ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ಇದೇ ವಾರಂತ್ಯಕ್ಕೆ ಆರಂಭವಾಗುತ್ತಿದೆ. ಇದಕ್ಕೆ ಮೊದಲು ಕಿಚ್ಚ ಸುದೀಪ್ ಮತ್ತು ಕಲರ್ಸ್ ವಾಹಿನಿಯ ಮುಖ್ಯಸ್ಥರು ಇಂದು ಪತ್ರಿಕಾಗೋಷ್ಠಿ ನಡೆಸಿ ಈ ಬಾರಿಯ ಶೋ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದುವರೆಗೆ ಇನ್ನೋವಾ ಫಿಲಂ ಸಿಟಿಯಲ್ಲಿ ಬಿಗ್ ಬಾಸ್ ಮನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ದೊಡ್ಡ ಆಲದ ಮರ ಬಳಿಯಿರುವ ಮನೆಯೊಂದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಮನೆ ಇತರ ಭಾಷೆಯಲ್ಲಿ ಮೂಡಿಬರುವ ಬಿಗ್ ಬಾಸ್ ಮನೆಗಳಿಗಿಂತಲೂ ದೊಡ್ಡದು ಎನ್ನಲಾಗಿದೆ.
ಈ ಬಾರಿಯೂ ಬಿಗ್ ಬಾಸ್ ಗೆದ್ದವರಿಗೆ 50 ಲಕ್ಷ ರೂ. ನೀಡಲಾಗುತ್ತದೆ. ಸ್ಪರ್ಧಿಗಳನ್ನು ಅವರ ವ್ಯಕ್ತಿತ್ವ, ಹಿನ್ನೆಲೆ, ಜನಪ್ರಿಯತೆಯನ್ನು ಪರಿಗಣಿಸಿ ಶೋಗೆ ಆಯ್ಕೆ ಮಾಡಲಾಗುತ್ತದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಈ ಬಾರಿ ಜಿಯೋ ಸಿನಿಮಾದಲ್ಲೂ ಬಿಗ್ ಬಾಸ್ ನೇರಪ್ರಸಾರ ವೀಕ್ಷಿಸಬಹುದು.
ಇನ್ನು, ಇದು ಕಿಚ್ಚ ಸುದೀಪ್ ಪಾಲಿಗೆ 10 ನೇ ಸೀಸನ್ ನ ನಿರೂಪಣೆ. ಈ ಮೂಲಕ ಯಾವ ಭಾಷೆಯ ಸ್ಟಾರ್ ನಿರೂಪಕರಿಗಿಂತ ಹೆಚ್ಚು ಬಾರಿ ಬಿಗ್ ಬಾಸ್ ನಿರೂಪಣೆ ಮಾಡಿದ ದಾಖಲೆ ಮಾಡಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಇದುವರೆಗೆ ನಾನು ನಿರ್ವಹಿಸಿದ ಬಿಗ್ ಬಾಸ್ ಸೀಸನ್ ಗಳ ಪೈಕಿ ಸೀಸನ್ 6 ಬಳಿಕ ಸುಸ್ತಾಗಿದ್ದೆ. ಇನ್ನು ಸಾಕು ಆಂಕರಿಂಗ್, ನನ್ನಿಂದಾಗಲ್ಲ ಎಂದುಕೊಂಡಿದ್ದೆ. ಆದರೆ ಸೀಸನ್ 7 ನನಗೆ ಹೊಸ ಹುರುಪು ಕೊಟ್ಟಿತು. ಎಲ್ಲಿಯವರೆಗೆ ನನ್ನ ಮಾತುಗಳಿಂದ ಸ್ಪರ್ಧಿಗಳ ಜನಪ್ರಿಯತೆ, ವ್ಯಕ್ತಿತ್ವಕ್ಕೆ ಧಕ್ಕೆ ಬರುವುದಿಲ್ಲವೋ ಅಲ್ಲಿಯವರೆಗೆ ನಿರೂಪಣೆ ಮಾಡುತ್ತಿರುತ್ತೇನೆ ಎಂದಿದ್ದಾರೆ.