿ ತರಬೇಕು.
2. ಕೂಡಲೇ ಸೇನಾ ಕಾರ್ಯಾಚರಣೆ ನಿಲ್ಲಿಸಬೇಕು
ನಾವು ಉಕ್ರೇನ್ ಅನ್ನು ಸಂಪೂರ್ಣ ನಿಶ್ಶಸ್ತ್ರೀಕರಣ ಮಾಡುತ್ತಿದ್ದೇವೆ. ಒಂದು ವೇಳೆ ಉಕ್ರೇನ್ ತನ್ನ ಸೇನಾ ಕಾರ್ಯಚರಣೆ ಸ್ಥಗಿತಗೊಳಿಸಿದರೆ ನಾವು ಒಂದೇ ಒಂದು ಗುಂಡನ್ನೂ ಹಾರಿಸುವುದಿಲ್ಲ.
3. ರಾಜ್ಯಗಳಿಗೆ ಮಾನ್ಯತೆ ಬೇಕು
ಬಂಡುಕೋರರ ವಶದಲ್ಲಿರುವ ಪ್ರಾಂತ್ಯಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಸ್ವತಂತ್ರ್ಯ ರಾಜ್ಯಗಳೆಂದು ಘೋಷಿಸಿ ಅವುಗಳಿಗೆ ಮಾನ್ಯತೆ ನೀಡಬೇಕು.
4.ಕ್ರೆಮಿಯಾಕ್ಕೆ ಮಾನ್ಯತೆ
ಉಕ್ರೇನ್ ಮೇಲೆ ದಾಳಿ ನಡೆಸಿ 2014ರಲ್ಲಿ ವಶಪಡಿಸಿಕೊಂಡ ಕ್ರೆಮಿಯಾವನ್ನು ರಷ್ಯಾದ ಭಾಗವೆಂದು ಒಪ್ಪಬೇಕು. ಇವುಗಳಿಗೆ ಒಪ್ಪಿದರೆ ತಕ್ಷಣವೇ ನಾವು ಯುದ್ಧ ನಿಲ್ಲಿಸಲಿದ್ದೇವೆ.