Select Your Language

Notifications

webdunia
webdunia
webdunia
webdunia

ರಾಜ್ಯದ 1.66 ಲಕ್ಷ ಮಕ್ಕಳು ಶಾಲೆಯಿಂದ ಹೊರಕ್ಕೆ

ರಾಜ್ಯದ 1.66 ಲಕ್ಷ ಮಕ್ಕಳು ಶಾಲೆಯಿಂದ ಹೊರಕ್ಕೆ
ಬೆಂಗಳೂರು , ಗುರುವಾರ, 29 ಜುಲೈ 2021 (09:52 IST)
ಬೆಂಗಳೂರು (ಜು.29):  ರಾಜ್ಯದ ಗ್ರಾಮೀಣ ಭಾಗಗಳಲ್ಲಿ 6ರಿಂದ 18 ವರ್ಷದೊಳಗಿನ ಒಟ್ಟು 33,344 ಮತ್ತು ನಗರ ಪ್ರದೇಶಗಳಲ್ಲಿನ 8,718 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ, ಆದರೆ ಗ್ರಾಮೀಣ ಪ್ರದೇಶದ 3 ರಿಂದ 6 ವರ್ಷದೊಳಗೆ 1,26,245 ಮಕ್ಕಳು ಶಾಲೆಗೆ ಹೋಗುತ್ತಿಲ್ಲ’ ಎಂದು ಕೋರ್ಟ್ ಸಹಾಯಕರಾಗಿರುವ (ಅಮಿಕಸ್ ಕ್ಯೂರಿ) ಹಿರಿಯ ವಕೀಲ ಕೆ.ಎನ್. ಫಣೀಂದ್ರ ವರದಿ ಸಲ್ಲಿಸಿದ್ದಾರೆ.


ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ವಿಚಾರವಾಗಿ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಅಮಿಕಸ್ ಕ್ಯೂರಿ ಆಗಿರುವ ಅವರು, ಸಲ್ಲಿಸಿರುವ ವರದಿಯಲ್ಲಿ ಈ ವಿಷಯ ತಿಳಿಸಿದ್ದಾರೆ
 ‘ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಮನೆ ಮನೆ ಸರ್ವೇ ನಡೆಸಲಾಗಿದೆ. ನಗರ ಪ್ರದೇಶಗಳಲ್ಲಿನ 12,28,052 ಮಕ್ಕಳನ್ನು ಸಮೀಕ್ಷೆ ನಡೆಸಲಾಗಿದೆ. ಅದರಲ್ಲಿ 6ರಿಂದ 18 ವರ್ಷದೊಳಗಿನ 9,25,820 ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಇದೇ ವಯೋಮಾನದ 8,718 ಮಕ್ಕಳು ಶಾಲೆಗೆ ಹೋಗುತ್ತಿಲ್ಲ. 4,848 ಮಕ್ಕಳು ಶಾಲೆಗೆ ದಾಖಲಾತಿಯೇ ಮಾಡಿಕೊಂಡು ಬಂದಿಲ್ಲ. ಇನ್ನೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲಾಗಿಲ್ಲ. ಅದಕ್ಕೆ ಅಧಿಕಾರಿಗಳು ಕೋವಿಡ್ ಸಾಂಕ್ರಾಮಿಕ ಕಾರಣ ನೀಡಿದ್ದಾರೆ. ಬೆಂಗಳೂರಿನಲ್ಲಿ 25 ಲಕ್ಷ ಕುಟುಂಬಗಳು ವಾಸವಾಗಿವೆ. ಅವುಗಳ ಸಮೀಕ್ಷೆ ನಡೆಸಲು 4 ಸಾವಿರ ಸಿಬ್ಬಂದಿ ಬೇಕಾಗಿದ್ದಾರೆ ಎಂಬುದಾಗಿ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.
‘ಗ್ರಾಮೀಣ ಭಾಗದಲ್ಲಿ ಒಟ್ಟು 34,55,656 ಮಕ್ಕಳ ಸಮೀಕ್ಷೆ ನಡೆಸಿ ಗುರುತಿಸಲಾಗಿದೆ. ಅದರಲ್ಲಿ 6ರಿಂದ 18 ವರ್ಷದೊಳಗಿನ 32,14,257 ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಇದೇ ವಯೋಮಾನದ ಒಟ್ಟು 33,344 ಮಕ್ಕಳು ಶಾಲೆಗೆ ಹೋಗುತ್ತಿಲ್ಲ. 9,716 ಮಕ್ಕಳು ಶಾಲೆಗೆ ದಾಖಲಾತಿಯೇ ಪಡೆದಿಲ್ಲ. 3 ವರ್ಷಕ್ಕಿಂತ ಕಡಿಮೆ ವಯಸ್ಸಿನ 72,094 ಮಕ್ಕಳು ಶಾಲೆಗೆ ಹೋಗುತ್ತಿಲ್ಲ. 3 ರಿಂದ 6 ವರ್ಷದೊಳಗೆ 1,26,245 ಮಕ್ಕಳು ಶಾಲೆಗೆ ಹೋಗುತ್ತಿಲ್ಲ’ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಆ ವರದಿಯನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ, ಸರ್ವೇ ನಡೆಸುವ ಸಂಬಂಧ ಉತ್ತರಿಸುವಂತೆ ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿತು. ಹಾಗೆಯೇ, ಕೂಡಲೇ ಮನೆ ಮನೆ ಸರ್ವೇ ನಡೆಸುವಂತೆ ಬಿಬಿಎಂಪಿಗೆ ಸೂಚನೆ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸೂಚಿಸಿ ವಿಚಾರಣೆ ಮುಂದೂಡಿತು.
ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಲು ಮನೆ ಮನೆ ಸಮೀಕ್ಷೆ ನಡೆಸುವಂತೆ ಸರ್ಕಾರಕ್ಕೆ ಹೈಕೋರ್ಟ್ 2020ರ ಮಾ.16ರಂದು ಆದೇಶಿಸಿತ್ತು. ಅದರಂತೆ ಸಮೀಕ್ಷೆ ನಡೆಸಲಾಗಿತ್ತಾದರೂ ಅದಕ್ಕೆ ಅನುಸರಿಸಿದ ಮಾನದಂಡಗಳ ವಿವರಗಳು ತಿಳಿಸಿರಲಿಲ್ಲ. ಇದರಿಂದ ಸಮೀಕ್ಷೆಯ ವರದಿ ಹಾಗೂ ದಾಖಲೆಗಳ ಪರಿಶೀಲನೆಗಾಗಿ ಪ್ರಕರಣದ ಅಮಿಕಸ್ ಕ್ಯೂರಿ ಹಾಗೂ ಇತರ ವಕೀಲರೊಂದಿಗೆ ಸಭೆ ನಡೆಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ 2021ರ ಜೂ.23ರಂದು ನಿರ್ದೇಶಿಸಿತ್ತು.
ಅದರಂತೆ ರಾಜ್ಯ ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಅವರ ನೇತೃತ್ವದಲ್ಲಿ ಇದೇ ಜು.8ರಂದು ನಡೆದ ಸಭೆಯಲ್ಲಿ ಸಂಬಂಧಿಸಿದ ಎಲ್ಲ ವಕೀಲರು ಮತ್ತು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಸಮೀಕ್ಷೆ ಬಗ್ಗೆ ಅಧಿಕಾರಿಗಳು ವಿವರಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಂಪುಟಕ್ಕೆ ನೂತನ ಸಚಿವರು : ಆಯ್ಕೆ ಸೀಕ್ರೇಟ್ ಹೇಳಿದ ವಿಜಯೇಂದ್ರ