Select Your Language

Notifications

webdunia
webdunia
webdunia
webdunia

ಭರ್ಜರಿ ರಂಜನೆ ಕೊಡಲು ಬರುತ್ತಿದೆ ಸರಿಗಮಪ ಹೊಸ ಸೀಸನ್

ಭರ್ಜರಿ ರಂಜನೆ ಕೊಡಲು ಬರುತ್ತಿದೆ ಸರಿಗಮಪ ಹೊಸ ಸೀಸನ್
Bangalore , ಬುಧವಾರ, 22 ಫೆಬ್ರವರಿ 2017 (13:18 IST)
ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ, ಈವರೆಗೆ 12 ಸೀಸನ್‍ಗಳನ್ನು ಯಶಸ್ವಿಯಾಗಿ ಮುಗಿಸಿ ಇದೀಗ ಮತ್ತೊಂದು ಹೊಸ ಸೀಸನ್‍ಗೆ ತಯಾರಾಗುತ್ತಿದೆ. ಅದೇ ಸರಿಗಮಪ ಸೀಸನ್-13.  ಕಳೆದ 3 ವರ್ಷಗಳಲ್ಲಿ ತನ್ನ ವೀಕ್ಷಕರ ಮನರಂಜಿಸುವಲ್ಲಿ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೀಡುತ್ತಾ ಬಂದಿದ್ದು ಅಂಥಾ ಕಾರ್ಯಕ್ರಮಗಳಲ್ಲಿ ಸರಿಗಮಪ ಕೂಡ ಒಂದು.
 
ವೀಕೆಂಡ್ ವಿತ್ ರಮೇಶ್, ಡ್ರಾಮಾ ಜ್ಯೂನಿಯರ್ಸ್, ಕಾಮಿಡಿ ಕಿಲಾಡಿಗಳು ಇಂತಹ ಹಲವಾರು ಮನರಂಜನಾತ್ಮಕ ಶೋಗಳನ್ನು ವೀಕ್ಷಕರಿಗೆ ಕೊಡುತ್ತಾ ಬಂದಿರುವ ಜೀ ವಾಹಿನಿ ಸರಿಗಮಪ ಕಾರ್ಯಕ್ರಮದ ಮತ್ತೊಂದು ಸೀಸನ್ನನ್ನು ಈಗ ಸೀನಿಯರ್ಸ್‍ಗಳಿಗಾಗಿ ಶುರು ಮಾಡುತ್ತಿದೆ.
 
ತನ್ನ ಪ್ರತೀ ಕಾರ್ಯಕ್ರಮದಲ್ಲೂ ಒಂದೊಂದು ವೇದಿಕೆಯನ್ನ ಅವಕಾಶಕ್ಕಾಗಿ ಕಾಯುತ್ತಿದ್ದ ನೂರಾರು ಪ್ರತಿಭೆಗಳಿಗೆ ಕಲ್ಪಿಸಿ,  ಉತ್ತಮ ಕಲಾವಿದರನ್ನು ಜೀ ವಾಹಿನಿ ಕೊಡುಗೆಯಾಗಿ ನೀಡುತ್ತಾ ಬಂದಿದೆ. ಟಿ.ವಿ, ವಿದ್ಯುತ್ ಸೌಕರ್ಯಗಳಿಲ್ಲದಿರುವಂತಹ ಹಳ್ಳಿಗಳಿಂದಲೂ ಹಲವಾರು ಪ್ರತಿಭೆಗಳು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಕರ್ನಾಟಕದ ಮನೆ ಮಾತಾಗಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. 
 
ಕಳೆದ ಬಾರಿ ನಡೆದ ಡ್ರಾಮಾ ಜ್ಯೂನಿಯರ್ಸ್ ಕೇವಲ ಮಕ್ಕಳಿಗೆ ಮಾತ್ರವಲ್ಲದೆ ದೊಡ್ಡವರಿಗೂ ಒಂದು ಸ್ಫೂರ್ತಿಯಾದಂಥ ಕಾರ್ಯಕ್ರಮವಾಗಿದ್ದು, ಅತೀ ಹೆಚ್ಚು ವೀಕ್ಷಕರನ್ನು ಗಳಿಸಿದ ರಿಯಾಲಿಟಿ ಶೋ ಕೂಡ ಅದಾಗಿತ್ತು. ಈಗಾಗಲೇ ಕರ್ನಾಟಕದ 6 ಜಿಲ್ಲೆಗಳಲ್ಲಿ ನಡೆಸಿದ ಆಡಿಷನ್‍ನಲ್ಲಿ ಕೇವಲ ಕನ್ನಡಿಗರು ಮಾತ್ರವಲ್ಲದೇ ಭಾರತದ ಮೂಲೆ ಮೂಲೆಗಳಿಂದಲೂ ಅಧಿಕ ಸಂಖ್ಯೆಯ ಅನ್ಯ ಭಾಷಿಗರು  ಬಂದು ಭಾಗವಹಿಸಿದ್ದುದು ವಿಶೇಷವಾಗಿತ್ತು. 
 
ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಇದರಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡರು. ಈ ಆಡಿಷನ್ಸ್‍ನಲ್ಲಿ ಗ್ರಾಮೀಣ ಪ್ರದೇಶಗಳಿಂದ ಬಂದವರೇ ಹೆಚಾಗಿದ್ದುದು ಗಮನಾರ್ಹ ವಿಷಯವಾಗಿತ್ತು. ಇದರಲ್ಲಿ ಅದ್ಭುತವಾಗಿ ಹಾಡುವಂಥ  30 ಪ್ರತಿಭೆಗಳನ್ನ ಆಯ್ಕೆ ಮಾಡಲಾಗಿದ್ದು, ಈ ಮೂವತ್ತು ಪ್ರತಿಭೆಗಳಿಗೂ ಮೊದಲ ಎರಡು ಸಂಚಿಕೆಗಳಲ್ಲಿ ಮೆಗಾ ಆಡಿಷನ್ಸ್ ನಡೆಸಲಾಗುವುದು ಆದರಲ್ಲಿ ಕೇವಲ 15 ಟಾಪ್ ಗಾಯಕರು ಆಯ್ಕೆಯಾಗಿ, ಮುಂದಿನ ಸುತ್ತಿಗೆ ಅರ್ಹರಾಗಲಿದ್ದಾರೆ.
 
ಈ ಸರಿಗಮಪ ಸೀಸನ್-13 ಮೂಲಕ ಹೊಸ ಕನಸುಗಳನ್ನು ಹೊತ್ತ  ಹೊಸ ಮುಖಗಳು, ಹೊಸ ಪ್ರತಿಭೆಗಳು, ಹೊಸ ಹೊಸ ಹಾಡುಗಳ ಮೂಲಕ ಹೊಸ ರೀತಿಯಲ್ಲಿ ಪ್ರೇಕ್ಷಕರನ್ನು ಮತ್ತೊಮ್ಮೆ ರಂಜಿಸಲು ಬರುತ್ತಿದ್ದಾರೆ. ಇದೇ ಫೆಬ್ರವರಿ 25ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಈ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ. 
 
ಸರಿಗಮಪ ಸೀಸನ್ 12ರಲ್ಲಿ ಮುದ್ದು ಮಕ್ಕಳು ಕೊಟ್ಟ ಅದೇ ಮನರಂಜನೆಯನ್ನ ಕೊಡಲು ಸೀಸನ್-13ರಲ್ಲಿ ಸೀನಿಯರ್ಸ್ ಕೂಡಾ ತಯಾರಾಗಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ವಿಷಯ ಎಂದರೆ, ಕಳೆದ ಮೂರು ಸೀಸನ್‍ಗಳಲ್ಲಿಯೂ ತೀರ್ಪುಗಾರರಾಗಿರುವ ಗಾಯಕರಾದ ರಾಜೇಶ್ ಕೃಷ್ಣನ್ ಹಾಗೂ ವಿಜಯ್ ಪ್ರಕಾಶ್  ಮತ್ತು ಸಂಗೀತ ನಿರ್ದೇಶಕ 
ಅರ್ಜುನ್ ಜನ್ಯಾ ಅವರೇ ಇಲ್ಲೂ  ತೀರ್ಪುಗಾರರಾಗಿ ಮುಂದುವರಿಯಲಿದ್ದಾರೆ. ಅಲ್ಲದೆ ನಿರೂಪಕಿಯಾದ ಅನುಶ್ರೀ ಅವರೇ ಈ ಕಾರ್ಯಕ್ರಮವನ್ನು  ನಡೆಸಿಕೊಡಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಚ್ಚಿಬೀಳಿಸಲು ಬರುತ್ತಿದೆ ಹೊಸಬರ ಹಾರರ್ ’ಕೋಮಲಿ’